ADVERTISEMENT

‘ದೂಡಾ’ ನಿವೇಶನ ಅಕ್ರಮ: ಮತ್ತೆ 25 ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:43 IST
Last Updated 13 ಡಿಸೆಂಬರ್ 2013, 7:43 IST

ದಾವಣಗೆರೆ: ಇಲ್ಲಿನ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಜೆ.ಎಚ್‌.ಪಟೇಲ್‌ ಬಡಾವಣೆಯಲ್ಲಿ ಶ್ರೀಮಂತರು, ಈಗಾಗಲೇ ನಿವೇಶನ ಉಳ್ಳವರು ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ, ಶ್ರೀರಾಮ ಸೇನೆ ವತಿಯಿಂದ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಡಿ.3ರಂದು 25 ಮಂದಿ ವಿರುದ್ಧ ಸಲ್ಲಿಸಲಾಗಿದೆ.

ದೂರಿನ ಬಗ್ಗೆ ತನಿಖೆ ನಡೆಸಿ 2014ರ ಮಾರ್ಚ್‌ 29ರ ಒಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯವು ಲೋಕಾಯುಕ್ತ ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶಿಸಿದೆ ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಣಿಕಂಠ ಸರ್ಕಾರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶ್ರೀರಾಮ ಸೇನೆ ವತಿಯಿಂದ ಒಟ್ಟು ಐದು ಹಂತದಲ್ಲಿ ಈವರೆಗೆ ಒಟ್ಟು 120 ದೂರುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದಂತಾಗಿದೆ. ಈ ಪೈಕಿ 40 ಮಂದಿ ನಿವೇಶನ ವಾಪಸ್‌ ಮಾಡಿದ್ದಾರೆ. ಪ್ರಾಮಾಣಿಕವಾಗಿ ನಿವೇಶನ ಪಡೆದವರು ಯಾಕೆ ವಾಪಸ್‌ ಮಾಡುತ್ತಿದ್ದರು. ಇದರಿಂದ ನಮಗೆ ಜಯ ದೊರೆತಂತಾಗಿದೆ. ಮುಂದಿನ ಕಂತಿನಲ್ಲಿ ಮತ್ತಷ್ಟು ದೂರುಗಳನ್ನು ನೀಡಲಾಗುವುದು. ಅರ್ಹರಿಗೆ ಸರ್ಕಾರದ ನಿವೇಶನ ದೊರೆಯಬೇಕು. ಪ್ರಭಾವಿಗಳು ಪ್ರಭಾವ ಬಳಸಿ ನಿವೇಶನ ಪಡೆಯುವುದಕ್ಕೆ ಕಡಿವಾಣ ಹಾಕಬೇಕು ಎಂಬುದು ನಮ್ಮ ಉದ್ದೇಶ’ ಎಂದು ಹೇಳಿದರು.

‘ಒಂದೇ ಮನೆಯಲ್ಲಿ ಹಲವರು, ಒಂದೇ ಡೋರ್ ನಂಬರ್‌ ನೀಡಿ ದಂಪತಿ ನಿವೇಶನ ಪಡೆದಿರುವ ಪ್ರಕರಣಗಳಿವೆ. ಸಹಿಯನ್ನೇ ಮಾಡದಿರುವ ಅರ್ಜಿಗೂ ನಿವೇಶನ ನೀಡುವ ಔದಾರ್ಯವನ್ನು ದೂಡಾ ತೋರಿದೆ. ಇದರ ಹಿಂದೆ ಭಾರಿ ಅಕ್ರಮ ನಡೆಸಿದೆ. ಈ ವಿರುದ್ಧ ಶ್ರೀರಾಮ ಸೇನೆ ಕಾನೂನು ಹೋರಾಟ ಮುಂದುವರಿಸಲಿದೆ’  ಎಂದರು.

ಇನ್‌ಸ್ಪೆಕ್ಟರ್‌ ವಿರುದ್ಧ ದೂರು:  ಈಗ ಗದಗದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಹರಪನಹಳ್ಳಿಯ ಕರಿಬಸವನಗೌಡ ಎಂಬವರು, ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರು ದಾಖಲಿಸಲು ದಾಖಲೆ ಸಮೇತ ನೋಟಿಸ್‌ ಕಳುಹಿಸಿದ್ದೆವು.

ಇದಕ್ಕೆ ಪೊಲೀಸ್‌ ಮಹಾನಿರ್ದೇಶಕರು ದೂರು ದಾಖಲಿಸಲು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ನ್ಯಾಯಾಲಯವು, ಈ ಬಗ್ಗೆ ತನಿಖೆ ನಡೆಸಿ 2014ರ ಮಾರ್ಚ್‌ 29ರ ಒಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಆರೋಪಿ ಇನ್‌ಸ್ಪೆಕ್ಟರ್‌ ಅನ್ನು ಅಮಾನತಿನಲ್ಲಿಟ್ಟು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇದೇ 16ರಂದು ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ವಕೀಲ ಪಿ.ವೈ.ಹಾದಿಮನಿ, ಮುಖಂಡರಾದ ಆನಂದ ಜ್ಯೋತಿ, ಸಂದೀಪ್‌ ಖಟಾವ್ಕರ್‌, ಸಿರಿ, ನಾಗರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.