ADVERTISEMENT

‘ಸೋನಿಯಾ ಹೋಗಿದ್ದು ಚಿಕಿತ್ಸೆಗಲ್ಲ; ಹಣಕ್ಕೆ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:20 IST
Last Updated 24 ಸೆಪ್ಟೆಂಬರ್ 2013, 5:20 IST

ದಾವಣಗೆರೆ: ‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈಚೆಗೆ ಅಮೆರಿಕಕ್ಕೆ ಹೋಗಿದ್ದು ಚಿಕಿತ್ಸೆಗಲ್ಲ; ರೂ.  4 ಸಾವಿರ ಕೋಟಿ ವಿಮಾನ ಖರೀದಿ ವ್ಯಾಪಾರ ಕುದುರಿಸಲು, ಚುನಾವಣೆಗೆ ಹಣ ಮಾಡಲು’ ಎಂದು ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಾಡಾಳ್‌ ವಿರೂಪಾಕ್ಷಪ್ಪ ಗಂಭೀರ ಆರೋಪ ಮಾಡಿದರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಸೋಮವಾರ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಸೋನಿಯಾ ಗಾಂಧಿ ಅವರು ಚುನಾವಣೆಗೆ ಹಣ ಸಂಗ್ರಹಿಸಲು ವಿಮಾನ ಹಗರಣ ನಡೆಸಿದ್ದಾರೆ. ಕಳಪೆ ಶಸ್ರ್‌್ತಾಸ್ತ್ರಗಳನ್ನು ಖರೀದಿಸಿ ನಮ್ಮ ಸೈನಿಕರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಪುತ್ರ ರಾಹುಲ್‌ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು ಎಂಬುದು ಸೋನಿಯಾ ಕನಸು. ರಾಹುಲ್‌ ಗಾಂಧಿ ಎಲ್ಲಿ? ನರೇಂದ್ರ ಮೋದಿ ಎಲ್ಲಿ? ರಾಹುಲ್‌ ಗಾಂಧಿ ಪ್ರಧಾನಿ ಆಗುವುದನ್ನು ಜನ ಒಪ್ಪುವುದಿಲ್ಲ. ಹೀಗಾಗಿ, ಮೋದಿ ಅವರನ್ನು ಪ್ರಧಾನಿ ಮಾಡಲು ಹೋರಾಟ ನಡೆಸಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು 24 ಗಂಟೆ ಕೆಲಸ ಮಾಡುತ್ತೇನೆ. ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಮಾತ್ರವಷ್ಟೇ ದೇಶ ಅಭಿವೃದ್ಧಿ ಕಂಡಿದೆ. ಸ್ವಾತಂತ್ರ್ಯ ಬಂದ ನಂತರ
ಯಾವುದೇ ಸರ್ಕಾರವೂ ಮಾಡದಷ್ಟು ಅಭಿವೃದ್ಧಿಯನ್ನು ಯಡಿಯೂರಪ್ಪ ಮಾಡಿದ್ದಾರೆ. ಹೀಗಾಗಿ, ಕೆಜೆಪಿ ಬೆಂಬಲಿಸಬೇಕು ಎಂದು ಕೋರಿದರು.

ಸುವರ್ಣಯುಗ
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಸುವರ್ಣ ಯುಗ. ಆದರೆ ಇಂದು? ಶಾಸಕರಿಗೆ ಬಿಎಸ್‌ವೈ ಅಭಿವೃದ್ಧಿ ಕೆಲಸಕ್ಕೆ ಕೋಟಿ ಕೋಟಿ ಕೊಡುತ್ತಿದ್ದರು. ಕೋಟಿಗೆ ಲೆಕ್ಕವೇ ಇರಲಿಲ್ಲ. ಆದರೆ, ಇಂದು ಕುಡಿಯುವ ನೀರು, ರಸ್ತೆ ಕಾಮಗಾರಿಗೂ ಹಣ ಬಂದಿಲ್ಲ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯವಷ್ಟೇ ಸರ್ಕಾರದ ಸಾಧನೆ. ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹಳಸಲು ಹಾಲನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಇದೇ ಸರ್ಕಾರದ ಸಾಧನೆಯಾಗಿದೆ. ಸಿದ್ದರಾಮಯ್ಯ ಪ್ರಚಾರಕ್ಕೋಸ್ಕರ ಮುಖ್ಯಮಂತ್ರಿಯಾಗಿದ್ದಾರೆ; ನಾಲ್ಕು ತಿಂಗಳ ಸಾಧನೆ ಶೂನ್ಯ’ ಎಂದು ಟೀಕಿಸಿದರು.

ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿಲ್ಲ. ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ತಾಲ್ಲೂಕುಗಳಲ್ಲಿ ಬೋರ್ಡ್‌ ಹಾಕಬೇಕಾದ ಸ್ಥಿತಿ ಇದೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಶಾಸಕ, ಸಚಿವರ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಮುಖ್ಯಮಂತ್ರ ಗಾದಿಯಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಅವರಗೆ ನೈತಿಕ ಹಕ್ಕಿಲ್ಲ ಎಂದರು.

ಮಾಜಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ದೇಶ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಜನರು ಚಿಂತಿಸಬೇಕಿದೆ. ಈ ಹೊಸ ವಿಚಾರಧಾರೆ ದಾವಣಗೆರೆಯಿಂದಲೇ ಆರಂಭವಾಗಬೇಕು. ಕೆಜೆಪಿ ಬೆಂಬಲಿಸಬೇಕು.

ಕಾಂಗ್ರೆಸ್‌ನ ಹುಸಿ ಭರವಸೆಗಳನ್ನು ನಂಬಿ ಜನರು ಮೋಸ ಹೋಗಬಾರದು. ಬಿಜೆಪಿ–ಕೆಜೆಪಿ ಇಬ್ಭಾಗವಾಗಿದ್ದರಿಂದ ಕಾಂಗ್ರೆಸ್‌ ಪ್ರಯೋಜನ ಪಡೆಯಿತು; ಜನರನ್ನು ದಾರಿ ತಪ್ಪಿಸಿದರು. ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಆಡಳಿತಕ್ಕೂ– ಈಗಿನ ಕಾಂಗ್ರೆಸ್‌ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಗುರುತಿಸಬೇಕು ಎಂದು ಕೋರಿದರು.

ಮಾಜಿ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ದಾವಣಗೆರೆ, ಚಿತ್ರದುರ್ಗದಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದರು.

ಇದೇ ವೇಳೆ, ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಪ್ರೊ.ಎನ್‌.ಲಿಂಗಣ್ಣ ಅವರನ್ನು ಘೋಷಿಸಲಾಯಿತು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿದರು. ಮಾಜಿ ಶಾಸಕ ಡಾ.ಡಿ.ಬಿ.ಗಂಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಸಿ.ಮಂಜುಳಾ, ಮುಖಂಡರಾದ ಬಿ.ಎಸ್‌.ಜಗದೀಶ್‌, ಎನ್‌.ಕೊಟ್ರೇಶ್‌, ವೀರಭದ್ರಸ್ವಾಮಿ, ಕೊಟ್ರೇಶ್‌್ ನಾಯ್ಕ, ಬಿ.ಎಂ.ಷಣ್ಮುಖಯ್ಯ, ಮಂಜನಾಯ್ಕ, ಕೆ.ಪಿ.ಕಲಿಂಗಪ್ಪ, ಅಮೀರಾಬಾನು, ರಾಜೇಶ್ವರಿ ಆಲೂರು, ಸೈಯದ್‌ ಷಾಹಿನ್‌, ಪರಶುರಾಮ ನಾಯ್ಕ, ಕಡ್ಲೆಬಾಳು ಬಸವರಾಜ್‌ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಸಂಚಾಲಕ ಬಿ.ಎಸ್‌.ಜಗದೀಶ್‌ ಸ್ವಾಗತಿಸಿದರು. ಸಹ ಸಂಚಾಲಕ ಕೆ.ಹೇಮಂತಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಯಡಿಯೂರಪ್ಪ ಅವರನ್ನು ಜಯದೇವ ವೃತ್ತದಿಂದ ಸಮಾರಂಭ ಸ್ಥಳಕ್ಕೆ ಬೈಕ್‌ ರ್‍ಯಾಲಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಸಮಾರಂಭದಲ್ಲಿ ಕಂಡಿದ್ದು....
-ಸಭಾಂಗಣ ಕಿಕ್ಕಿರಿದು ತುಂಬಿ ಹೋಗಿತ್ತು. ಆಸನಗಳಿಲ್ಲದೇ ಕಾರ್ಯಕರ್ತರು ನೆಲದ ಮೇಲೆಯೇ ಕುಳಿತಿದ್ದರು; ನೂರಾರು ಮಂದಿ ನಿಂತಿದ್ದರು
-ವೇದಿಕೆ ಮೇಲೆ ನೂರಕ್ಕೂ ಹೆಚ್ಚು ಮಂದಿ ಇದ್ದರು; ಇದಕ್ಕೆ ಕೆಲ ಕಾರ್ಯಕರ್ತರೇ ಆಕ್ಷೇಪ ವ್ಯಕ್ತಪಡಿಸಿದರು
-ಮಹಿಳೆಯೊಬ್ಬರು ಯಡಿಯೂರಪ್ಪಗೆ ಆರತಿ ಎತ್ತಿದರು.
-ಮಾಜಿ ಶಾಸಕ ಬಿ.ಪಿ.ಹರೀಶ್‌ ಗೈರು ಹಾಜರಿ ಎದ್ದುಕಂಡಿತು
-ಮುಖಂಡರೆಲ್ಲರೂ ನರೇಂದ್ರ ಮೋದಿ ಜಪ ಮಾಡಿದರು
-‘ನೀವ್‌ ಬಿದ್ರೆ ಪರವಾಗಿಲ್ಲ; ಕ್ಯಾಮೆರಾಕ್ಕೆ ಏನಾದರೂ ಆದೀತು’ ಎಂದು ಯಡಿಯೂರಪ್ಪ ಛಾಯಾಗ್ರಾಹಕರೊಬ್ಬರಿಗೆ ಹೇಳಿದಾಗ ಸಭಾಂಗಣದಲ್ಲಿ ನಗೆಯ ಅಲೆ!

ಸಿದ್ದೇಶ್ವರ್‌ಗೆ ಯಡಿಯೂರಪ್ಪ ಆಮಂತ್ರಣ
ಕೆಜೆಪಿಗೆ ಬರುವಂತೆ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರಿಗೆ ಯಡಿಯೂರಪ್ಪ ಬಹಿರಂಗ ಆಮಂತ್ರಣ ನೀಡಿದರು.
‘ಸಿದ್ದೇಶಣ್ಣನಿಗೆ ಕಾರ್ಯಕರ್ತರು ಕಿವಿಮಾತು ಹೇಳಬೇಕು. ಹಣ, ಇನ್ನ್ಯಾವುದೋ ಬಲದಿಂದ ಗೆಲ್ಲಲಾಗುವುದಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಕೆಜೆಪಿ ಪರವಾಗಿ ಸಿದ್ದೇಶ್‌ ಚುನಾವಣೆಯಲ್ಲಿ ನಿಲ್ಲಲಿ. ಹಣಕ್ಕಾಗಿ ಯೋಚಿಸುವುದು ಬೇಡ ಕಾರ್ಯಕರ್ತರಿಂದ ಸಂಗ್ರಹಿಸೋಣ’ ಎಂದು ಹೇಳಿದರು.

‘ಬಿಜೆಪಿ–ಕೆಜೆಪಿ ಒಟ್ಟಾಗಿ ನಿಂತರೆ ಒಂದು ಲಕ್ಷ ಮತಗಳ ಅಂತರದಿಂದ ಸಿದ್ದೇಶಣ್ಣ ಗೆಲ್ಲಬಹುದು. ಇದಕ್ಕೆ ಕಾರ್ಯಕರ್ತರು ಸಹಕರಿಸಬೇಕು’ ಎಂದರು.

ಸಿದ್ದೇಶ್ವರ್‌ಗೆ ಕೆಜೆಪಿ ಟಿಕೆಟ್‌ !
ರಾಜ್ಯದಲ್ಲಿ ಬಿಜೆಪಿ–ಕೆಜೆಪಿ ಹೊಂದಾಣಿಕೆಯಾದರೆ ದಾವಣಗೆರೆ ಕ್ಷೇತ್ರವನ್ನು ಕೆಜೆಪಿ ಕೇಳಲಿದೆ. ಈ ಕ್ಷೇತ್ರ ಕೆಜೆಪಿಗೆ ದೊರೆತರೆ ಹಾಲಿ ಸಂಸತ್‌ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರಿಗೆ ನೀಡಲಾಗುವುದು. ಅವರು ಬಿಜೆಪಿಯಲ್ಲೇ ಉಳಿದರೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.