ADVERTISEMENT

ಮಳೆಯಿಂದ ₹21.92 ಲಕ್ಷ ಹಾನಿ: ನೆಲಕ್ಕೆ ಉರುಳಿದ ಬಾಳ, ಅಡಿಕೆ ಮರಗಳು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 14:25 IST
Last Updated 19 ಏಪ್ರಿಲ್ 2020, 14:25 IST
ದಾವಣಗೆರೆ ತಾಲ್ಲೂಕಿನ ಹೊನ್ನೆನಾಯಕನಹಳ್ಳಿಯ ರೈತ ದೇವೇಂದ್ರಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮಳೆಗೆ ನಾಶವಾಗಿರುವುದು.
ದಾವಣಗೆರೆ ತಾಲ್ಲೂಕಿನ ಹೊನ್ನೆನಾಯಕನಹಳ್ಳಿಯ ರೈತ ದೇವೇಂದ್ರಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮಳೆಗೆ ನಾಶವಾಗಿರುವುದು.   

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ರಾತ್ರಿ 2.56 ಮಿಲಿ ಮೀಟರ್ ಸರಾಸರಿ ಮಳೆಯಾಗಿದ್ದು, ಗಾಳಿ–ಮಳೆಯಿಂದಾಗಿ ಒಟ್ಟಾರೆ ₹21.92 ಲಕ್ಷ ನಷ್ಟ ಸಂಭವಿಸಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 12 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ₹40 ಸಾವಿರ ನಷ್ಟ ಸಂಭವಿಸಿದ್ದು, 6.24 ಎಕರೆ ಬಾಳೆ, 3.05 ಎಕರೆ ಅಡಿಕೆ ಸೇರಿ 9.29 ಎಕರೆ ಬೆಳೆ ಹಾನಿಯಾಗಿದ್ದು, ಅಂದಾಜು ₹6.80 ಲಕ್ಷ ನಷ್ಟ ಸಂಭವಿಸಿದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 21 ಪಕ್ಕಾ ಮನೆ, 2 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹1.17 ಲಕ್ಷ ನಷ್ಟವಾಗಿದೆ. 60 ಎಕರೆ ಭತ್ತ, 23 ಎಕರೆ ಅಡಿಕೆ, 5 ಎಕರೆಯಲ್ಲಿ ಪಪ್ಪಾಯಿ ಸೇರಿ ಒಟ್ಟು 88 ಎಕರೆ ಬೆಳೆ ಹಾನಿಯಾಗಿದ್ದು, ಅಂದಾಜು ₹8 ಲಕ್ಷ ನಷ್ಟ ಸಂಭವಿಸಿದೆ.

ADVERTISEMENT

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 5 ಪಕ್ಕಾ ಮನೆಗಳು ಭಾಗಶಃ ಹಾನಿಯಾಗಿದ್ದು, ₹1 ಲಕ್ಷ ನಷ್ಟ ಸಂಭವಿಸಿದ್ದು, 7 ಎಕರೆಯಲ್ಲಿ ಅಡಿಕೆ ನಾಶವಾಗಿದ್ದು, ₹ 3.80 ಲಕ್ಷ ನಷ್ಟ ಸಂಭವಿಸಿದೆ.

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ, 2 ಕಚ್ಚಾ ಮನೆಗಳು ಭಾಗಶ: ಹಾನಿಯಾಗಿದ್ದು, ಅಂದಾಜು ₹1.15 ಲಕ್ಷ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ ₹21.92 ಲಕ್ಷ ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ಸಾವಿರ ಬಾಳೆಗೊನೆ ನಾಶ
ದಾವಣಗೆರೆ ತಾಲ್ಲೂಕು ಹನಗೋಡು ಹೋಬಳಿಯ ಹೊನ್ನನಾಯಕನಹಳ್ಳಿಯಲ್ಲಿ 3 ಎಕರೆಯಲ್ಲಿ ಬೆಳೆದಿದ್ದ ಒಂದು ಸಾವಿರ ಬಾಳೆಗೊನೆ ಹಾಗೂ 50 ಅಡಿಕೆ ಮರಗಳು ಗಾಳಿ ಮಳೆಗೆ ನೆಲಕ್ಕುರುಳಿವೆ.

‘₹1.50 ಲಕ್ಷ ಖರ್ಚು ಮಾಡಿ ಬಾಳೆಗಿಡ ನೆಟ್ಟಿದ್ದೆ. ಕೊಳವೆಬಾವಿ ಕೊರೆದು ನೀರು ಹರಿಸಿ ಕಷ್ಟಪಟ್ಟು ಬೆಳೆಸಿದ್ದೆ. 20 ದಿವಸವಾದ ನಂತರ ಬಾಳೆ ಗೊನೆಗಳನ್ನು ಕೊಯ್ಯಲು ತೀರ್ಮಾನಿಸಿದ್ದೆ. ಆದರೆ ಮಳೆ ಎಲ್ಲವನ್ನು ನಾಶ ಮಾಡಿತು. ದಿಕ್ಕೆ ತೋಚದಂತಾಗಿದೆ’ ಎಂದು ಗ್ರಾಮದ ರೈತ ದೇವೇಂದ್ರಪ್ಪ ಅಳಲು ತೋಡಿಕೊಂಡರು.

ಸ್ಥಳಕ್ಕೆ ತೋಟಗಾರಿಕೆ ಉಪ ನಿರ್ದೇಶಕ ಲಕ್ಷ್ಮಿಕಾಂತ್ ಬೋಮನ್ನರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕುವಾರು ಮಳೆ ವಿವರ (ಮಿ.ಮೀಗಳಲ್ಲಿ)

ದಾವಣಗೆರೆ: 1.24

ಹರಿಹರ:0.95

ಹೊನ್ನಾಳಿ:8.07

ಚನ್ನಗಿರಿ: 2.58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.