ADVERTISEMENT

ದಾವಣಗೆರೆ: ಇಬ್ಬರಿಂದ 14 ಮಂದಿಗೆ ಕೊರೊನಾ ವೈರಸ್‌ ಸೋಂಕು

ಕೊರೊನಾ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2020, 8:12 IST
Last Updated 8 ಮೇ 2020, 8:12 IST
   

ದಾವಣಗೆರೆ: ನಗರದಲ್ಲಿ ಮತ್ತೆ ಆರು ಮಕ್ಕಳು ಸೇರಿ 14 ಜನರಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದ್ದು, ಕೋವಿಡ್‌ ರೋಗ ಅಟ್ಟಹಾಸ ಮೆರೆಯುತ್ತಿರುವುದು ನಾಗರಿಕರ ಆತಂಕವನ್ನು ಹೆಚ್ಚಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 61 ಜನರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.

ಕೋವಿಡ್‌–19 ರೋಗದಿಂದ ಗುರುವಾರ ಮಹಿಳೆ ಮೃತಪಟ್ಟಿರುವುದೂ ಸೇರಿ ನಗರದಲ್ಲಿ ಇದುವರೆಗೆ ಒಟ್ಟು ನಾಲ್ವರು ಈ ರೋಗದಿಂದ ಅಸುನೀಗಿದ್ದಾರೆ. ಇಬ್ಬರು ರೋಗಿಗಳು ಮಾತ್ರ ಗುಣಮುಖರಾಗಿದ್ದಾರೆ. ಶುಕ್ರವಾರ ವರದಿಯಾದ ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ಒಟ್ಟು 55 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ.

ಬಾಷಾನಗರದ ಸ್ಟಾಫ್‌ ನರ್ಸ್‌ನ (ಪಿ–533) ಸಂಪರ್ಕದಿಂದ 10 ಜನರಿಗೆ ಹಾಗೂ ಜಾಲಿನಗರದ ಮೃತ ವೃದ್ಧ (ಪಿ–556)ನಿಂದ ನಾಲ್ವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ 18 ವರ್ಷದ ಯುವತಿ (ಪಿ–728), ಆರು ವರ್ಷದ ಬಾಲಕ (ಪಿ–729), ಒಂಬತ್ತು ವರ್ಷದ ಬಾಲಕ (ಪಿ–730), 36 ವರ್ಷದ ಯುವಕ (ಪಿ–731), 32 ವರ್ಷದ ಮಹಿಳೆ (ಪಿ–732), ಮೂರು ವರ್ಷದ ಬಾಲಕಿ (ಪಿ–733), 48 ವರ್ಷದ ಪುರುಷ (ಪಿ–734), 13 ವರ್ಷದ ಬಾಲಕಿ (ಪಿ–735), ಎಂಟು ವರ್ಷದ ಬಾಲಕ (ಪಿ–736), 38 ವರ್ಷದ ಮಹಿಳೆಗೆ (ಪಿ–737) ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ ಇದುವರೆಗೆ ಒಟ್ಟು 30 ಜನರಿಗೆ ಸೋಂಕು ಹರಡಿಸಿದೆ.

ಜಾಲಿನಗರದ ವೃದ್ಧನ ಸಂಪರ್ಕದಿಂದ 10 ವರ್ಷದ ಬಾಲಕ (ಪಿ–724), 20 ವರ್ಷದ ಯುವಕ (ಪಿ–725), 18 ವರ್ಷದ ಯುವತಿ (ಪಿ–726), 27 ವರ್ಷದ ಮಹಿಳೆಗೆ (ಪಿ–727) ಕೊರೊನಾ ಸೋಂಕು ತಗುಲಿದೆ. ಈ ವೃದ್ಧನಿಂದ ಇದುವರೆಗೆ ಒಟ್ಟು 16 ಜನರಿಗೆ ಸೋಂಕು ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.