ADVERTISEMENT

ದಾವಣಗೆರೆ ಜಿಲ್ಲೆ | ಐದು ತಿಂಗಳಲ್ಲಿ 144 ಎಚ್‌ಐವಿ ಸೋಂಕಿತರು ಪತ್ತೆ

ಎರಡು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಲ್ಲಿ ಮಾತ್ರ ಆ್ಯಂಟಿ ರಿಟ್ರಿವಲ್‌ ಥೆರಪಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:45 IST
Last Updated 17 ಸೆಪ್ಟೆಂಬರ್ 2019, 19:45 IST
   

ದಾವಣಗೆರೆ: ಎಚ್‌ಐವಿ ‍ಪೀಡಿತರ ಸಂಖ್ಯೆ ಒಂದು ದಶಕದಿಂದ ಇಳಿಕೆಯಾಗುತ್ತಾ ಬಂದಿದ್ದರೂ ಪೂರ್ಣ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಐದು ತಿಂಗಳುಗಳಲ್ಲಿ 144 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ.

2007–08ರಲ್ಲಿ 1,700 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಕಡಿಮೆಯಾಗುತ್ತಾ 2012–13ರ ಹೊತ್ತಿಗೆ ಸಾವಿರದ ಗಡಿಗೆ ಬಂದು ನಿಂತಿತ್ತು. ಮತ್ತೆ ಐದು ವರ್ಷಗಳಲ್ಲಿ 500ರ ಒಳಗೆ ಬಂದಿತ್ತು. 2017–18ರಲ್ಲಿ 434 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿತ್ತು. ಆದರೆ, ಅಲ್ಲಿಂದ ಅದೇ ವೇಗದಲ್ಲಿ ಇಳಿಕೆಯಾಗದೇ ಸ್ಥಗಿತಗೊಂಡಿದೆ. 2018–19ರಲ್ಲಿ 445 ಮಂದಿಯಲ್ಲಿ ಕಂಡು ಬಂದಿತ್ತು. ಈ ಸಾಲಿನಲ್ಲಿ 144 ಮಂದಿಯಲ್ಲಿ ಕಂಡು ಬಂದಿದ್ದು, 2020ರ ಮಾರ್ಚ್‌ ಕೊನೆಯ ಹೊತ್ತಿಗೆ 400 ತಲುಪಬಹುದು ಎಂದು ಜಿಲ್ಲಾ ಎಚ್‌ಐವಿ/ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಕೆ.ಎಚ್‌. ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ದಾವಣಗೆರೆ, ಚನ್ನಗಿರಿಯಲ್ಲಿ ಚಿಕಿತ್ಸೆ: ಎಚ್‌ಐವಿ ಸೋಂಕು ಬಂದವರನ್ನು ಅದರಿಂದ ಮುಕ್ತಗೊಳಿಸುವ

ADVERTISEMENT
ಡಾ. ಕೆ.ಎಚ್‌. ಗಂಗಾಧರ್‌

ಔಷಧ ಇನ್ನೂ ಪತ್ತೆಯಾಗಿಲ್ಲ. ಆದರೆ ಅದನ್ನು ನಿಯಂತ್ರಿಸುವ ಥೆರಪಿ ಮತ್ತು ಔಷಧ ಇದೆ. ಜಿಲ್ಲೆಯಲ್ಲಿ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ಚನ್ನಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರ ಆ್ಯಂಟಿ ರಿಟ್ರಿವಲ್‌ ಥೆರಪಿ (ಎಆರ್‌ಟಿ) ನೀಡಲಾಗುತ್ತದೆ.

ಒಮ್ಮೆ ಥೆರಪಿ ಪಡೆದ ಬಳಿಕ ಪ್ರತಿ ತಿಂಗಳು ಆಯಾ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪಡೆಯಬಹುದು. ಸರಿಯಾದ ಆಹಾರ ಪದ್ಧತಿ, ನಿತ್ಯ ವ್ಯಾಯಾಮ ಮಾಡಿಕೊಂಡು ಉತ್ತಮ ಜೀವನ ಶೈಲಿ ಹೊಂದಿದ್ದರೆ ಎಚ್‌ಐವಿ ಇದ್ದರೂ ಏಡ್ಸ್‌ ಆಗಿ ಸುಲಭದಲ್ಲಿ ಪರಿವರ್ತನೆಗೊಳ್ಳುವುದಿಲ್ಲ. 10 ವರ್ಷ ಕಳೆದರೂ ಏಡ್ಸ್‌ ಆಗಿ ಪರಿವರ್ತನೆಗೊಳ್ಳದಿರಬಹುದು ಎನ್ನುತ್ತಾರೆ ಡಾ. ಗಂಗಾಧರ್‌.

ದೂರವಿಡಬೇಡಿ: ಎಚ್‌ಐವಿ ಸೋಂಕಿತರನ್ನು ಸಮಾಜ ದೂರ ಇಡಬಾರದು. ಸೋಂಕು ಇರುವುದನ್ನು ತನ್ನ ಸಂಗಾತಿಗೆ ತಿಳಿಸಲೇ ಬೇಕು. ಅಲ್ಲದೇ ಸಂಗಾತಿಯನ್ನು ಅಂದರೆ ಪತಿಯಲ್ಲಿ ಸೋಂಕು ಇದ್ದರೆ ಪತ್ನಿಯನ್ನು, ಪತ್ನಿಗೆ ಇದ್ದರೆ ಪತಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು ಎಂಬುದು ಅವರ ಸಲಹೆಯಾಗಿದೆ.

ಬಹುತೇಕ ಸಂದರ್ಭದಲ್ಲಿ ಅಸುರಕ್ಷಿತ ಲೈಂಗಿಕತೆಯಿಂದಲೇ ಈ ರೋಗ ಬರುತ್ತದೆ. ಒಂದೇ ಸಂಗಾತಿಯನ್ನು ಹೊಂದಿದ್ದರೆ ಅಪಾಯ ಇರುವುದಿಲ್ಲ. ಒಂದಕ್ಕಿಂತ ಹೆಚ್ಚು ಮಂದಿ ಜತೆ ಲೈಂಗಿಕ ಸಂಪರ್ಕ ಹೊಂದುವವರು ಕಡ್ಡಾಯವಾಗಿ ನಿರೋಧ್‌ ಬಳಸಬೇಕು. ಗರ್ಭಧಾರಣೆ ತಡೆಗಟ್ಟುವ ಜತೆಗೆ ಹಲವು ರೋಗಗಳನ್ನೂ ತಡೆಗಟ್ಟಲು ಈ ಬಳಕೆ ಉಪಯೋಗಕಾರಿ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿದೆ. ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸಗಳನ್ನು ಇಲಾಖೆ ಮಾಡುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.