ದಾವಣಗೆರೆ: ‘ವೀರಶೈವ ಲಿಂಗಾಯತ ಬೇರೆಯಲ್ಲ. ಗುರು–ವಿರಕ್ತರು ಎಲ್ಲರೂ ಒಂದು ಎಂದು ಸಾರಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಧರ್ಮ ಜಾಗೃತಿ ಸಮ್ಮೇಳನ, ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ರಂಭಾಪುರಿ ಶ್ರೀ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಇದೇ 21ರಂದು ಆಯೋಜಿಸಲಾಗಿದೆ’ ಎಂದು ಆವರಗೊಳ್ಳದ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ನಾಡಿನ ಗಮನ ಸೆಳೆಯುವುದು ಹೆಚ್ಚು ಔಚಿತ್ಯ ಎಂಬ ಕಾರಣಕ್ಕೆ ಅಲ್ಲಿ ಸಮ್ಮೇಳನ ನಡೆಯಲಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವ ನಾಯಕರು ಬೆಂಗಳೂರಿನಲ್ಲಿದ್ದಾರೆ. ಅವರಿಗೆ ನಾವೆಲ್ಲ ಒಂದು ಎಂದು ಹಾಗೂ ಸನಾತನ ಗುರುಪೀಠಗಳ ಪರಂಪರೆ ಸಾರಲು ಜಾಗೃತಿ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಹೇಳಿದರು.
ಮುಖಂಡ ಶಿವನಗೌಡ, ‘ಸಮ್ಮೇಳನದಲ್ಲಿ 125ಕ್ಕೂ ಹೆಚ್ಚು ವಿರಕ್ತ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ವೀರಶೈವ ಲಿಂಗಾಯತರೆಲ್ಲಾ ಒಂದು ಎಂಬುದನ್ನು ತೋರಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಹಲವು ವಿಷಯಗಳ ಚರ್ಚೆ ನಡೆಯಲಿದೆ. ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ದಾವಣಗೆರೆ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಮೇಯರ್ ಶೋಭಾ ಪಲ್ಲಗಟ್ಟೆ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅನ್ನದಾನಿ ಹಿರೇಮಠ, ಬಸವರಾಜ್ ಚಟ್ನಳ್ಳಿ, ಡಾ. ಮಹೇಶ್ ಪಾಟೀಲ, ಟಿಂಕರ್ ಮಂಜಣ್ಣ, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಾ ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.