ADVERTISEMENT

23, 24ರಂದು ಹರಜಾತ್ರೆ; ಉದ್ಯೋಗ ಮೇಳ

ಅಮೃತ ಮಹೋತ್ಸವದ ಅಂಗವಾಗಿ ವೀರ ಸೇನಾನಿಗಳಿಗೆ ಗೌರವ: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:29 IST
Last Updated 21 ಏಪ್ರಿಲ್ 2022, 7:29 IST
ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿ ಬಸವರಾಜ್ ದಿಂಡೂರ್, ಪಿ.ಡಿ.ಶಿರೂರು, ಪಂಚಮಸಾಲಿ ಸಮಾಜದ ರಾಜ್ಯ ಸಂಘದ ಕಾರ್ಯಾಧ್ಯಕ್ಷರಾದ ಸೋಮನಗೌಡ ಪಾಟೀಲ್, ವಸಂತ್ ಹುಲ್ಲತ್ತಿ, ಚಂದ್ರಶೇಖರ್ ಪೂಜಾರ್, ಪ್ರಕಾಶ್ ಪಾಟೀಲ್, ಎನ್.ಜಿ.ನಾಗನಗೌಡ್ರು, ಮಹೇಶಣ್ಣ, ಡಾ.ಸಂಗಮೇಶ ಹೊಳ್ಳ ಇದ್ದರು.
ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿ ಬಸವರಾಜ್ ದಿಂಡೂರ್, ಪಿ.ಡಿ.ಶಿರೂರು, ಪಂಚಮಸಾಲಿ ಸಮಾಜದ ರಾಜ್ಯ ಸಂಘದ ಕಾರ್ಯಾಧ್ಯಕ್ಷರಾದ ಸೋಮನಗೌಡ ಪಾಟೀಲ್, ವಸಂತ್ ಹುಲ್ಲತ್ತಿ, ಚಂದ್ರಶೇಖರ್ ಪೂಜಾರ್, ಪ್ರಕಾಶ್ ಪಾಟೀಲ್, ಎನ್.ಜಿ.ನಾಗನಗೌಡ್ರು, ಮಹೇಶಣ್ಣ, ಡಾ.ಸಂಗಮೇಶ ಹೊಳ್ಳ ಇದ್ದರು.   

ಹರಿಹರ: ಇಲ್ಲಿನ ಪಂಚಮಸಾಲಿ ಮಠದಲ್ಲಿ ಹರ ಜಾತ್ರೆಯ ಅಂಗವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಈ ಬಾರಿ ಏಪ್ರಿಲ್ 23ರಂದು ಪಂಚಮಸಾಲಿ ಸಮಾಜದ ವೀರ ಸೇನಾನಿಗಳಿಗೆ ಗೌರವ ಮತ್ತು ಏಪ್ರಿಲ್ 24ರಂದು ಬೃಹತ್ ಉದ್ಯೋಗ ಮೇಳವನ್ನು ಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏ.23ರಂದು ಬೆಳಿಗ್ಗೆ 11ಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ ಸಮಾಜದವರ ಪಾತ್ರ ಮತ್ತು ವೀರ ಸೇನಾನಿಗಳಿಗೆ ಗೌರವ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗವಹಿಸುವರು’ ಎಂದು ಹೇಳಿದರು.

‘ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ, ಕಂಬಳಿ ಸಿದ್ದಪ್ಪ, ಶಂಕರಗೌಡ್ರು ಸೇರಿ ಆಯ್ದ 7 ಜನ ವೀರ ಸೇನಾನಿಗಳ ಜೀವನಚರಿತ್ರೆ ಪುಸ್ತಕ, ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಇವರ ಸಾಧನೆ ಆಧರಿಸಿ ಖ್ಯಾತ ಗೀತೆ ರಚನಕಾರ ಕೆ.ಕಲ್ಯಾಣ್‌ ಅವರು ರಚಿಸಿದ ಗೀತೆಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಮಧ್ಯಾಹ್ನ 3ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ, ಕೃಷಿ, ಕೌಶಲ ತರಬೇತಿ ಕುರಿತು ಗೋಷ್ಠಿ ಆಯೋಜಿಸಿದ್ದು, ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ವಿಷಯ ಮಂಡನೆ ಮಾಡುವರು. ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕುಲಸಚಿವರು’ ಪಾಲ್ಗೊಳ್ಳುವರು.

ಸಾಂಸ್ಕೃತಿಕ ಸೌರಭ: ‘ಸಂಜೆ 5ರಿಂದ 7ರವರೆಗೆ ದೇಶದ ವಿವಿಧ ರಾಜ್ಯಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕಲಾತಂಡಗಳಿಂದ ವಿಶೇಷ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ’ ಎಂದು ಹೇಳಿದರು.

ಉದ್ಯೋಗ ಮೇಳ: ಏಪ್ರಿಲ್ 24ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪಂಚಮಸಾಲಿ ಜಗದ್ಗುರು ಪೀಠ, ನಿರಾಣಿ ಫೌಂಡೇಶನ್, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರಿನ ಎಥ್ನೋಟೆಕ್ ಅಕಾಡೆಮಿಗಳ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ನಡೆಯಲಿದೆ. ಟಾಟಾ ಮೋಟರ್ಸ್‌, ವಿಪ್ರೊ, ಇನ್ಫೊಸಿಸ್‌, ಜೆಎಸ್‌ಡಬ್ಲೂ ಸೇರಿದಂತೆ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ.

‘ಎಸ್ಸೆಸ್ಸೆಲ್ಸಿ ನಂತರದ ಉದ್ಯೋಗಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಲು ಅರ್ಹರಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ಅಂದು ಬೆಳಿಗ್ಗೆ 11ಕ್ಕೆ ‘ಉದ್ಯಮಿಯಾಗು ಉದ್ಯೋಗ ನೀಡು’ ಎನ್ನುವ ಶೀರ್ಷಿಕೆಯಡಿ ಗೋಷ್ಠಿಯಲ್ಲಿ ನೂರಾರು ಯುವ ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ 3ಕ್ಕೆ 4ನೇ ವರ್ಷದ ಪೀಠಾರೋಹಣದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀ, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ, ಜೈನ ಸಮುದಾಯದ ಲೋಕೇಶ್ ಮುನಿಗಳು ಹಾಗೂ ವಿವಿಧ ಮಠಾದೀಶ ಸಾನ್ನಿಧ್ಯ ವಹಿಸುವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ರಾಜಕೀಯ ಮುಖಂಡರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ’ ಎಂದು ಹೇಳಿದರು.

ಜಾತಿ, ಜನಾಂಗ, ಧರ್ಮದ ಮಿತಿಯಿಲ್ಲ

‘ಹರಜಾತ್ರೆ ಉದ್ಯೋಗ ಮೇಳದಲ್ಲಿ ಪಂಚಮಸಾಲಿ ಸಮಾಜದವರ ಜೊತೆಗೆ ಎಲ್ಲಾ ಜಾತಿ, ಜನಾಂಗ, ಧರ್ಮದ ಉದ್ಯೋಗ ಅಕಾಂಕ್ಷಿಗಳು ಭಾಗವಹಿಸಲು ಮುಕ್ತ ಅವಕಾಶವಿದೆ. ಈ ಶ್ರೀ ಮಠವು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ’ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ಕೆಲ ದಿನಗಳ ಹಿಂದೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶ್ರೀಗಳು, ‘ಎರಡು ದಿನಗಳ ಈ ಸಮಾರಂಭದಲ್ಲಿ ವ್ಯಾಪಾರ, ವಹಿವಾಟನ್ನೂ ಕೂಡ ಯಾವುದೇ ಜತಿ, ಧರ್ಮದವರು ನಡೆಸಿಕೊಳ್ಳಬಹುದು. ಮಠದಿಂದ ಅಂತಹ ಯಾವುದೇ ಕಟ್ಟುಪಾಡುಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮುರುಗೇಶ ನಿರಾಣಿ ಪ್ರೇರಣೆ’

‘ಸಚಿವ ಮುರುಗೇಶ ಆರ್.ನಿರಾಣಿಯವರು ಜನಸಾಮಾನ್ಯರಾಗಿದ್ದವರು ತಮ್ಮದೇ ಸಂಸ್ಥೆಯ ಮೂಲಕ 75 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಸಾಮಾನ್ಯ ವ್ಯಕ್ತಿ ಉದ್ಯೋಗದಾತ ಆಗಿರುವ ಬಗ್ಗೆ ಹೆಮ್ಮೆಯಿದೆ. ಅವರನ್ನು ಗಮನಿಸಿಯೆ ‘ಉದ್ಯಮಿಯಾಗು ಉದ್ಯೋಗ ನೀಡು’ ಎಂಬ ಗೋಷ್ಠಿಯನ್ನು ಜಾತ್ರೆಯಲ್ಲಿ ನಡೆಸಲಿದ್ದೇವೆ’ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.

ಅನ್ನ, ಶಿಕ್ಷಣದ ಜೊತೆಗೆ ಉದ್ಯೋಗ ದಾಸೋಹ

ನಾಡಿನಲ್ಲಿ ವೀರಶೈವ ಮಠ, ಮಂದಿರಗಳು ಅನ್ನ, ಶಿಕ್ಷಣ ದಾಸೋಹಕ್ಕೆ ಖ್ಯಾತಿ ಪಡೆದಿವೆ. ಇವುಗಳ ಜೊತೆಗೆ ಉದ್ಯೋಗ ದಾಸೋಹವನ್ನು ಮಾಡಲಾಗುವುದು. ಒಂದು ಕೈಯಲ್ಲಿ ಲಿಂಗ, ಇನ್ನೊಂದು ಕೈಯಿಗೆ ಕಾಯಕವನ್ನು ಈ ಧರ್ಮ ನೀಡಿದೆ. ಕಾಯಕ ಇಲ್ಲದ ಕೈಯಿಗೆ ಉದ್ಯೋಗ ದೊರಕಿಸುವ ಕಾಯಕ ಶ್ರೀ ಮಠದಿಂದ ನಡೆಸಲಾಗುತ್ತಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.