ADVERTISEMENT

ದಾವಣಗೆರೆ: ಚಿಗಟೇರಿ ಆಸ್ಪತ್ರೆಗೆ ₹ 31 ಕೋಟಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:07 IST
Last Updated 26 ಜನವರಿ 2023, 5:07 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಜಿಲ್ಲಾ ಶಸ್ತ್ರ ಚಿಕಿತ್ಸಕ ಷಣ್ಮುಖಪ್ಪ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಜಿಲ್ಲಾ ಶಸ್ತ್ರ ಚಿಕಿತ್ಸಕ ಷಣ್ಮುಖಪ್ಪ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು   

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ದುರಸ್ತಿ ಕಾಮಗಾರಿ, ಅಗತ್ಯ ವೈದ್ಯಕೀಯ ಸಲಕರಣೆ, ಪೀಠೋಪಕರಣ ಖರೀದಿಗೆ ₹ 31 ಕೋಟಿ ಅನುದಾನಕ್ಕೆ ಪ್ರಸ್ತಾವವನ್ನು ಸಲ್ಲಿಸಲು ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಸ್ಟಾಫ್‌ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಯಿತು.

29 ಎಕರೆ ವಿಸ್ತೀರ್ಣ ಹೊಂದಿರುವ ಜಿಲ್ಲಾ ಆಸ್ಪತ್ರೆ 930 ಒಳರೋಗಿಗಳ ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ. ಆಸ್ಪತ್ರೆಯ ಕೆಲವು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಈಗಾಗಲೇ ಸರ್ಕಾರದಿಂದ ಮಂಜೂರಾಗಿದ್ದ ಅನುದಾನದಿಂದ ದುರಸ್ತಿ ಮಾಡಿಸಲಾಗಿದೆ. ಇನ್ನೂ ಕೆಲವು ಕೊಠಡಿಗಳ ದುರಸ್ತಿ ಕಾರ್ಯ ಸೇರಿದಂತೆ ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ಬೆಡ್‌ಗಳು, ಪೀಠೋಪಕರಣಗಳು, ವೈದ್ಯಕೀಯ ಸಲಕರಣೆಗಾಗಿ ಸುಮಾರು ₹ 31 ಕೋಟಿ ಅನುದಾನದ ಅಗತ್ಯವಿದೆ ಎಂದು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಷಣ್ಮುಖಪ್ಪ ಸಚಿವರ ಗಮನಕ್ಕೆ ತಂದರು.

ADVERTISEMENT

ಕೇವಲ 135 ಸ್ಟಾಫ್‌ನರ್ಸ್‌ಗಳಿದ್ದು, 455 ಶೂಶ್ರೂಷಕರನ್ನು ನೇಮಕಾತಿ ಮಾಡಿಕೊಳ್ಳಬೇಕಿದೆ.‌ ಓವರ್‌ಹೆಡ್
ಟ್ಯಾಂಕ್ ಅಳವಡಿಸಬೇಕಿರುವುದರಿಂದ ಅನುದಾನಕ್ಕೆ ಅಂಕಿತ ಬೀಳಬೇಕಿದೆ ಎಂದು ವಿವರಿಸಿದರು.

ಮಾರ್ಕೆಟ್ ಬಳಿ ಇರುವ ಹೆರಿಗೆ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಅನುಕೂಲವಾಗಲು ಲಿಫ್ಟ್ ಅವಶ್ಯವಿದೆ. ಆಸ್ಪತ್ರೆಯ ಪ್ರಯೋಗ ಶಾಲೆಗೆ ಸಿಬಿಸಿ ಸಿಸ್ ಮ್ಯಾಕ್ಸ್ ಯಂತ್ರ ಅಳವಡಿಕೆ ಸೇರಿದಂತೆ ವೈದ್ಯಕೀಯ ಸಲಕರಣೆಗಳಿಗೆ, ಪೀಠೋಪಕರಣಕ್ಕೆ ಅನುದಾನ ಬೇಕಾಗಿದೆ. ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು ಎಂದು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ. ಮಧು ಮನವಿ ಮಾಡಿದರು.

ಜನರ ಜೀವ ಸರ್ಕಾರಕ್ಕೆ ಮುಖ್ಯ. ಸ್ಟಾಫ್‌ನರ್ಸ್‌ಗಳ ನೇಮಕಾತಿ ಮತ್ತು ದುರಸ್ತಿ ಕಾರ್ಯಕ್ಕೆ ಎರಡು ಆಸ್ಪತ್ರೆಗಳಿಗೆ ಅನುದಾನ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಮೇಯರ್ ಜಯಮ್ಮ ಗೋಪಿನಾಯ್ಕ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಡಿಎಚ್‌ಒ ಡಾ. ನಾಗರಾಜ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತರಾದ ರೇಣುಕಾ ಇದ್ದರು.

‘ಜಾಗವಿದ್ದರೂ ಉಪಯೋಗವಾಗಿಲ್ಲ’
ಇಲ್ಲಿ ಇನ್ನೂ 100 ಕೊಠಡಿ ಕಟ್ಟುವಷ್ಟು ಜಾಗವಿದ್ದರೂ ಅದನ್ನು ಉಪಯೋಗಿಸಿಕೊಂಡಿಲ್ಲ. ಕಟ್ಟಡಗಳು ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು, ಕೂಡಲೇ ದುರಸ್ತಿ ಮಾಡಿ, ಆಸ್ಪತ್ರೆಯನ್ನು ನವೀಕರಣಗೊಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಸಲಹೆ ನೀಡಿದರು.

*

ಆಸ್ಪತ್ರೆಯ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್‌ಗಳನ್ನು ವರ್ಷಕ್ಕೆ ಒಂದು ಬಾರಿ ಸ್ವಚ್ಛಗೊಳಿಸಿದರೆ ರೋಗಿಗಳ ಗತಿಯೇನು? ಆರು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು.
–ಬೈರತಿ ಬಸವರಾಜ, ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.