ADVERTISEMENT

ಮಕ್ಕಳಿಗಾಗಿ 36 ಬೆಡ್‌ ಸಿದ್ಧ, 60 ಬೆಡ್‌ಗೆ ಬೇಡಿಕೆ

3ನೇ ಅಲೆ ಬಂದರೆ ಹಿರಿಯರಿಗೂ ಬರಲಿದೆ * ಲಸಿಕೆ ತೆಗೆದುಕೊಳ್ಳದ ಕಾರಣ ಮಕ್ಕಳಲ್ಲಿ ಹೆಚ್ಚು ಇರುವ ಸಾಧ್ಯತೆ

ಬಾಲಕೃಷ್ಣ ಪಿ.ಎಚ್‌
Published 17 ಜುಲೈ 2021, 16:35 IST
Last Updated 17 ಜುಲೈ 2021, 16:35 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕೊರೊನಾ ಮೂರನೇ ಅಲೆ ಬಂದರೆ ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಮಾಹಿತಿಯ ಅನ್ವಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪಿಐಸಿಯು (ಪಿಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌) 36 ಬೆಡ್‌ಗಳು ಸಿದ್ಧವಾಗಿವೆ. ಪ್ರತಿ ತಾಲ್ಲೂಕಿನಲ್ಲಿ ತಲಾ 5 ತೀವ್ರ ನಿಗಾ ಘಟಕಗಳ ಬೆಡ್‌ಗಳು ಸೇರಿ ಇನ್ನೂ 60 ಬೆಡ್‌ಗಳಿಗೆ ಜಿಲ್ಲಾಡಳಿತ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ.

ಜಿಲ್ಲಾ ಆಸ್ಪತ್ರೆಯ 65 ಮತ್ತು 66ನೇ ವಾರ್ಡ್‌ಗಳಲ್ಲಿ ತಲಾ 18 ಬೆಡ್‌ಗಳನ್ನು ನಿರ್ಮಿಸಲಾಗಿದೆ. ಎಂಐಸಿಯು ತರಹನೇ ಈ ಪಿಐಸಿಯು ವಾರ್ಡ್‌ಗಳಲ್ಲಿ ಕೂಡ ಟೈಲ್ಸ್‌ ಅಳವಡಿಸಲಾಗುತ್ತಿದೆ. ಸರ್ಕಾರಿ 17, ಖಾಸಗಿ 51 ಸೇರಿ ಜಿಲ್ಲೆಯಲ್ಲಿ ಒಟ್ಟು 68 ಮಂದಿ ಮಕ್ಕಳ ತಜ್ಞರನ್ನು ಗುರುತಿಸಲಾಗಿದೆ. ಎಲ್ಲರಿಗೂ ತರಬೇತಿ ನೀಡಲಾಗುತ್ತಿದೆ. ಬಳಿಕ ಶುಶ್ರೂಷಕರಿಗೆ ತರಬೇತಿ ನೀಡಲಾಗುತ್ತದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಮಕ್ಕಳಲ್ಲಿ ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಮಾಡಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಮ್ಮ ಎಲ್ಲ ತಾಲ್ಲೂಕುಗಳ ಆಮ್ಲಜನಕ ತಯಾರಿ ಘಟಕಗಳು ಸಿದ್ಧವಾಗಿವೆ. ಜತೆಗೆ ಕಾನ್‌ಸಂಟ್ರೇಟರ್‌ಗಳನ್ನು ತರಿಸಿ ಇಟ್ಟುಕೊಂಡಿದ್ದೇವೆ. ಮೊನಿಟರ್‌, ಐಸಿಯು ಕ್ವಾಟ್‌ಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇಮ್ಯುನೊಗ್ಲೋಬುಲಿನ್‌ ಸಹಿತ ಔಷಧಗಳ ಪೂರೈಕೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಸರ್ಕಾರದಿಂದ ನೀಡುವುದನ್ನು ಹೊರತುಪಡಿಸಿ ಉಳಿದವುಗಳನ್ನು ಜಿಲ್ಲಾ ಹಂತದಲ್ಲಿಯೇ ಖರೀದಿ ಮಾಡಲು ಏಜೆನ್ಸಿಯನ್ನು ಗುರುತಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

ಮಕ್ಕಳ ತೀವ್ರ ನಿಗಾ ಘಟಕಗಳಲ್ಲದೇ (ಪಿಐಸಿಯು) ಅಲ್ಲದೇ ಆಮ್ಲಜನಕ ಬೆಡ್‌ಗಳು ಅವಶ್ಯಕತೆ ಇದೆ. ಜಿಲ್ಲಾ ಆಸ್ಪತ್ರೆಯಲ್ಲಿ 60 ಬೆಡ್‌ಗಳು ಹಾಗೂ ಪ್ರತಿ ತಾಲ್ಲೂಕಿನಲ್ಲಿ 10 ಆಮ್ಲಜನಕ ಬೆಡ್‌ಗಳು ಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಲ್ಟಿಪ್ಯಾರೋ ಮೀಟರ್‌, ವೆಂಟಿಲೇರ್‌ಗಳಿಗೂ ಬೇಡಿಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರಾಜ್‌ ಮಾಹಿತಿ ನೀಡಿದ್ದಾರೆ.

ತೀವ್ರ ಅಪೌಷ್ಟಿಕ ಮಕ್ಕಳು, ಹೆತ್ತವರು, ಸಾಧಾರಣ ಅಪೌಷ್ಟಿಕ ಮಕ್ಕಳು, ಹೆತ್ತವರಿಗೆ ಸ್ಪಿರುಲಿನಾ ಚಿಕ್ಕಿ ಸಹಿತ ಪೌಷ್ಟಿಕ ಆಹಾರ ಒದಗಿಸಲು ಆಯುಷ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕ್ರಮ ಕೈಗೊಳ್ಳಲಾಗಿದೆ. ವೈದ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿ ಮೂರ್ನಾಲ್ಕು ಸುತ್ತುಗಳ ಸಭೆ ನಡೆಸಿದ್ದಾರೆ ಎಂದು ಹೇಳಿದರು.

‘ಮಕ್ಕಳಿಗಷ್ಟೇ ಎಂಬುದು ಸರಿಯಲ್ಲ’

ಕೊರೊನಾ ಮೂರನೇ ಅಲೆ ಬಂದರೆ ಅದು ಮಕ್ಕಳಿಗಷ್ಟೇ ಬರುತ್ತದೆ ಎಂಬುದು ಸರಿಯಲ್ಲ. ಎಲ್ಲರಿಗೂ ಬರಬಹುದು. ಆದರೆ 18 ವರ್ಷದ ಕೆಳಗಿನವರಿಗೆ ಲಸಿಕೆ ನೀಡಿರುವುದಿಲ್ಲ. ಹಾಗಾಗಿ ಅವರಿಗೆ ಹೆಚ್ಚು ಪರಿಣಾಮ ಉಂಟು ಮಾಡಲಿದೆ. ಮೊದಲ ಅಲೆಯಲ್ಲಿ 1,800 ಮಕ್ಕಳು, ಎರಡನೇ ಅಲೆಯಲ್ಲಿ 2,400 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎನ್ನುತ್ತಾರೆ ಡಿಎಚ್‌ಒ ಡಾ. ನಾಗರಾಜ್‌.

ಮಕ್ಕಳಿಗೆ ಆರೋಗ್ಯ ತಪಾಸಣೆ

ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ. ಮಕ್ಕಳಿಗೆ ನೀಡುತ್ತಿದ್ದ ಟಿ.ಡಿ. (ಟೆಟನಸ್‌, ಡಿಪ್ತೇರಿಯ) ಇಂಜೆಕ್ಷನ್‌ಗಳನ್ನು ಮುಂದುರಿಸಲಾಗುವುದು. ಯಾವುದೇ ಮಗುವಿಗೆ ಕೊರೊನಾ, ಮಿಸ್‌–ಸಿ ಅಥವಾ ಇನ್ಯಾವುದೇ ರೋಗಗಳ ಲಕ್ಷಣ ಕಂಡು ಬಂದರೆ ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಕಳುಹಿಸುವ ಬಗ್ಗೆ ತಿಳಿಸಿಕೊಡಲಾಗಿದೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.