‘ತುಂಗಾ–2’ ಶ್ವಾನ
ಸಂತೇಬೆನ್ನೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಅನುಮಾನದ ಮೇರೆಗೆ ಯುವಕನನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಯುವಕ ಸಂತೋಷ್ (33) ಕೊಲೆಯಾದವರು. ಸಮೀಪದ ಚೆನ್ನಾಪುರ ಗ್ರಾಮದ ರಂಗಸ್ವಾಮಿ ಬಂಧಿತ ಆರೋಪಿ.
ಸಂತೋಷ್ ಅವರು ಸೋಮವಾರ ರಾತ್ರಿ ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಂಗಸ್ವಾಮಿ ಮಚ್ಚಿನಿಂದ ಹಲ್ಲೆ ನಡೆಸಿ, ಬೈಕ್‌ನಲ್ಲಿ ಪರಾರಿಯಾಗಿದ್ದರು. ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಎಸ್‌ಪಿ ಉಮಾ ಪ್ರಶಾಂತ್ ಅವರ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಲು ತಂಡವನ್ನು ರಚಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಪಿಐ ಲಿಂಗನಗೌಡ ನೆಗಳೂರು, ಎಸ್‌ಐ ರೂಪಾ ತೆಂಬದ್, ಎಸ್‌ಐ ಚನ್ನವೀರಪ್ಪ, ಎಎಸ್ಐ ಓಂಕಾರಪ್ಪ, ಸಿಬ್ಬಂದಿ ವೈ.ಬಿ.ರವಿ, ಕನ್ನಪ್ಪ, ಸೋಮಶೇಖರ್, ನಾಗಭೂಷಣ್, ರಾಘವೇಂದ್ರ, ಶ್ರೀನಿವಾಸ್ ಅವರು ಶ್ವಾನದಳದ ನೆರವಿನೊಂದಿಗೆ ಆರೋಪಿ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ನಡೆದ ಸ್ಥಳದಿಂದ ಚೆನ್ನಾಪುರದವರೆಗೆ (8 ಕಿ.ಮೀ.) ತುಂಗಾ-2 ಶ್ವಾನ ಕ್ರಮಿಸಿ ಆರೋಪಿ ಮನೆ ಪತ್ತೆ ಹಚ್ಚಿದೆ. ಶ್ವಾನದಳದ ಸಿಬ್ಬಂದಿ ಚೆನ್ನಪ್ಪ ಹಾಗೂ ಸಹಾಯಕ ಸಿಬ್ಬಂದಿ ಶ್ವಾನದ ಜೊತೆಯಲ್ಲೇ ಓಡಿ ಆರೋಪಿ ಪತ್ತೆಗೆ ಸಹಕರಿಸಿದ್ದು, ಎಸ್‌ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.