ADVERTISEMENT

ದಾವಣಗೆರೆ: ಸಿನಿಮಾ ವೀಕ್ಷಣೆಗೆ ಬೆರಳೆಣಿಕೆಯಷ್ಟು ಜನ

ದಾವಣಗೆರೆಯಲ್ಲಿ ಎರಡು ಪರದೆಗಳಲ್ಲಿ ಮೂರು ಚಲನಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 7:28 IST
Last Updated 16 ಅಕ್ಟೋಬರ್ 2020, 7:28 IST
ದಾವಣಗೆರೆಯ ಪುಷ್ಪಾಂಜಲಿ ಚಿತ್ರ ಮಂದಿರದಲ್ಲಿ ಪ್ರೇಕ್ಷಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಯಿತು
ದಾವಣಗೆರೆಯ ಪುಷ್ಪಾಂಜಲಿ ಚಿತ್ರ ಮಂದಿರದಲ್ಲಿ ಪ್ರೇಕ್ಷಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಯಿತು   

ದಾವಣಗೆರೆ: ಲಾಕ್‌ಡೌನ್ ನಂತರ ಶುಕ್ರವಾರದಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪುನರಾರಂಭಗೊಂಡಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತೆರೆ ಕಂಡು ಸ್ಥಗಿತಗೊಂಡಿದ್ದ ಚಿರಂಜೀವಿ ಸರ್ಜಾ ನಟಿಸಿರುವ ‘ಶಿವಾರ್ಜುನ’, ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಹಾಗೂಡಾರ್ಲಿಂಗ್‌ ಕೃಷ್ಣ ನಟನೆಯ ‘ಲವ್‌ ಮಾಕ್‌ಟೇಲ್’ ಚಿತ್ರಗಳು ಪ್ರದರ್ಶನಗೊಂಡಿದ್ದು, ಬೆರಳೆಣಿಕೆಯಷ್ಟು ಮಂದಿ ಸಿನಿಮಾ ವೀಕ್ಷಿಸಿದರು.

‘ಶಿವಾರ್ಜುನ’ ಚಿತ್ರ ಪುಷ್ಪಾಂಜಲಿ ಥಿಯೇಟರ್‌ನಲ್ಲಿ ನಾಲ್ಕು ಪ್ರದರ್ಶನ ಹಾಗೂ ಎಸ್‌.ಎಸ್. ಮಾಲ್‌ನ ‘ಮೂವಿ ಟೈಮ್’‌ನಲ್ಲಿ ಒಂದು ಪ್ರದರ್ಶನಗೊಂಡರೆ, ‘ಅವನೇ ಶ್ರೀಮನ್ನಾರಾಯಣ’ ಎರಡು ಹಾಗೂ ‘ಲವ್‌ ಮಾಕ್‌ಟೇಲ್’ ಚಿತ್ರ ತಲಾ ಒಂದು ಪ್ರದರ್ಶನ ಕಂಡವು.

ADVERTISEMENT

ಇಲ್ಲಿನ ಪುಷ್ಪಾಂಜಲಿ ಚಿತ್ರಮಂದಿರಲ್ಲಿ ಬೆಳಿಗ್ಗಿನ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರು ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಪುಸ್ತಕದಲ್ಲಿ ನಮೂದಿಸಿದರು. ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿದ ಬಳಿಕ ಅರ್ಧ ಟಿಕೆಟ್‌ ಅನ್ನು ಕೊಟ್ಟು ನೇರವಾಗಿ ಥಿಯೇಟರ್ ಒಳಗೆ ಬಿಡಲಾಯಿತು. ಈ ಹಿಂದೆ ಟಿಕೆಟ್ ಅನ್ನು ಹರಿದು ಅರ್ಧವನ್ನು ಥಿಯೇಟರ್‌ನವರು, ಉಳಿದ ಅರ್ಧವನ್ನು ಪ್ರೇಕ್ಷಕರಿಗೆ ನೀಡಿ ಒಳಗೆ ಬಿಡಲಾಗುತ್ತಿತ್ತು. ಕೋವಿಡ್ ಹರಡುವ ಕಾರಣದಿಂದ ಇದಕ್ಕೆ ತಿಲಾಂಜಲಿ ಹಾಡಲಾಗಿತ್ತು.

‘ನಾವು ಲಾಕ್‌ಡೌನ್‌ಗಿಂತಲೂ ಮೊದಲು ಥಿಯೇಟರ್‌ಗಳಲ್ಲಿ ವಾರಕ್ಕೆ ಒಂದು ಸಿನಿಮಾ ವೀಕ್ಷಿಸುತ್ತಿದ್ದೆವು. ಈಗ ಸಿನಿಮಾ ಪುನರಾರಂಭವಾಗಿ ಆರಂಭವಾಗಿದೆ. ಮನರಂಜನೆಗಾಗಿ ಇಲ್ಲಿಗೆ ಬಂದಿದ್ದೇವೆ. ಲಾಕ್‌ಡೌನ್ ವೇಳೆ ಟೀವಿಯಲ್ಲೇ ಸಿನಿಮಾ ವೀಕ್ಷಿಸುತ್ತಿದ್ದೆವು. ದೊಡ್ಡ ಪರದೆಯಲ್ಲಿ ನೋಡಿದರೆ ಇನ್ನಷ್ಟು ಖುಷಿ ಸಿಗುತ್ತದೆ’ ಎಂದು ಸಿನಿಮಾ ವೀಕ್ಷಿಸಲು ಬಂದಿದ್ದ ಲಿಂಗದಹಳ್ಳಿಯ ವೀರೇಶ್ ಹಾಗೂ ಶಾಮನೂರಿನ ಹನುಮಂತು ಹೇಳುತ್ತಾರೆ.

‘ಏಳು ತಿಂಗಳ ನಂತರ ಸಿನಿಮಾ ಪ್ರದರ್ಶನ ಆರಂಭಿಸಿದ್ದೇವೆ. ಪರವಾನಗಿ ನವೀಕರಣ ಶುಲ್ಕ ಹೆಚ್ಚಿಸಲಾಗಿದೆ. ಇದು ನಮಗೆ ಹೊರೆಯಾಗಿದೆ. ಲಾಕ್‌ಡೌನ್ ವೇಳೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಕೆಲಸಗಾರರು ವಾಪಸ್ ಬಂದಿದ್ದಾರೆ. ಹೆಚ್ಚಿನ ಪ್ರೇಕ್ಷಕರು ಬಂದರೆ ಮಾತ್ರ ಸೆಕೆಂಡ್ ಶೋ ಪ್ರದರ್ಶನ ಮಾಡಲಾಗುವುದು. ಇಲ್ಲದಿದ್ದರೆ ಸ್ಥಗಿತಗೊಳಿಸುತ್ತೇವೆ’ ಎಂದು ಪುಷ್ಪಾಂಜಲಿ ಥಿಯೇಟರ್ ಮ್ಯಾನೇಜರ್ ಅರುಣ್‌ಕುಮಾರ್ ತಿಳಿಸಿದರು.

ಎಸ್‌.ಎಸ್. ಮಾಲ್‌ನ ‘ಮೂವಿಟೈಮ್‌’ನಲ್ಲಿ ಮಾಲ್‌ನ ಹೊರಗಡೆಯ ಬಾಗಿಲಿನಲ್ಲಿ ಪ್ರೇಕ್ಷಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಗುತ್ತಿದೆ. ಪ್ರತಿ ಶೋ ಮುಗಿದ ನಂತರ ಸೀಟ್‌ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ’ ಎಂದು ಮೂವಿಟೈಮ್‌ನ ಮ್ಯಾನೇಜರ್ ಎಚ್. ಪರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.