ADVERTISEMENT

ಕುರಿಗಾಹಿ, ಬಡಮಕ್ಕಳಿಗೆ ನೆರವಾದ ಶಿಕ್ಷಕ ಜಿ.ಎಚ್. ತಿಪ್ಪೇಸ್ವಾಮಿ

ಶಾಲೆ ಆಧುನೀಕರಣ, ದಾಖಲಾತಿ ಹೆಚ್ಚಿಸಲು ಶ್ರಮಿಸಿದ ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 2:34 IST
Last Updated 21 ಸೆಪ್ಟೆಂಬರ್ 2020, 2:34 IST
ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ   

ಮಾಯಕೊಂಡ:ಶಾಲೆಗೆ ಆಧುನಿಕ‌ ಸ್ಪರ್ಶ ನೀಡಿ, ಕುರಿಗಾಹಿ ಮತ್ತು ಬಡಮಕ್ಕಳ ವ್ಯಾಸಂಗಕ್ಕೆ ಶ್ರಮಿಸಿದ‌ ಸಮೀಪದ‌ ಹೆಬ್ಬಾಳಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ಎಚ್. ತಿಪ್ಪೇಸ್ವಾಮಿ ಇತರರಿಗೆ ಮಾದರಿಯಾಗಿದ್ದಾರೆ.

ಸೌಲಭ್ಯದ ಕೊರತೆಯಿಂದ ಕಳಾಹೀನವಾದ ಶಾಲೆ ತಿಪ್ಪೇಸ್ವಾಮಿ ಅವರ ನಿರಂತರ ಶ್ರಮದ ಫಲ‌ ಸುಸಜ್ಜಿತ ಶಾಲೆಯಾಗಿ, ರೈಲಿನ ಚಿತ್ತಾರ ಪಡೆದು ಮಕ್ಕಳನ್ನು ಆಕರ್ಷಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚಳವಾಗಿದೆ.

ಇಂತಹ ಶಿಕ್ಷಕರ ಪರಿಶ್ರಮ ಪರಿಗಣಿಸಿ ರಾಜ್ಯ ಸರ್ಕಾರ ಈ ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ADVERTISEMENT

ತಿಪ್ಪೇಸ್ವಾಮಿ ಶಿಕ್ಷಕರ ತಂಡ ಕಟ್ಟಿಕೊಂಡು, ದಾನಿಗಳಿಂದ, ಹಳೆ‌ ವಿದ್ಯಾರ್ಥಿಗಳಿಂದ ಸಂಪನ್ಮೂಲ ಸಂಗ್ರಹಿಸಿ, ಶಾಲೆಯ ಮುಂದೆ ಕಿರು‌ ಉದ್ಯಾನ, ಆವರಣದಲ್ಲಿ ಆಸನ ಹಾಕಿಸಿದ್ದಾರೆ. ಕಳ್ಳರ, ಮದ್ಯಪಾನಿಗಳ ತಾಣವಾಗದಂತೆ ತಡೆಯಲು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು‌ ಹಾಕಿಸಿದ್ದಾರೆ.

ಹೈಟೆಕ್ ಶೌಚಾಲಯ, ಕಂಪ್ಯೂಟರ್, ಸಮವಸ್ತ್ರಧಾರಿ ಶಿಕ್ಷಕರು ಶಾಲೆಯ ಸೊಬಗನ್ನು ಹೆಚ್ಚಿಸಿದ್ದಾರೆ ಎಂದು ಗ್ರಾಮಸ್ಥರು ಅಭಿಮಾನದಿಂದ ನುಡಿಯುತ್ತಾರೆ.

ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಪುಸ್ತಕದ ಜತೆಗೆ ಪೆನ್, ನೋಟ್ ಬುಕ್, ಬ್ಲಾಂಕೆಟ್‌ಗಳನ್ನು ದಾನಿಗಳಿಂದ ಪಡೆದು ಒದಗಿಸಲಾಗುತ್ತದೆ. ಶಾಲೆಯ ಆಕರ್ಷಣೆ ಹೆಚ್ಚಿದ ಪರಿಣಾಮ 80 ಇದ್ದ ಮಕ್ಕಳ ದಾಖಲಾತಿ 136ಕ್ಕೆ ಏರಿದೆ.

‘ಕುರಿಗಾಹಿ ಮತ್ತು ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ. ಹಾಸ್ಟೆಲ್ ಸಿಗದ ಹಲವು ವಿದ್ಯಾರ್ಥಿಗಳಿಗೆ ತಿಪ್ಪೇಸ್ವಾಮಿ ಸ್ವತಃ ಮನೆಯಲ್ಲಿಯೇ ವ್ಯಾಸಂಗಕ್ಕೆ‌ ಅನುಕೂಲ ಮಾಡಿದ್ದಾರೆ’ ಎಂದು ಗ್ರಾಮದ ಮಾಳಪ್ಪ, ಬೀರಪ್ಪ ಹೇಳಿದರು.

ಶಿಕ್ಷಕರು ತಂಡವಾಗಿ‌ ದುಡಿದು ಇಲಾಖೆಯ ಸದಾಶಯಕ್ಕೆ ಕೈಜೋಡಿಸಿದರೆ ಸರ್ಕಾರಿ ಶಾಲೆಯೂ ಸಮುದಾಯದ ಮನ್ನಣೆ ಪಡೆಯಬಹುದು ಎಂಬುದಕ್ಕೆ ಹೆಬ್ಬಾಳಿನ ಸರ್ಕಾರಿ ಪ್ರಾಥಮಿಕ‌ ಶಾಲೆ ನಿದರ್ಶನ ಎನ್ನುತ್ತಾರೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಚ್.ಕೆ. ಲಿಂಗರಾಜು ಮತ್ತು ಉತ್ತರ ವಲಯ ಬಿಇಒ ಕೊಟ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.