ADVERTISEMENT

ದಾವಣಗೆರೆ: ಚರ್ಚೆಗೆ ಮಾತ್ರ ಸೀಮಿತವಾದ ಟ್ರಕ್‌ ಟರ್ಮಿನಲ್‌!

30 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರಸ್ತಾವ l ಚಾಲಕ, ಕ್ಲೀನರ್‌ಗಳಿಗೆ ಸಿಗುತ್ತಿಲ್ಲ ಸೌಲಭ್ಯ

ಬಾಲಕೃಷ್ಣ ಪಿ.ಎಚ್‌
Published 7 ನವೆಂಬರ್ 2022, 6:01 IST
Last Updated 7 ನವೆಂಬರ್ 2022, 6:01 IST
ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ನಿಂತಿರುವ ಲಾರಿಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ನಿಂತಿರುವ ಲಾರಿಗಳು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ದಾವಣಗೆರೆಯುಚಿತ್ರದುರ್ಗದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗುವ ಮೊದಲೇ ಇದ್ದ ಟ್ರಕ್‌ ಟರ್ಮಿನಲ್‌ ನಿರ್ಮಾಣದ ಬೇಡಿಕೆ 30 ವರ್ಷಗಳು ದಾಟಿದ ಬಳಿಕವೂ ನೆರವೇರಿಲ್ಲ. ಇನ್ನೂ ಅದಕ್ಕಾಗಿ ಜಮೀನು ಖರೀದಿಯೂ ಸಾಧ್ಯವಾಗಿಲ್ಲ. ಪ್ರತಿ ರಸ್ತೆ ಸುರಕ್ಷತಾ ಸಭೆಗಳಲ್ಲಿ ಈ ಬಗ್ಗೆ ಚರ್ಚೆ ಮಾತ್ರ ನಡೆಯುತ್ತದೆ.

ಜಿಲ್ಲಾಡಳಿತ, ನಗರ ಸ್ಥಳೀಯ ಸಂಸ್ಥೆಗಳು ಜಮೀನು ಒದಗಿಸಿದರೆ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಯಮಿತದಿಂದ ಟರ್ಮಿನಲ್‌ ನಿರ್ಮಾಣವಾಗಲಿದೆ. ಆದರೆ, ಇಲ್ಲಿಯವರೆಗೆ ಜಮೀನು ಗುರುತಿಸುವ ಕಾರ್ಯವೇ ನಡೆದಿಲ್ಲ.

ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ 500ಕ್ಕೂ ಹೆಚ್ಚು ಸೇರಿದಂತೆ ಜಿಲ್ಲೆಯಲ್ಲಿ 1000ಕ್ಕೂ ಅಧಿಕ ಲಾರಿಗಳಿವೆ. ಇವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ನಿತ್ಯ ಲಾರಿಗಳು ಬರುತ್ತವೆ ಹೋಗುತ್ತವೆ. ದಿನಕ್ಕೆ 1,000 ಲಾರಿಗಳ ಸಂಚಾರ ನಿರಂತರ ಇರುತ್ತದೆ. ರಾಜ್ಯದಲ್ಲೇ ಪ್ರಮುಖವಾದ ದಾವಣಗೆರೆ ಎಪಿಎಂಸಿಗೆ ಭತ್ತ, ಜೋಳ, ಈರುಳ್ಳಿ, ವಿವಿಧ ತರಕಾರಿ ಹೀಗೆ ತರಲು ಮತ್ತು ಸಾಗಿಸಲು ಲಾರಿಗಳು ಬೇಕೇಬೇಕು. ಇದಲ್ಲದೇ ದಾವಣಗೆರೆಯಲ್ಲಿ ಇರುವ ಎಲ್ಲ ವಾಣಿಜ್ಯ ಮಳಿಗೆಗಳಿಗೆ ಬೇಕಾದ ಸರಂಜಾಮುಗಳನ್ನು ಲಾರಿಯಲ್ಲೇ ತರಲಾಗುತ್ತದೆ. ಶಾಲೆ–ಕಾಲೇಜು, ಕಚೇರಿಗಳು ತೆರೆಯುವ ಮತ್ತು ಬಂದ್‌ ಮಾಡುವ ಹೊತ್ತಿಗೆ ಅಂದರೆ ಬೆಳಿಗ್ಗೆ ಇಲ್ಲವೇ ಸಂಜೆಯ ಸಮಯ ಲಾರಿಗಳು ಬಂದರೆ ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಆಗುತ್ತದೆ.

ADVERTISEMENT

ಹಗಲು ಹೊತ್ತಿಗೆ ಭಾರಿ ವಾಹನಗಳು ನಗರ ಪ್ರವೇಶಿಸುವುದನ್ನು ನಿಷೇಧಿಸಲು ಜಿಲ್ಲಾ ಪೊಲೀಸ್‌ ಇಲಾಖೆ ನಿರ್ಧರಿಸಿತ್ತು. ಆದರೆ ವ್ಯಾಪಾರಸ್ಥರ, ಲಾರಿ ಮಾಲೀಕರ ವಿರೋಧದಿಂದಾಗಿ ಈ ನಿಯಮಜಾರಿಗೆ ಬರಲಿಲ್ಲ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕು. ಲಾರಿಗಳು ಟರ್ಮಿನಲ್‌ನಲ್ಲೇ ನಿಂತು ಅಗತ್ಯಬಿದ್ದಾಗ
ಮಾತ್ರ ನಗರ ಪ್ರವೇಶಿಸಬೇಕು ಎಂಬ ಕೂಗು ಹಳೆಯದಾದರೂ, ಟರ್ಮಿನಲ್‌ ನಿರ್ಮಾಣ ಇನ್ನೂ ಕನಸಾಗಿಯೇ ಉಳಿದಿದೆ. ಜಮೀನು ನೀಡಿದರೆ ಟ್ರಕ್‌ ಟರ್ಮಿನಲ್‌ ನಿರ್ಮಿಸಿ ಕೊಡುವುದಾಗಿ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಲಿಮಿಟೆಡ್‌ ಭರವಸೆ ನೀಡಿ ದಶಕವೇ ಕಳೆದಿದೆ. ಇನ್ನೂ ಜಮೀನು ಗುರುತಿಸಲು ಆಗಿಲ್ಲ.

ಬಾತಿ ಬಳಿ 20 ಎಕರೆ ಭೂಮಿ ಇದೆ. ಅದನ್ನೇ ಅಂತಿಮಗೊಳಿಸಲಾಗುವುದು. ಅಲ್ಲಿಗೆ ಹೆದ್ದಾರಿಯಿಂದ ರಸ್ತೆ ನಿರ್ಮಿಸಿ ಕೊಡಬೇಕು. ಪರಿಶೀಲಿಸಿ ಅಂತಿಮಗೊಳಿಸಲಾಗುವುದು ಎಂದು ಹಿಂದಿನ ಎಲ್ಲ ಜಿಲ್ಲಾಧಿಕಾರಿಗಳು ಹೇಳಿದ್ದರು. ದಶಕಗಳಿಂದ ಈ ರೀತಿ ಭರವಸೆ ನೀಡುತ್ತಾ ಮುಂದೂಡುತ್ತ ಬರಲಾಗಿದೆ.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರುಇತರ ಅಧಿಕಾರಿಗಳೊಂದಿಗೆ ಈ ಜಮೀನನ್ನುಪರಿಶೀಲಿಸಿದ್ದು,ಈ ಜಾಗ ಟ್ರಕ್‌ ಟರ್ಮಿನಲ್‌ಗೆ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ. ಇಷ್ಟು ವರ್ಷ ಬಾತಿ ಎನ್ನುತ್ತಿದ್ದವರು ಈಗ ಹೊಸ ಜಮೀನು ಹುಡುಕಬೇಕಿದೆ.

ಜಾತಿ ಜಮೀನು ಸೂಕ್ತವಲ್ಲ

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಪಾಲಿಕೆ ಆಯುಕ್ತ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಹಿತ ವಿವಿಧ ಅಧಿಕಾರಿಗಳ ಜತೆಗೆ ತೆರಳಿ ಬಾತಿಯಲ್ಲಿನ ಸರ್ಕಾರಿ ಜಮೀನನ್ನು ಪರಿಶೀಲಿಸಿದ್ದೇನೆ. ಆದರೆ, ಗುಡ್ಡ ಇರುವುದರಿಂದ ಟರ್ಮಿನಲ್‌ ನಿರ್ಮಿಸಲು ಸೂಕ್ತವಾಗಿಲ್ಲ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಅದಕ್ಕಾಗಿ ಹೆದ್ದಾರಿಗೆ ಸಮೀಪ ಇರುವ ಬೇರೆ ಜಮೀನು ಹುಡುಕಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಟರ್ಮಿನಲ್‌ ಬೇಗ ನಿರ್ಮಿಸಿ

ಲಾರಿಗಳನ್ನು ಈಗ ಟೋಲ್‌ ಬಳಿ, ಪೆಟ್ರೋಲ್‌ ಬಂಕ್‌ ಬಳಿ, ಬೇರೆಡೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತಿದೆ. ಟೈರ್‌ ಕಳವು, ಡೀಸೆಲ್‌ ಕಳವು, ದರೋಡೆಗಳಿಂದ ಮುಕ್ತಿ ಸಿಗಬೇಕಿದ್ದರೆ ಟ್ರಕ್‌ ಟರ್ಮಿನಲ್‌ ನಿರ್ಮಾಣಗೊಳ್ಳಬೇಕು. ಆಗದಾವಣಗೆರೆಯ ಸುತ್ತಮುತ್ಲಿನ 150 ಕಿಲೋಮೀಟರ್‌ ವ್ಯಾಪ್ತಿಯವರೆಗೂ ಇದರ ಪ್ರಯೋಜನವಾಗಲಿದೆ ಎಂದು ದಾವಣಗೆರೆ ಲೋಕಲ್‌ ಮತ್ತು ಗೂಡ್ಸ್‌ ಶೆಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎನ್‌.ದಾದಾಪೀರ್‌ ಅಭಿಪ್ರಾಯಪಡುತ್ತಾರೆ.

ನಗರದ ಸಂಚಾರ ದಟ್ಟಣೆ ತಗ್ಗಿಸಲು ಮಾತ್ರವಲ್ದೆ, ಚಾಲಕರ, ಕ್ಲೀನರ್‌ಗಳ ಅವಶ್ಯಕತೆ ಪೂರೈಸಿಕೊಳ್ಳಲೂ ಟರ್ಮಿನಲ್‌ ಬೇಕಾಗುತ್ತದೆ. ಟರ್ಮಿನಲ್‌ನಲ್ಲೇ ಲಾರಿ ನಿಲ್ಲಿಸಿದರೆ ಸುರಕ್ಷತೆಯ ಭಾವ ಮೂಡಲು ಸಾಧ್ಯ. ಜಿಲ್ಲಾಡಳಿತಹಾಗೂ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಹರಿಹರಕ್ಕೂ ಬೇಕು ಟ್ರಕ್ ಟರ್ಮಿನಲ್

ಇನಾಯತ್‌ ಉಲ್ಲಾ ಟಿ.

ಹರಿಹರ: ವ್ಯಾಪಾರಸ್ಥರ ಸರಕು ಹಾಗೂ ಕೃಷಿ ಉತ್ಪನ್ನಗಳ ಸಾಗಣೆ ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳಿಂದಾಗಿ ಹರಿಹರದಲ್ಲೂ ಲಾರಿಗಳ ಸಂಚಾರ ದಟ್ಟವಾಗಿದೆ.

ಸ್ಥಳೀಯವಾದ 150 ಹಾಗೂ ಹೊರಗಡೆಯಿಂದ ಬರುವ 100 ಲಾರಿಗಳು ಸಾಮಾನ್ಯವಾಗಿ ಇಲ್ಲಿರುತ್ತವೆ. ಈ ಲಾರಿಗಳ ಪೈಕಿ ಲೋಡಿಂಗ್, ಅನ್‌ಲೋಡಿಂಗ್‌ಗೆ ಕಾಯಬೇಕಾದವರು ಎಪಿಎಂಸಿ ಆವರಣ, ಪೆಟ್ರೋಲ್ ಬಂಕ್ ಆವರಣ, ಹೆದ್ದಾರಿಗಳ ಬದಿ ದಿನಗಟ್ಟಲೆ ಪಾರ್ಕಿಂಗ್ ಮಾಡುತ್ತಾರೆ.

‘ಮನವಿ ಮೇರೆಗೆ ಕೆಲವು ಗಂಟೆಗಳ ಕಾಲ ಲಾರಿಯನ್ನು ಅಲ್ಲಿ, ಇಲ್ಲಿ ಪಾರ್ಕಿಂಗ್ ಮಾಡಬಹುದು. ಆದರೆ, ದಿನಗಟ್ಟಲೆ ನಿಲ್ಲಿಸಿದಾಗ ಬೇರೆಡೆ ನಿಲ್ಲಿಸಲು ಸೂಚಿಸಲಾಗುತ್ತದೆ. ₹ 20 ಲಕ್ಷದಿಂದ ₹ 40 ಲಕ್ಷದವರೆಗೆ ಬಂಡವಾಳಹೂಡಿ ಸರಕು ಸಾಗಣೆ ಮಾಡುವ ಲಾರಿ ಮಾಲೀಕರು ಅರ್ಧ ದಿನ ಅಥವಾ ಒಂದೆರಡು ದಿನ ಕಾಯುವಂತಹ ಸಂದರ್ಭ ಬಂದಾಗ ಅವರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಇಂತಹ ಜಾಗಗಳಲ್ಲಿ ನಿಲ್ಲಿಸಿದಾಗಚಾಲಕ ಮತ್ತು ಕ್ಲೀನರ್ ಕ್ಯಾಬಿನ್ ಒಳಗೆ ನಿಶ್ಚಿಂತೆಯಿಂದ ನಿದ್ದೆ ಮಾಡಲಾಗದು. ಲಾರಿಯ ಬ್ಯಾಟರಿ, ಟೈರ್ ಅಥವಾ ಬೇರೆ ಬಿಡಿ ಭಾಗಗಳನ್ನು ಯಾರು ಕಳವು ಮಾಡುತ್ತಾರೋ ಎಂಬ ಭೀತಿಯಲ್ಲೇ ಇರಬೇಕಾಗುತ್ತದೆ. ಚಾಲಕ ಮತ್ತು ಕ್ಲೀನರ್ ತಿಂಡಿ, ಊಟಕ್ಕೆ ಅಥವಾ ಪ್ರಕೃತಿ ಕರೆಗೆಂದು ಲಾರಿ ಬಿಟ್ಟು ಒಂದರ್ಧ ಗಂಟೆ ಆಚೆ ಹೋಗಲೂ ಹಿಂದೇಟು ಹಾಕುತ್ತಾರೆ. ಲಾರಿಗಳನ್ನು ಪಾರ್ಕಿಂಗ್ ಮಾಡಿದವರು ಒಂದು ರೀತಿಯಲ್ಲಿ ಲಾರಿಯಲ್ಲೇ ಬಂಧನಕ್ಕೆ ಒಳಗಾದ ಶಿಕ್ಷೆ ಅನುಭವಿಸುತ್ತಾರೆ.

ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹರಿಹರವು ಜಿಲ್ಲೆಯ 2ನೇ ದೊಡ್ಡ ನಗರವೂ ಹೌದು. ವಿವಿಧ ವಾಣಿಜ್ಯ ವಹಿವಾಟುಗಳಿಂದಾಗಿ ಲೋಡಿಂಗ್, ಅನ್‌ ಲೋಡಿಂಗ್‌ಗಾಗಿ ನಿತ್ಯ ನೂರಕ್ಕೂ ಹೆಚ್ಚು ಲಾರಿಗಳ ಆಗಮನ, ನಿರ್ಗಮನ ಸಹಜ ಎಂಬಂತಿದೆ.

ಇಂತಹ ಲಾರಿಗಳನ್ನು ಒಂದೆರಡು ದಿನ ಪಾರ್ಕಿಂಗ್ ಮಾಡಲು ಸುಸಜ್ಜಿತವಾದ ಟ್ರಕ್ ಟರ್ಮಿನಲ್ ಅಗತ್ಯ ಹರಿಹರಕ್ಕೂ ಇದೆ. ಆಗ ಚಾಲಕ, ಕ್ಲೀನರ್‌ಗಳಿಗೆ ಲಾರಿಯ ಸುರಕ್ಷತೆ ಜೊತೆಗೆ ವಿಶ್ರಾಂತಿ, ಪ್ರಕೃತಿ ಕರೆಗೆ ವ್ಯವಸ್ಥೆಯಾಗುತ್ತದೆ. ಈ ಕುರಿತು ಸ್ಥಳೀಯ ನಗರಸಭೆ, ತಾಲ್ಲೂಕು ಆಡಳಿತದವರು ಗಮನ ಹರಿಸಬೇಕಾಗಿದೆ.

ತೆರಿಗೆ ಅಧಿಕ, ಸೌಲಭ್ಯ ಅತ್ಯಲ್ಪ

ರಸ್ತೆ ತೆರಿಗೆ, ಪರ್ಮಿಟ್ ಶುಲ್ಕ, ಜಿಎಸ್‌ಟಿ, ಟೋಲ್ ಹೀಗೆ ನಾನಾ ರೀತಿಯಲ್ಲಿ ಲಾರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಪಾವತಿಯಾಗುತ್ತದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ದುಬಾರಿ ಇಂಧನ ತುಂಬಿಸಿ ಬಾಡಿಗೆಗೆ ತೆರಳುತ್ತೇವೆ. ಇದರಲ್ಲಿ ಸಾಲದ ಕಂತು ಪಾವತಿ ಮಾಡಿ ಚಾಲಕ, ಕ್ಲೀನರ್‌ಗೆ ಸಂಬಳ ನೀಡಿ ಮೊತ್ತ ಉಳಿದರೆ ಅದೇ ಲಾಭಾಂಶ. ಆದರೆ, ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯ ಅತ್ಯಲ್ಪ. ಇದರ ನಡುವೆ ನಮ್ಮ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ ಕಾಡುತ್ತದೆ. ನಗರಸಭೆಯಿಂದ ಟ್ರಕ್ ಟರ್ಮಿನಲ್‌ ಇಲ್ಲಿ ನಿರ್ಮಿಸುವ ಅಗತ್ಯವಿದೆ.

–ಜಾಕಿರ್ ಖಾನ್ ಹಳ್ಳಳ್ಳಿ,ಹರಿಹರ ಲಾರಿ ಮಾಲಿಕರ ಸಂಘದ ಅಧ್ಯಕ್ಷ

ಚರ್ಚಿಸಿ ತೀರ್ಮಾನ

ಹರಿಹರ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ, ಹಿರಿಯ ಅಧಿಕಾರಿ
ಗಳೊಂದಿಗೆ ಚರ್ಚಿಸಿ ನಗರ ವ್ಯಾಪ್ತಿಯಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲು ಪ್ರಯತ್ನಿಸಲಾಗವುದು

–ಐಗೂರು ಬಸವರಾಜ್,ಹರಿಹರ ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.