ಕಡರನಾಯ್ಕನಹಳ್ಳಿ: ಆಟಿ ಅಮಾವಾಸ್ಯೆ ಪ್ರಯುಕ್ತ ಉಕ್ಕಡಗಾತ್ರಿ ಅಜ್ಜಯ್ಯನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಹರಿದು ಬಂದರು.
ಆಟಿ ಅಥವಾ ಆಷಾಢ ಅಮಾವಾಸ್ಯೆಯಂದು ಅಜ್ಜಯ್ಯನ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ರಾಜ್ಯ– ಹೊರ ರಾಜ್ಯಗಳಿಂದ ಭಕ್ತರು ಸೇರಿದ್ದರು. ಈ ದಿನ ದಾನ ಧರ್ಮಗಳನ್ನು ಮಾಡಿದರೆ ಭಗವಂತ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯಿಂದ ಕೈಲಾದಷ್ಟು ದೇವಸ್ಥಾನಕ್ಕೆ ಕಾಣಿಕೆ ಸಲ್ಲಿಸಿದರು.
ನಿರಂತರ ಮಳೆ ಹಾಗೂ ತುಂಗಾ ಜಲಾಶಯದಿಂದ ನೀರು ಹರಿದು ಬರುತ್ತಿರುವುದರಿಂದ ಸ್ನಾನ ಘಟ್ಟ ಜಲಾವೃತವಾಗಿದೆ. ಭಕ್ತರು ದಡದಲ್ಲೇ ಸ್ನಾನ ಮಾಡಿ ಅಜ್ಜಯ್ಯನ ದರ್ಶನ ಪಡೆದರು. ಕೆಲವು ಭಕ್ತರು ಇಂದು ನಮ್ಮ ಪೂರ್ವಜರಿಗೆ ತರ್ಪಣ ಬಿಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ನದಿಯಲ್ಲಿ ತರ್ಪಣ ಬಿಟ್ಟರು.
‘ಆಟಿ ಅಮಾವಾಸ್ಯೆಯಂದು ತೀರ್ಥ ಸ್ನಾನ ಮಾಡಿದರೆ ರೋಗ– ರುಜಿನಗಳು ದೂರವಾಗುತ್ತವೆ. ಮತ್ತು ಹಿಂದಿನ ಕರ್ಮಗಳನ್ನು ತೊಳೆದು ಹೊಸ ಜೀವನ ಪ್ರಾರಂಭಿಸಲು ಶ್ರೇಷ್ಠ ದಿನವಿದು. ಅದಕ್ಕಾಗಿ ಕುಟುಂಬ ಸಮೇತರಾಗಿ ಅಜ್ಜಯ್ಯನ ದರ್ಶನ ಪಡೆದಿದ್ದೇವೆ’ ಎಂದು ಚಿತ್ರದುರ್ಗದ ಪ್ರಾಣೇಶ್ ತಿಳಿಸಿದರು.
ಅಮಾವಾಸ್ಯೆ ಪ್ರಯುಕ್ತ ಕರಿಬಸವೇಶ್ವರ ಅಜ್ಜಯ್ಯಯನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.