ADVERTISEMENT

ರಸಗೊಬ್ಬರ ಕೊರತೆಯಾಗದಂತೆ ಕ್ರಮ: ಶಾಸಕ ಶಾಂತನಗೌಡ

ಹೊನ್ನಾಳಿ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆ, ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 7:38 IST
Last Updated 26 ಸೆಪ್ಟೆಂಬರ್ 2025, 7:38 IST
ಹೊನ್ನಾಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆ, ವಜ್ರಮಹೋತ್ಸವವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು
ಹೊನ್ನಾಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸಭೆ, ವಜ್ರಮಹೋತ್ಸವವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು   

ಹೊನ್ನಾಳಿ: ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾಣಿಜ್ಯ ಮಳಿಗೆಗಳಿಂದ ಬರುವ ಬಾಡಿಗೆ ಹಾಗೂ ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟದಿಂದ ನಮ್ಮ ಸಂಘವು ಲಾಭದಲ್ಲಿ ಮುನ್ನಡೆಯುತ್ತಿದೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಗುರುವಾರ ತಾಲ್ಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಸಭೆ ಹಾಗೂ ವಜ್ರಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ವರ್ಷದಲ್ಲಿ ಅವಧಿಗೆ ಮುನ್ನ ಮಳೆ ಬಂದಿದ್ದರಿಂದ ರಸಗೊಬ್ಬರದ ಕೊರತೆ ಉಂಟಾಯಿತು. ಮುಂದಿನ ವರ್ಷ ಈ  ರೀತಿ ಅಭಾವ ಆಗದಂತೆ ನೋಡಿಕೊಳ್ಳಲಾಗುವುದು. ರಸಗೊಬ್ಬರ ಹಾಗೂ ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಫೆಡರೇಶನ್ ವತಿಯಿಂದ ದಾಸ್ತಾನು ಮಾಡಿ ರೈತರಿಗೆ ವಿತರಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ವಿಳಂಬ ಕುರಿತು ಷೇರುದಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ‘ನಮ್ಮ ಸಂಘದ ಜಾಗವನ್ನು ರಸ್ತೆ ವಿಸ್ತರಣೆಗೆ ಬಳಸಿಕೊಂಡಿರುವುದರಿಂದ ಅದಕ್ಕೆ ಭೂಸ್ವಾಧೀನ ಪರಿಹಾರ ಎಂದು ₹ 33 ಲಕ್ಷ ಬಂದಿದೆ. ನಮ್ಮ ಸಂಘದ ಲಾಭಾಂಶ ₹ 7 ಲಕ್ಷ ಸೇರಿ ಒಟ್ಟು ₹ 40 ಲಕ್ಷ ಲಭ್ಯವಿದೆ. ₹ 1 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ತಯಾರಿಸಲಾಗಿದ್ದು, ತಾಂತ್ರಿಕ ದೋಷದ ಕಾರಣ ಕಟ್ಟಡ ನಿರ್ಮಾಣ ವಿಳಂಬವಾಗುತ್ತಿದೆರು. ಶೀಘ್ರದಲ್ಲಿಯೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಇದೀಗ ತಾಲ್ಲೂಕಿನಲ್ಲಿ ಹೊಸದಾಗಿ ಟಿಎಪಿಸಿಎಂಎಸ್ ಸ್ಥಾಪನೆಯಾಗಿದ್ದು, ನ್ಯಾಮತಿ ತಾಲ್ಲೂಕಿನ ಮತದಾರರ ಪಟ್ಟಿಯನ್ನು ಹೊನ್ನಾಳಿ ತಾಲ್ಲೂಕಿನಿಂದ ಕೈಬಿಡಲಾಗುವುದು’ ಎಂದರು.

‘ನಾನು ವಜ್ರಮಹೋತ್ಸವ ಸಮಾರಂಭಕ್ಕೆಂದು ಬಂದು ವಾರ್ಷಿಕ ಮಹಾಸಭೆಯಲ್ಲಿ ಕುಳಿತುಕೊಳ್ಳುವಂತಾಗಿದೆ. ಇದರಿಂದ ಇಲ್ಲಿನ ರೈತರು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಂಡಿರುವುದು ತಿಳಿಯಿತು. ಹೀಗಾಗಿ ಈ ಭಾಗದ ಸಂಘಗಳು ಆರೋಗ್ಯಕರವಾಗಿ ಬೆಳೆಯುತ್ತಿವೆ. ನಮ್ಮ ಭಾಗದ ರೈತರು, ಷೇರುದಾರರು ಪ್ರಶ್ನಿಸುವ ಗುಣ ವಿರಳ’ ಎಂದು ಹರಪನಹಳ್ಳಿ ಶಾಸಕಿ ಲತಾ ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಒಂದು ಸಂಸ್ಥೆ 75 ವರ್ಷ ಕಳೆದಿದೆ ಎಂದರೆ ಆ ಸಂಘದ ಪಾರದರ್ಶಕ ಆಡಳಿತ, ನಿಷ್ಠೆ, ಪ್ರಾಮಾಣಿಕತೆ ಕಾರಣ. ಈ ಸಂಘವು ಶತಮಾನವನ್ನು ಪೂರೈಸಲಿ’ ಎಂದು ಶುಭ ಹಾರೈಸಿದರು.

ಸಂಘದ ಕಾರ್ಯದರ್ಶಿ ಮುರುಗೇಶ್, ಆಡಳಿತ ಮಂಡಳಿಯ ವರದಿ ಓದಿದರು. 2023- 24ನೇ ಸಾಲಿನ ಆಡಿಟ್‌ ಆದ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿ ಷೇರುದಾರರಿಂದ ಒಪ್ಪಿಗೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಎಚ್.ಸಿ. ಶೇಖರಪ್ಪ, ಉಪಾಧ್ಯಕ್ಷ ಚೇತನ್, ನಿರ್ದೇಶಕರಾದ ಎಂ.ಎಚ್. ಗಜೇಂದ್ರಪ್ಪ, ಡಿ.ಮಂಜುನಾಥ್, ಎಚ್.ಬಸವರಾಜಪ್ಪ, ಎಚ್.ಜಿ. ಶಂಕರಮೂರ್ತಿ, ಕೆ.ಬಿ. ಸಿದ್ದನಗೌಡ, ರಾಜು ಸರಳಿನಮನೆ, ಎಂ.ಜಿ. ಹಾಲಪ್ಪ, ಎಚ್.ಡಿ. ಬಸವರಾಜಪ್ಪ, ಎಚ್.ಸಿ. ಪ್ರಕಾಶ್, ಅನಂತನಾಯ್ಕ, ನಾಗಮ್ಮ, ಬಸಮ್ಮ ಕೆಂಗಲಹಳ್ಳಿ ಷಣ್ಮುಖಪ್ಪ, ವರದರಾಜಪ್ಪ ಗೌಡ, ಎಚ್.ಎ. ಉಮಾಪತಿ ಉಪಸ್ಥಿತರಿದ್ದರು.

ಲೆಕ್ಕಿಗರಾದ ಗೋಪಿ, ಸುಧಾ, ಅಕ್ಕಿಗಿರಣಿ ವಿಭಾಗದ ಸುರೇಶ್ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.