ದಾವಣಗೆರೆ: ಶೈಕ್ಷಣಿಕ ವರ್ಷವೊಂದು ಈಗ ತಾನೇ ಮುಗಿದಿದೆ. ಮುಂಬರುವ ಶೈಕ್ಷಣಿಕ ವರ್ಷದತ್ತ ಚಿತ್ತ ಹರಿಸಿರುವ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರು, ತಮ್ಮ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಹೆಚ್ಚಿಸಲು ಮನೆ ಮನೆ ಭೇಟಿ, ಸೌಲಭ್ಯಗಳ ಮಾಹಿತಿಯುಳ್ಳ ಕರಪತ್ರ ಹಂಚುವಿಕೆ, ಫ್ಲೆಕ್ಸ್ ಅಳವಡಿಕೆ ಕಾರ್ಯ ಆರಂಭಿಸಿದ್ದು, ಇದಕ್ಕೆ ಪ್ರತಿಯಾಗಿ ಸರ್ಕಾರಿ ಶಾಲೆ ಶಿಕ್ಷಕರೂ ತಮ್ಮಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂಬ ಅಭಿಯಾನ ಆರಂಭಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ, ಪಾಠ ಸರಿಯಾಗಿ ಮಾಡುವುದಿಲ್ಲವೆಂದು ಬಹುತೇಕ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದೆ. ಇದರಿಂದ ಎಚ್ಚೆತ್ತಿರುವ ಶಿಕ್ಷಕರು ದಾನಿಗಳ ನೆರವಿನಿಂದ ಶಾಲೆಯನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ನೀಡಿ, 2025–26ನೇ ಸಾಲಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುವಂತೆ ಪಾಲಕರ ಮನವೊಲಿಸುತ್ತಿದ್ದಾರೆ.
‘ನಮ್ಮ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 223 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯು ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಹೊಂದಿದೆ. ಈ ಕುರಿತ ಮಾಹಿತಿ ಒಳಗೊಂಡ ಕರಪತ್ರ, ಬ್ಯಾನರ್ ಹಿಡಿದು ಗ್ರಾಮದಲ್ಲಿ ಜಾಥಾ ನಡೆಸಿದ್ದು, ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ 31ಕ್ಕೆ 6 ವರ್ಷ ಪೂರ್ಣಗೊಳ್ಳುವ, ಅಂಗನವಾಡಿ ಶಿಕ್ಷಣ ಪೂರೈಸಿರುವ 15 ಮಕ್ಕಳ ಪಟ್ಟಿಯನ್ನು ಪಡೆದು ಅವರ ಪಾಲಕರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ’ ಎನ್ನುತ್ತಾರೆ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕೆ.ಎಂ. ಸಂತೋಷ್‌ಕುಮಾರ್.
‘ಶಾಸಕ ಶಾಮನೂರು ಶಿವಶಂಕರಪ್ಪ ಅವರ ಶಿಫಾರಸಿನ ಮೇರೆಗೆ ಶಾಲೆಗೆ ಸ್ಮಾರ್ಟ್ ಸಿಟಿ ವತಿಯಿಂದ ₹ 80 ಲಕ್ಷ ಬಿಡುಗಡೆಯಾಗಿತ್ತು. ಸುಸಜ್ಜಿತ 9 ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರತ್ಯೇಕ ಅಡುಗೆ ಮನೆ ಇದೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದರ ನಿಧಿಯಿಂದ ₹ 6 ಲಕ್ಷ ಬಿಡುಗಡೆ ಮಾಡಿದ್ದರಿಂದ ಕಾಂಪೌಂಡ್ ಎತ್ತರಿಸಿ, ಗೇಟ್ ಅಳವಡಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮವನ್ನೂ ಪರಿಚಯಿಸಲಾಗಿದೆ. 9 ಜನ ಶಿಕ್ಷಕರಿದ್ದು, ಪಾಠೋಪಕರಣ ಮೂಲಕ ಗುಣಮಟ್ಟದ ಕಲಿಕೆಗೆ ಒತ್ತು ನೀಡಿದ್ದೇವೆ. ವಿದ್ಯಾರ್ಥಿನಿ ಲಕ್ಷ್ಮಿಬಾಯಿ ರಾಜ್ಯಮಟ್ಟದ ಕರಾಠೆ ಸ್ಪರ್ಧೆಯಲ್ಲಿ ಎರಡು ಬಾರಿ ಸ್ಥಾನ ಪಡೆದುಕೊಂಡಿದ್ದಾಳೆ. ಅನುಶ್ರೀ ಬಲಗೈ ನ್ಯೂನತೆ ಹೊಂದಿದ್ದರೂ 50 ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ’ ಎಂದು ಅವರು ವಿವರಿಸಿದರು.
ಶಾಲೆಯ ಹಳೆ ವಿದ್ಯಾರ್ಥಿ, ನಿವೃತ್ತ ಎಂಜಿನಿಯರ್ ಸಿದ್ದನಗೌಡ ಅವರು ತಮ್ಮ ತಂದೆ ಕೆ.ಎಸ್. ರೇವಣಸಿದ್ದಪ್ಪ ಅವರ ಸ್ಮರಣಾರ್ಥ ₹ 4 ಲಕ್ಷ ವೆಚ್ಚದಲ್ಲಿ ರಂಗ ಮಂದಿರ ನಿರ್ಮಿಸಿಕೊಟ್ಟಿದ್ದು, ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರನಾಯಕರ ಜಯಂತಿ ಇತರೆ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಿದೆ. ಕೆಲ ಹಳೆ ವಿದ್ಯಾರ್ಥಿಗಳು ತಲಾ ₹ 8,000 ಮೌಲ್ಯದ 3 ಅಲ್ಮೇರಾ ಕೊಡಿಸಿದ್ದಾರೆ. ರೋಟರಿ ಕ್ಲಬ್ ವತಿಯಿಂದ ಡೆಸ್ಕ್, ಬೆಂಚ್‌ಗಳು ಲಭ್ಯವಾಗಿವೆ. ದಾವಣಗೆರೆಯ ಶಶಿ ಮೊಬೈಲ್ಸ್ ಮಾಲೀಕ ಶಶಿಕುಮಾರ್ ಜೆ. ಹಾಗೂ ಸ್ನೇಹಿತ ಲೋಕಿಕೆರೆ ಬಸವರಾಜ್ ಅವರು 7ನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ₹ 5,000 ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರ ಆಸಕ್ತಿಯಿಂದಾಗಿ ಶಾಲೆ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಇಂಗ್ಲಿಷ್ ಮಾಧ್ಯಮಕ್ಕೆ 15 ವಿದ್ಯಾರ್ಥಿಗಳು
ದಾಖಲು ನಮ್ಮ ಶಾಲೆಯು ಪಿ.ಎಂಶ್ರೀ ಯೋಜನೆಗೆ ಆಯ್ಕೆಯಾಗಿರುವುದರಿಂದ ಸಾಕಷ್ಟು ಅನುದಾನ ಲಭ್ಯವಾಗುತ್ತಿದ್ದು ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಾಲೆಗೆ ಬಣ್ಣ ಗೋಡೆಬರಹಗಳನ್ನು ಬರೆಯಿಸಿ ಆಕರ್ಷಕಗೊಳಿಸಲಾಗಿದೆ. ಎಲ್‌ಕೆಜಿ ಯುಕೆಜಿ 1ರಿಂದ 7ನೇ ತರಗತಿವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 2024–26ನೇ ಶೈಕ್ಷಣಿಕ ಸಾಲಿನಿಂದ ಇಂಗ್ಲಿಷ್ ಮಾಧ್ಯಮ ಆರಂಭವಾಗಿದ್ದು 2025–26ನೇ ಸಾಲಿಗೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ದಾಖಲಾಗಿದ್ದಾರೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ 1 ಜೊತೆ ಶೂ ಮತ್ತು ಸಾಕ್ಸ್ 2 ಜೊತೆ ಸಮವಸ್ತ್ರ ಮಧ್ಯಾಹ್ನದ ಬಿಸಿಯೂಟ ಹಾಲು ರಾಗಿ ಮಾಲ್ಟ್ ಮೊಟ್ಟೆ/ಬಾಳೆಹಣ್ಣು ಪೌಷ್ಟಿಕಾಂಶಯುಕ್ತ ಮಾತ್ರೆಗಳನ್ನು ನೀಡಲಾಗುತ್ತದೆ. ಪ್ರತಿಭಾ ಕಾರಂಜಿ ಕಲಿಕೋತ್ಸವ ಕ್ವಿಜ್ ಆಶುಭಾಷಣ ಸ್ಮರಣಶಕ್ತಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗೂ ಉತ್ತೇಜನ ನೀಡುತ್ತಿದ್ದು ಪಾಲಕರು ಸದ್ಬಳಕೆ ಮಾಡಿಕೊಳ್ಳಬೇಕು. ಜಯಮ್ಮ ಮುಖ್ಯಶಿಕ್ಷಕಿ ಪಿ.ಎಂ.ಶ್ರೀ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂತೆಪೇಟೆ ಜಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.