ADVERTISEMENT

ಬಸವಾಪಟ್ಟಣ | ದುಬಾರಿಯಾಗುತ್ತಿದೆ ಎತ್ತಿನ ಬೇಸಾಯ..

ಯಂತ್ರೋಪಕರಣಗಳ ಅವಲಂಬನೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 7:38 IST
Last Updated 10 ಜೂನ್ 2024, 7:38 IST
ಬಸವಾಪಟ್ಟಣದಲ್ಲಿ ಎತ್ತುಗಳಿಂದ ಉಳುಮೆ ಮಾಡುತ್ತಿರುವ ರೈತರು
ಬಸವಾಪಟ್ಟಣದಲ್ಲಿ ಎತ್ತುಗಳಿಂದ ಉಳುಮೆ ಮಾಡುತ್ತಿರುವ ರೈತರು   

ಬಸವಾಪಟ್ಟಣ: ನೂರಾರು ವರ್ಷಗಳಿಂದ ಎತ್ತುಗಳನ್ನು ಅವಲಂಬಿಸಿಕೊಂಡು ಬೇಸಾಯ ಮಾಡುತ್ತಿದ್ದ ರೈತರಿಗೀಗ ಎತ್ತಿನ ಬೇಸಾಯ ದುಬಾರಿಯಾಗುತ್ತಿದೆ.

ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಅವಲಂಬನೆ ಅನಿವಾರ್ಯವಾಗಿದೆ.

ಎತ್ತುಗಳಿಗೆ ದುಬಾರಿ ದರ, ಮೇವಿನ ಅಭಾವ ಹಾಗೂ ಎತ್ತುಗಳ ಆರೈಕೆ ಸೇರಿದಂತೆ ಎಲ್ಲವೂ ಈಗ ದುಬಾರಿಯಾಗಿರುವುದರಿಂದ ರೈತರು ಎತ್ತಿನ ಬೇಸಾಯದಿಂದ ವಿಮುಖವಾಗುವಂತಾಗಿದೆ.

ADVERTISEMENT

‘50 ವರ್ಷಗಳ ಹಿಂದೆ ₹ 200ಕ್ಕೆ ಒಂದು ಜೊತೆ ಮಜಬೂತಾದ ಎತ್ತುಗಳನ್ನು ಖರೀದಿಸುತ್ತಿದ್ದೆವು. ಆದರೆ ಈಗ ಒಂದು ಜೊತೆ ಎತ್ತುಗಳನ್ನು ಖರೀದಿಸಲು ಕನಿಷ್ಠ ₹ 50,000ದಿಂದ ₹ 1 ಲಕ್ಷದವರೆಗೆ ಹೊಂದಿಸಬೇಕಿದೆ’ ಎನ್ನುತ್ತಾರೆ ದಾಗಿನಕಟ್ಟೆಯ ರೈತ ರಂಗಸ್ವಾಮಿ.

‘ಎತ್ತುಗಳಿಗೆ ಪ್ರತಿದಿನ ಹಸಿ ಮೇವು, ಸಿದ್ಧಪಡಿಸಿದ ಪಶು ಆಹಾರ, ಉತ್ತಮವಾದ ಕೊಟ್ಟಿಗೆ, ಅವುಗಳಿಗೆ ಬರುವ ರೋಗ ರುಜಿನಗಳ ನಿವಾರಣೆಗೆ ಔಷಧ ಪೂರೈಕೆ. ಸುಗ್ಗಿಯಲ್ಲಿ ಒಣ ಮೇವನ್ನು ಸಂಗ್ರಹಿಸಿ ಬಣವೆಗಳನ್ನು ನಿರ್ಮಿಸಿ ಇಡೀ ವರ್ಷ ಬಳಸುವುದು ಮುಂತಾದ ಕೆಲಸಕ್ಕೆ ಹೆಚ್ಚಿನ ಹಣ ಅಗತ್ಯವಿರುವುದರಿಂದ ಈಗ ಎತ್ತುಗಳ ಬೇಸಾಯ ರೈತರಿಗೆ ಹೊರೆಯಾಗುತ್ತಿದೆ’ ಎಂದು ಅವರು ಹೇಳಿದರು.

‘ಟ್ರ್ಯಾಕ್ಟರ್‌ಗಳ ಬಳಕೆಗೂ ಮೊದಲು ಮನೆಗಳಲ್ಲಿ ಸಾಕುವ ಹಸುಗಳಿಂದ ಹುಟ್ಟುವ ಹೋರಿ ಕರುಗಳನ್ನು ಬೆಳೆಸಿ, ಪಳಗಿಸಿ ವ್ಯವಸಾಯಕ್ಕೆ ಬಳಸುತ್ತಿದ್ದೆವು. ಈಗ ಕಾಲ ಬದಲಾಗಿದೆ. ಜವಾರಿ ಹಸುಗಳ ಬದಲಾಗಿ ಅತಿ ಹೆಚ್ಚು ಹಾಲು ಕೊಡುವ ಜರ್ಸಿ ಮತ್ತು ಎಚ್‌.ಎಫ್‌ ತಳಿಯ ಹಸುಗಳನ್ನು ಸಾಕಲಾಗುತ್ತಿದೆ. ಅವು ಜನ್ಮ ನೀಡುವ ಹೋರಿಕರುಗಳನ್ನು ಕೃಷಿಗೆ ಬಳಸಲು ಆಗುವುದಿಲ್ಲ. ಈಗ ಗ್ರಾಮಗಳಲ್ಲಿಯೂ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ನಿವೇಶನದ ಕೊರತೆ ಇದೆ’ ಎನ್ನುತ್ತಾರೆ ಯಲೋದಹಳ್ಳಿಯ ರೈತ ಹನುಮಂತಪ್ಪ.

‘ತಲತಲಾಂತರದಿಂದ ಎತ್ತುಗಳಿಂದಲೇ ಬೇಸಾಯ ಮಾಡಿಕೊಂಡು ಬಂದಿದ್ದೇವೆ. 32 ಎಕರೆ ಖುಷ್ಕಿ ಭೂಮಿ ಇದೆ. ಇದರಲ್ಲಿ ಮೆಕ್ಕೆಜೋಳ, ಶೇಂಗಾ, ಹೈಬ್ರೀಡ್‌ ಜೋಳ, ತೊಗರಿ, ಹುರಳಿ, ಅವರೆ ಬೆಳೆಯುತ್ತೇವೆ. ಒಂದು ಟ್ರ್ಯಾಕ್ಟರ್‌ ಇದ್ದರೂ ಭೂಮಿ ಹದ ಮಾಡಲಿಕ್ಕೆ ಮಾತ್ರ ಬಳಸುತ್ತೇವೆ. ಬಿತ್ತನೆ, ಎಡಕುಂಟೆ ಸೇರಿದಂತೆ ಉಳಿದ ಎಲ್ಲಾ ಕೃಷಿ ಕಾರ್ಯಗಳನ್ನು ಎತ್ತುಗಳಿಂದಲೇ ನಡೆಸುತ್ತಿದ್ದೇವೆ’ ಎಂದು ಅನಂತಹಳ್ಳಿಯ ರೈತ ರವಿಚಂದ್ರ ಹೇಳಿದರು.

‘ತುಮಕೂರಿನ ಸಿದ್ಧಲಿಂಗೇಶ್ವರನ ಜಾತ್ರೆಯಲ್ಲಿ ₹ 1.20 ಲಕ್ಷ ಕೊಟ್ಟು ಎರಡೂವರೆ ವರ್ಷ ವಯಸ್ಸಿನ ಎರಡು  ಎತ್ತುಗಳನ್ನು ತಂದಿದ್ದೇವೆ. ಅವುಗಳಿಗೆ ರಾಗಿ ಹುಲ್ಲು, ಮೆಕ್ಕೆಜೋಳದ ಸೊಪ್ಪೆ ಮತ್ತು ಮೆಕ್ಕೆಜೋಳದ ಹಿಟ್ಟು, ಶೇಂಗಾ ಹಿಂಡಿ, ಅಕ್ಕಿ ಬೂಸಾ ನೀಡುತ್ತಿದ್ದೇವೆ. ಈಗ ಎತ್ತುಗಳ ಬೇಸಾಯ ದುಬಾರಿಯಾಗುತ್ತಿರುವುದು ಸತ್ಯವಾಗಿದ್ದರೂ, ಪ್ರತಿದಿನ ಅವುಗಳಿಂದ ದೊರೆಯುವ ಸಗಣಿ, ಗಂಜಲ, ಅವು ತಿಂದು ಉಳಿದ ಮೇವು ಹೊಲಗಳಿಗೆ ಉತ್ಕೃಷ್ಟವಾದ ಗೊಬ್ಬರವಾಗುತ್ತಿದೆ. ಇದರಿಂದ ಜಮೀನುಗಳಿಗೆ ಸಾಕಷ್ಟು ಪೌಷ್ಠಿಕಾಂಶ ದೊರೆಯುತ್ತದೆ. ಆದರೆ ಈಗ ಎಲ್ಲಾ ರೈತರಿಗೂ ಈ ರೀತಿ ಎತ್ತು ಸಾಕಲು ಆಗದಿರುವುದು ಸತ್ಯ’ ಎಂದರು.

ಬಸವಾಪಟ್ಟಣ ಸಮೀಪದ ಅನಂತನಹಳ್ಳಿ ಗ್ರಾಮದ ರೈತ ರವಿಚಂದ್ರ ಸಾಕಿರುವ ಎತ್ತುಗಳು

ಈಗ ಕೃಷಿಗೆ ಟ್ರ್ಯಾಕ್ಟರ್‌ಗಳ ಬಳಕೆ ಹೆಚ್ಚಾಗಿದ್ದರೂ, ಶೇ 20ರಷ್ಟು ಸಣ್ಣ ರೈತರು ಎತ್ತುಗಳನ್ನು ಬಳಸುತ್ತಿದ್ದಾರೆ. ಕೊಟ್ಟಿಗೆ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡುತ್ತಿದೆ. ಅಲ್ಲಿ ಹಸು ಮತ್ತು ಎಮ್ಮೆಗಳೊಂದಿಗೆ ಎತ್ತುಗಳನ್ನೂ ಸಾಕುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಕೃಷಿ ಅಧಿಕಾರಿ ಎನ್‌. ಲತಾ.

ಎತ್ತುಗಳಿಗೆ ಪ್ರತ್ಯೇಕ ಕೊಟ್ಟಿಗೆ ಕಟ್ಟಲು ಸ್ಥಳಾವಕಾಶವೂ ಇಲ್ಲ. ಅನಿವಾರ್ಯವಾಗಿ ಕೃಷಿಗೆ ಟ್ರ್ಯಾಕ್ಟರ್‌ಗಳನ್ನು ಅವಲಂಬಿಸಬೇಕಿದೆ.
ಹನುಮಂತಪ್ಪ ರೈತ ಯಲೋದಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.