ADVERTISEMENT

ಅಡಿಕೆ ತೋಟದಲ್ಲಿ ಸಮಗ್ರ ಬೆಳೆಯ ಪ್ರಯೋಗ

ಸಂಗಾಹಳ್ಳಿ ರೈತ ಮಂಜುನಾಥರಾವ್‌ ಸಾಧನೆ

ಎನ್.ವಿ.ರಮೇಶ್
Published 19 ಅಕ್ಟೋಬರ್ 2022, 6:08 IST
Last Updated 19 ಅಕ್ಟೋಬರ್ 2022, 6:08 IST
ಬಸವಾಪಟ್ಟಣ ಸಮೀಪದ ಸಂಗಾಹಳ್ಳಿಯ ರೈತ ಮಂಜುನಾಥರಾವ್ ಅವರು ತಮ್ಮ ಅಡಿಕೆ ತೋಟದಲ್ಲಿ ಚೀಲಗಳಲ್ಲಿ ಮಣ್ಣು ತುಂಬಿಸಿ ಮೆಣಸಿನಕಾಯಿ ಬೆಳೆದಿರುವುದು.
ಬಸವಾಪಟ್ಟಣ ಸಮೀಪದ ಸಂಗಾಹಳ್ಳಿಯ ರೈತ ಮಂಜುನಾಥರಾವ್ ಅವರು ತಮ್ಮ ಅಡಿಕೆ ತೋಟದಲ್ಲಿ ಚೀಲಗಳಲ್ಲಿ ಮಣ್ಣು ತುಂಬಿಸಿ ಮೆಣಸಿನಕಾಯಿ ಬೆಳೆದಿರುವುದು.   

ಬಸವಾಪಟ್ಟಣ: ಸಮೀಪದ ಸಂಗಾಹಳ್ಳಿಯ ರೈತ ಎಸ್‌. ಮಂಜುನಾಥರಾವ್‌ ತಮ್ಮ ಒಂದು ಎಕರೆ ಅಡಿಕೆ ತೋಟದಲ್ಲಿ ತೆಂಗು, ಬಾಳೆ, ಹೂ, ಹಣ್ಣು, ತರಕಾರಿ ಇತ್ಯಾದಿ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ.

ಚನ್ನಗಿರಿ ತಾಲ್ಲೂಕಿನಲ್ಲಿ ಈಗ ಬೆಳೆಗಳಲ್ಲಿ ಅಡಿಕೆಯೇ ಸಾಮ್ರಾಟ. ಆದರೆ, ಮಂಜುನಾಥರಾವ್‌ ಅಡಿಕೆ ಜತೆಗೆ ತೆಂಗಿನ ಮರಗಳನ್ನೂ ಬೆಳೆಸಿದ್ದಾರೆ. ಬಾಳೆಯೂ ಇದೆ. ತೋಟದ ಅಲ್ಪಸ್ವಲ್ಪ ಜಾಗವೂ ವ್ಯರ್ಥವಾಗದಂತೆ ದೊಡ್ಡ ಗಾತ್ರದ ಹಣ್ಣು ಬಿಡುವ ಹಲಸಿನ ಮರಗಳು, ಮಾವು, ನಿಂಬೆ, ಕರಿಬೇವು, ಬೆಂಡೆ, ಬೀನ್ಸ್‌ ಬೆಳೆದಿದ್ದಾರೆ. ಇದರೊಂದಿಗೆ ಮಲೆನಾಡಿನಿಂದ ತಂದ ಚಕ್ಕೋತ, ಮೋಸಂಬಿ, ಕಿತ್ತಳೆ, ಕಂಚಿಕಾಯಿ ಗಿಡಗಳನ್ನು ಹಾಕಿದ್ದಾರೆ. ಜೊತೆಗೆ ಸುಂದರವಾದ ವಿವಿಧ ಹೂವಿನ ಗಿಡಗಳನ್ನೂ ಬೆಳೆಸಿದ್ದಾರೆ. ವೀಳ್ಯದೆಲೆ ಬಳ್ಳಿಯೂ ಕಾಣ ಸಿಗುತ್ತದೆ. ಎಲ್ಲಿಯೇ ಕೃಷಿ ಪ್ರದರ್ಶನ ಮತ್ತು ತರಬೇತಿ ಶಿಬಿರಗಳು ನಡೆದರೂ ಅಲ್ಲಿಗೆ ಭೇಟಿ ನೀಡಿ ಅಧ್ಯಯನ ಮಾಡುವುದು ಅವರ ಸ್ವಭಾವ. ಅದರಂತೆ ಕೃಷಿಯಲ್ಲೂ ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಅವರ ಹೊಸ ಪ್ರಯತ್ನ ಎಂದರೆ ಗೊಬ್ಬರದ ಖಾಲಿ ಚೀಲಗಳಿಗೆ ಹೊಸ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ತುಂಬಿ ಅದರಲ್ಲಿ ಉತ್ಕೃಷ್ಟವಾದ ಬ್ಯಾಡಗಿ ತಳಿಯ ಮೆಣಸಿನ ಕಾಯಿಯನ್ನು ಬೆಳೆದಿರುವುದು. ಮೆಣಸಿನ ಗಿಡಗಳಲ್ಲಿ ಈಗ ಕಾಯಿಗಳು ಹಣ್ಣಾಗಿದ್ದು, ಹೊಲ ಕೆಂಪು ಬಣ್ಣದಿಂದ ನಳನಳಿಸುತ್ತದೆ.

ADVERTISEMENT

‘ನಾನು ಬೆಳೆಗಳಿಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದೇನೆ. ಇದರಿಂದ ಎಲ್ಲಾ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಅಡಿಕೆ, ತೆಂಗು, ಬಾಳೆ, ಹಲಸು ಇವು ಮಾರಾಟಕ್ಕಾದರೆ, ಉಳಿದ ಹಣ್ಣು, ತರಕಾರಿ, ಹೂಗಳನ್ನು ಉಚಿತವಾಗಿ ಎಲ್ಲರಿಗೂ ಹಂಚುತ್ತೇನೆ. ಉಪ್ಪಿನ ಕಾಯಿಗೆ ಬಳಸುವ ಕಂಚಿಕಾಯಿ, ಮಾವಿನಕಾಯಿ, ಮಾವಿನಹಣ್ಣು, ಅಪರೂಪದ ಚಕ್ಕೋತ ಹಣ್ಣುಗಳನ್ನು ಜನ ಕೇಳಿ ತೆಗೆದುಕೊಂಡು ಹೋಗುತ್ತಾರೆ. ಅದರಂತೆ ಮಾವಿನಹಣ್ಣು, ಹಲಸಿನ ಹಣ್ಣುಗಳನ್ನೂ ಕೇಳಿದವರಿಗೆ ಕೊಡುತ್ತೇನೆ. ಇದರಲ್ಲಿ ನನಗೆ ತೃಪ್ತಿ ಇದೆ’ ಎಂದು ಅವರು ತಿಳಿಸುತ್ತಾರೆ.

‘ಹೂಗಳನ್ನು ಬೆಳೆಯುವುದು ನನ್ನ ಇನ್ನೊಂದು ಹವ್ಯಾಸ. ನಮ್ಮಲ್ಲಿನ ಅಪರೂಪದ ಹೂವಿನ ಸಸಿಗಳನ್ನು ಹೆಣ್ಣುಮಕ್ಕಳು ತೆಗೆದುಕೊಂಡು ಹೋಗಿ ತಮ್ಮ ಮನೆಗಳಲ್ಲಿ ನೆಡುತ್ತಾರೆ. ರೈತ ಸದಾ ಪ್ರಯೋಗಶೀಲನಾಗಿ ಇರಬೇಕು. ಆಗ ಮಾತ್ರ ಅವನ ಕೃಷಿಗೊಂದು ಮೌಲ್ಯ ದೊರೆಯಲು ಸಾಧ್ಯ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸಂಪರ್ಕ ಸಂಖ್ಯೆ: 9632451736

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.