ಹರಿಹರ: ಕೃತಕ ಬುದ್ಧಿಮತ್ತೆಯಿಂದ (ಎಐ) ತಯಾರಾಗಿರುವ ಅಕಿವಾ ಸಾಧನ ರೈತರಿಗೆ ಬಹುಪಯೋಗಿ ಸಾಧನಗಲಿದೆ ಎಂದು ಎಂಜಿನಿಯರ್ ಅನಂತ್ ಕುಲಕರ್ಣಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರೈತರನ್ನೇ ಗುರಿಯಾಗಿಸಿಕೊಂಡು ವಿಭಿನ್ನ ತಂತ್ರಜ್ಞಾನದೊಂದಿಗೆ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಾಮಾನ್ಯ ರೈತನು ಕೂಡ ಯಾವುದೇ ರೀತಿಯ ತಾಂತ್ರಿಕ ಜ್ಞಾನವಿಲ್ಲದಿದ್ದರೂ ಇದನ್ನು ಸುಲಭವಾಗಿ ಬಳಸಬಹುದು. ನಮ್ಮ ಸಮಸ್ಯೆಗೆ ನಮ್ಮ ಭಾಷೆಯಲ್ಲೇ ಮಾತನಾಡುತ್ತಾ ಪರಿಹಾರ ಸೂಚಿಸುವುದು ಈ ಸಾಧನದ ವಿಶೇಷತೆ ಎಂದರು.
ರೈತರು ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಎಂಬುದನ್ನು ತಿಳಿಯಲು ಸಾಮಾನ್ಯವಾಗಿ ಮಣ್ಣನ್ನು ಪರೀಕ್ಷೆಗೆ ಕೊಟ್ಟು ತಿಂಗಳುಗಟ್ಟಲೇ ಕಾಯಬೇಕಾಗುತ್ತದೆ. ಆದರೆ, ಅಕಿವಾ ಸಾಧನದ ಮೂಲಕ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು ಎಂದು ವಿವರಿಸಿದರು.
ಬೆಳೆ ಬೆಳೆಯುವ ಸೂಕ್ತ ತಾಂತ್ರಿಕ ನೈಪುಣ್ಯತೆಯನ್ನು ಪಡೆಯಲು ಕೃಷಿ ತಜ್ಞರ ಸಲಹೆ ಅಗತ್ಯವಿಲ್ಲ. ಅಕಿವಾ ಸಾಧನವೇ ಯಾವ ಸಮಯದಲ್ಲಿ ರೋಗನಿರೋಧಕ ಔಷಧಗಳ ಸಿಂಪರಣೆ ಮಾಡಬೇಕು, ಆರಂಭದಲ್ಲಿ ನೈಸರ್ಗಿಕ ವಿಧಾನ, ನಂತರ ರಸಾಯನಿಕ ಹಾಗೂ ತಾಂತ್ರಿಕ ವಿಧಾನಗಳನ್ನು ಹೇಗೆ ಅನುಸರಿಸಬೇಕು, ಕೀಟ ಹತೋಟಿ ಹೇಗೆ ಎಂಬುದನ್ನು ತಿಳಿಸುತ್ತದೆ ಎಂದರು.
ಈಗಾಗಲೇ ಧಾರವಾಡ ಕೃಷಿ ಮಹಾವಿದ್ಯಾಲಯ ಹಾಗೂ ಧರ್ಮಸ್ಥಳ ಸಂಘದಿಂದ ಸಾಧನ ವಿತರಣೆಗೆ ಬೇಡಿಕೆ ಬಂದಿದ್ದು, ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಹೆಚ್ಚಿನ ಮಾಹಿತಿಗೆ ಮೊ.ನಂ. 8482792457 ಸಂಪರ್ಕಿಸಬಹುದು ಎಂದರು.
ಎಂಜಿನಿಯರ್ ಕಿರಣ್ ಕುಲಕರ್ಣಿ, ವಾಮನ ಕುಲಕರ್ಣಿ, ಧರಣೇಂದ್ರ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.