ADVERTISEMENT

KPS ಮ್ಯಾಗ್ನೆಟ್ ಯೋಜನೆಗೆ ಪೋಷಕರ ಆಕ್ರೋಶ: ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:32 IST
Last Updated 29 ಡಿಸೆಂಬರ್ 2025, 6:32 IST
ಹರಿಹರ ತಾಲ್ಲೂಕಿನ ಗುತ್ತೂರು ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಪೋಷಕರ ಹಾಗೂ ಗ್ರಾಮಸ್ಥರ ಸಭೆ ನಡೆಯಿತು
ಹರಿಹರ ತಾಲ್ಲೂಕಿನ ಗುತ್ತೂರು ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಪೋಷಕರ ಹಾಗೂ ಗ್ರಾಮಸ್ಥರ ಸಭೆ ನಡೆಯಿತು   

ಹರಿಹರ: ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ ಒ) ನೇತೃತ್ವದಲ್ಲಿ ತಾಲ್ಲೂಕಿನ ಗುತ್ತೂರು ವ್ಯಾಪ್ತಿಗೆ ಒಳಪಡುವ ವಿವಿಧ ಶಾಲೆಗಳ ಮಕ್ಕಳ ಪೋಷಕರು ಯೋಜನೆ ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ.


ನಗರದ 5 ಕಿ.ಮೀ. ವ್ಯಾಪ್ತಿಯ ಗಾಂಧಿ ಮೈದಾನ ಮತ್ತು ಹರ್ಲಾಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ವಿನೋಬನಗರ ಕನ್ನಡ, ಆಶ್ರಯ ಕಾಲೋನಿ ಕನ್ನಡ, ಹಳೆ ಹರ್ಲಾಪುರ ಕನ್ನಡ ಮತ್ತು ಉರ್ದು ಶಾಲೆಗಳನ್ನು ಗುತ್ತೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವ ನಿರ್ಧಾರದ ಕುರಿತು ಚರ್ಚಿಸಲು ಶನಿವಾರ ಎಐಡಿಎಸ್ ಒ ನೇತೃತ್ವದಲ್ಲಿ ವಿಲೀನಗೊಳ್ಳುವ ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಸಭೆ ಆಯೋಜಿಸಲಾಗಿತ್ತು.


ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಬಡ ಮಕ್ಕಳನ್ನು ಶಿಕ್ಷಣದಿಂದ ದೂರ ತಳ್ಳುವ, ಶಿಕ್ಷಣದ ಖಾಸಗೀಕರಣದ ಮತ್ತೊಂದು ರೂಪವಾಗಿದ್ದು, ಇದು ಸರ್ಕಾರಿ ಶಿಕ್ಷಣದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಎಐಡಿಎಸ್ ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಕಿಡಿಕಾರಿದರು.

ADVERTISEMENT


ಶಿಕ್ಷಣ ಸಚಿವರು ಒಪ್ಪಿಕೊಂಡAತೆ ಕಳೆದ 15 ವರ್ಷಗಳಲ್ಲಿ 17 ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೀಗಿದ್ದಾಗ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಬದಲು ವಿಲೀನಗೊಳಿಸುವುದು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ ಎಂದರು.


ರಾಜ್ಯದಾದ್ಯಂತ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಿ, ವಿಲೀನಗೊಳಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 243 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಗುರುತಿಸಿದ್ದು, 919 ಸರ್ಕಾರಿ ಶಾಲೆಗಳು ಮುಚ್ಚಲಾಗುತ್ತಿದೆ. ಮೊದಲ ಹಂತದಲ್ಲಿ 20 ಶಾಲೆಗಳಿಗೆ ಕೆಪಿಎಸ್ ಮ್ಯಾಗ್ನೆಟ್ ಎಂದು ಬೋರ್ಡ್ ಬದಲಾಯಿಸಲಾಗುತ್ತಿದೆ ಎಂದರು.


ಗಾAಧಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪೋಷಕರು, ದಿನಗೂಲಿ ಕಾರ್ಮಿಕರು, ಆಟೋ ಚಾಲಕರಂತಹ ಬಡ ಕುಟುಂಬಗಳ ವಿದ್ಯಾರ್ಥಿಗಳೆ ಹೆಚ್ಚಾಗಿ ಓದುತ್ತಿರುವ ಈ ಶಾಲೆಗಳು ಮುಚ್ಚಿದರೆ, ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಬ್ಯಾಂಕ್ ವಿಲೀನದಂತೆ ಶಾಲೆಗಳ ವಿಲೀನ ಮಾಡಲಾಗುತ್ತಿದೆ. 125 ವರ್ಷಗಳ ಇತಿಹಾಸವಿರುವ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಸರ್ಕಾರ ಹೇಳುವಂತೆ ಬಸ್ ವ್ಯವಸ್ಥೆ ಒದಗಿಸುವುದು ಸಾಧ್ಯವಿಲ್ಲ. ಈ ಶಾಲೆಗಳು ಮುಚ್ಚಿದರೆ ಬಡ ಮಕ್ಕಳು, ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ವೈದ್ಯರಾದ ನಾಸಿರ್ ಹೇಳಿದರು.


25 ವರ್ಷಗಳ ಹಿಂದೆ ಹೋರಾಟ ಮಾಡಿ ಶಾಲೆಯನ್ನು ತಂದಿದ್ದು, ಈಗ 53 ಮಕ್ಕಳು ಓದುತ್ತಿರುವ ಈ ಶಾಲೆ ಮುಚ್ಚಲು ಬಿಡುವುದಿಲ್ಲ. ಇಲ್ಲಿಂದ ಗುತ್ತೂರಿಗೆ ಮಕ್ಕಳನ್ನು ಕಳಿಸುವುದು ಅಸಾಧ್ಯ ಎಂದು ಆಶ್ರಯ ಕಾಲೋನಿಯ ಸಭೆಯಲ್ಲಿ ಮುಖಂಡ ಹನುಮಂತಪ್ಪ ಹೇಳಿದರು.


ಹಳೆ ಹರ್ಲಾಪುರದ ಸಭೆಯಲ್ಲಿ ಅರುಣ್ ಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ಶಾಲೆ ಮುಚ್ಚಲು ಬಿಡುವುದಿಲ್ಲ. ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯದೇ ಇದ್ದರೆ ಹೋರಾಟ ತೀವ್ರಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.


ಎಐಡಿಎಸ್ ಒ ಜಿಲ್ಲಾ ಕಾರ್ಯದರ್ಶಿ, ಸುಮನ್ ಟಿ.ಎ., ಅರುಣ್ ಕುಮಾರ್, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.