ADVERTISEMENT

ಎಲ್ಲ ತಾರತಮ್ಯ ತೊಲಗಿಸಲು ಯತ್ನಿಸಿದ್ದ ಅಂಬೇಡ್ಕರ್‌

ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ನ್ಯಾಯಾಧೀಶೆ ಸುನಂದಮ್ಮ ದುರುಗೇಶ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 14:49 IST
Last Updated 16 ಡಿಸೆಂಬರ್ 2018, 14:49 IST
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಡಾ. ಅಂಬೇಡ್ಕರ್ ನೆನಪಿನ ದಿನ – ದೇಶದ ಏಕತಾ ದಿನ’ ಕಾರ್ಯಕ್ರಮವನ್ನು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ನ್ಯಾಯಾಧೀಶೆ ಸುನಂದಮ್ಮ ದುರುಗೇಶ್ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಡಾ. ಅಂಬೇಡ್ಕರ್ ನೆನಪಿನ ದಿನ – ದೇಶದ ಏಕತಾ ದಿನ’ ಕಾರ್ಯಕ್ರಮವನ್ನು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ನ್ಯಾಯಾಧೀಶೆ ಸುನಂದಮ್ಮ ದುರುಗೇಶ್ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು   

ದಾವಣಗೆರೆ: ಸಮಾಜದಲ್ಲಿದ್ದ ಎಲ್ಲ ತಾರತಮ್ಯಗಳನ್ನು ತೊಲಗಿಸಲು ಅಂಬೇಡ್ಕರ್‌ ಹೋರಾಟ ಮಾಡಿದ್ದರು. ಸರ್ವ ಜನಾಂಗದ ಅಭಿವೃದ್ಧಿಗಾಗಿ ಪ್ರಯತ್ನಿಸಿದ್ದರು ಎಂದು ಹಾವೇರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ನ್ಯಾಯಾಧೀಶೆ ಸುನಂದಮ್ಮ ದುರುಗೇಶ್ ಹೇಳಿದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ನೌಕರರ ವಿದ್ಯಾರ್ಥಿಗಳ ಒಕ್ಕೂಟ, ಸಾಮಾಜಿಕ ಸಂಘರ್ಷ ಜಿಲ್ಲಾ ಸಮಿತಿ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಡಾ. ಅಂಬೇಡ್ಕರ್ ನೆನಪಿನ ದಿನ – ದೇಶದ ಏಕತಾ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಮಾನುಷ ಜಾತಿ ಪದ್ಧತಿ ಹೋಗಲಾಡಿಸಲು ಯತ್ನಿಸಿದ್ದರು. ಹೆಣ್ಣು ಮ್ಕಕಳಿಗಾಗಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದು ಹಿಂದೂ ಮಹಿಳೆಯರ ಮೇಲಿನ ತಾರತಮ್ಯ ತೆಗೆದು ಹಾಕಲು ನೋಡಿದ್ದರು. ಇಂಥ ಅಂಬೇಡ್ಕರ್‍ ಅವರನ್ನು ಪ್ರತಿಯೊಬ್ಬರೂ ನೆನೆಯುವುದರಿಂದ ಸ್ವಲ್ಪ ಋಣಭಾರ ತೀರಿಸಿದಂತಾಗುತ್ತದೆ ಎಂದು ಹೇಳಿದರು.

ADVERTISEMENT

ದಲಿತ ಜನಾಂಗದ ಮಹಿಳೆಯರು ಮಾತ್ರವಲ್ಲದೇ ಸವರ್ಣೀಯರೂ ಅಂಬೇಡ್ಕರ್ ಅವರನ್ನು ಸ್ಮರಿಸಬೇಕಾಗಿದೆ. ಅಂಬೇಡ್ಕರ್ ಚಿಂತನೆಗಳು ಬರಹಗಳು ವಿಶ್ವಕ್ಕೆ ಮಾದರಿಯಾಗಿದ್ದು, ಅಂದಿನ ಕಾಲದಲ್ಲಿದ್ದ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ ಹೊಡೆದೋಡಿಸಲು ಮುಂದಾಗಿದ್ದರು ಎಂದು ತಿಳಿಸಿದರು.

ಕಾರ್ಲ್‍ಮಾರ್ಕ್‌ ಆರ್ಥಿಕ ನೈತಿಕತೆ ಬಗ್ಗೆ, ಲೋಹಿಯ ರಾಜಕೀಯ ನೈತಿಕತೆ, ಗಾಂಧೀಜಿ ವೈಯಕ್ತಿಕ ನೈತಿಕತೆ ಬಗ್ಗೆ ಹೇಳಿದ್ದರು. ಇವೆಲ್ಲವನ್ನೂ ಒಳಗೊಂಡಿರುವ ಸಾಮಾಜಿಕ ನೈತಿಕತೆ ಬಗ್ಗೆ ಅಂಬೇಡ್ಕರ್‌ ಸಿದ್ಧಾಂತ ಇದೆ ಎಂದು ವಿವರಿಸಿದರು.

ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಬಸವರಾಜ್, ‘ದೇಶವು ಅಪಾಯದ ಸ್ಥಿತಿಯಲ್ಲಿದೆ. ಅಂಬೇಡ್ಕರ್ ನೀಡಿದ ಕೊಡಿಗೆಯನ್ನು ಪ್ರಭುತ್ವ ನಾಶಪಡಿಸುತ್ತಿದೆ. ಸಹೋದರತೆ, ಸಹಬಾಳ್ವೆ ಬೇಡವಾಗಿದೆ. ದಲಿತರ ಮೇಲೆ ಹಿಂದುಳಿದವರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಆಳುವ ಸರ್ಕಾರ ಬರೀ ಹುಸಿ ಸುಳ್ಳು ಭರವಸೆ ನೀಡುತ್ತಿದೆ. ನಿರುದ್ಯೋಗ ತೊಡೆದು ಹಾಕಲು ಕ್ರಮ ಕೈಗೊಂಡಿಲ್ಲ. ಬೃಹತ್ ಪ್ರತಿಮೆ ಅನಾವರಣಕ್ಕೆ ಹಣ ವ್ಯಯ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ತಿಪ್ಪೇರುದ್ರಪ್ಪ, ಡಾ.ಕೆ.ಕೆ. ಕಾಮಾನಿ, ಡಾ.ಎಂ. ಮಂಜಣ್ಣ, ಇಮ್ತಿಯಾಜ್ ಹುಸೇನ್, ಸುನೀತಮ್ಮ ಕೆ. ರುದ್ರಪ್ಪ, ಎಚ್. ಮಲ್ಲೇಶ್, ಕೆ. ಕುಮಾರ್, ಸಿ.ಎ. ಚಿಕ್ಕಣ್ಣ, ನಾಗೇಶ್, ಸಿ.ಕೆ. ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.