ಮಲೇಬೆನ್ನೂರು: ಪಟ್ಟಣದಲ್ಲಿ ಸಾಗಿರುವ ‘ಅಮೃತ್’ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಬುಧವಾರ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಯೋಜನೆ ತಾಂತ್ರಿಕ ಮಾಹಿತಿ, ಕೊಳವೆ ಮಾರ್ಗ, ನಲ್ಲಿ ಅಳವಡಿಸುವ ಕುರಿತು ನೀರು ಸರಬರಾಜು ಒಳ ಚರಂಡಿ ಮಂಡಳಿ ಎಂಜಿನಿಯರ್ ಜತೆ ಚರ್ಚಿಸಿದರು.
ಕಾಮಗಾರಿ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಬೋವಿ ಶಿವು, ಗೌಡರ ಮಂಜಣ್ಣ, ಶಾಹ್ ಅಬ್ರಾರ್, ನಯಾಜ್, ಆರಿಫ್ ಅಲಿ ಆರೋಪಿಸಿದರು. ಕಾಂಕ್ರಿಟ್ ಹಾಕಿದ ಕಡೆ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ ಎಂದು ವೀರಯ್ಯ ಸ್ವಾಮಿ ಆರೋಪಿಸಿದರು.
‘ಕಾಮಗಾರಿ ಗುಣಮಟ್ಟ ಪರಿಶೀಲನೆಗೆ 3ನೇ ತಂಡ ಇದೆ. ಪುರಸಭೆ ಎಂಜಿನಿಯರ್, ಅಧಿಕಾರಿಗಳು, ಸದಸ್ಯರು ಪರಿಶೀಲಿಸಿ ನ್ಯೂನತೆ ಇದ್ದರೆ ಸರಿಪಡಿಸಲಾಗುವುದು’ ಎಂದು ಎಂಜಿನಿಯರ್ ಭರವಸೆ ನೀಡಿದರು.
ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಜಾಗದಲ್ಲಿ ಮೇಲ್ಮಟ್ಟದ ನೀರಿನ ಸಂಗ್ರಹಾಗಾರ ನಿರ್ಮಾಣ ಕುರಿತಂತೆ ಸರ್ಕಾರದ ಮಟ್ಟದಲ್ಲಿ ನಿಯೋಗ ತೆರಳುವ ಬಗ್ಗೆ ಪ್ರಸ್ತಾಪಿಸಲಾಯಿತು. ಬೀದಿ ದೀಪ, ತುರ್ತು ಕಾಮಗಾರಿಗೆ ಆದ್ಯತೆ ನೀಡಿ ಎಂದು ಸದಸ್ಯರು ಬೆಸ್ಕಾಂ ಎಂಜಿನಿಯರ್ ಉಮೇಶ್ ಅವರನ್ನು ಆಗ್ರಹಿಸಿದರು.
ಪಟ್ಟಣದ ಪಶು ಸಂಗೋಪನಾ ಇಲಾಖೆ ಜಾಗದಲ್ಲಿ ಸಾರ್ವಜನಿಕ ಸೌಚಾಲಯ ನಿರ್ಮಾಣ ಮಾಡುವ ಕುರಿತು ಸದಸ್ಯರಾದ ನಯಾಜ್, ಸಾಬೀರ್ ಅಲಿ, ಶಬ್ಬೀರ್ ಗಮನ ಸೆಳೆದರು. ಸರ್ವೇ ನಡೆಸುವಂತೆ ಕೋರಿದ್ದು, ವರದಿ ಬಂದ ನಂತರ ತೀರ್ಮಾನಿಸೋಣ ಎಂದು ಮುಖ್ಯಾಧಿಕಾರಿ ಬಜಕ್ಕನವರ್ ತಿಳಿಸಿದರು.
ಪಡಿತರ ವ್ಯವಸ್ಥೆ ಲೋಪ, ಹೊಸ ಪಡಿತರ ಚೀಟಿ, ತಿದ್ದುಪಡಿ, ಆಹಾರಧಾನ್ಯ ಕಾಳಸಂತೆ ಮಾರಾಟ ತಪ್ಪಿಸುವಂತೆ ಆಹಾರ ಇಲಾಖೆ ಶಿರಸ್ತೇದಾರ್ ಶಿವಕುಮಾರ್ ಅವರಿಗೆ ಸದಸ್ಯರು ಆಗ್ರಹಿಸಿದರು. ‘ನಮ್ಮ ಕ್ಲಿನಿಕ್’ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಹನುಮಂತಪ್ಪ ಹಾಗೂ ಸದಸ್ಯ ರೇವಣ ಸಿದ್ದೇಶ್ ಆಕ್ಷೇಪ ವ್ಯಕ್ತಪಡಿಸಿದರು. ವೈದ್ಯೆ ಲಕ್ಷ್ಮೀದೇವಿ ಪ್ರತಿಕ್ರಿಯಿಸಿ, ಈ ವಿಚಾರ ಟಿಎಚ್‌ಒ ವ್ಯಾಪ್ತಿಗೆ ಬರುತ್ತದೆ ಎಂದರು.
ಇಂದಿರಾ ಕ್ಯಾಂಟೀನ್ ಕಾಮಗಾರಿ ಬಗ್ಗೆ ಚರ್ಚೆ:
ಪಟ್ಟಣದ ಇಂದಿರಾ ಕ್ಯಾಂಟೀನ್ ಕಾಮಗಾರಿ ಕುರಿತು ಮಾಹಿತಿ ನೀಡುವಂತೆ ಮುಖ್ಯಾಧಿಕಾರಿಗೆ ಸದಸ್ಯ ವೀರಯ್ಯಸ್ವಾಮಿ ಆಗ್ರಹಿಸಿದರು. ‘ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿದೆ. ಡಿ.ಸಿ, ಮುಖ್ಯಾಧಿಕಾರಿ, ಶಿಕ್ಷಣ ಇಲಾಖೆ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿಸಿದ್ದಾರೆ. ಪುರಸಭೆಯಿಂದ ವಕೀಲರನ್ನು ನೇಮಿಸಿದ್ದು, ಜೂನ್ 10ರಂದು ತೀರ್ಪು ಬರುವ ನಿರೀಕ್ಷೆಯಿದೆ’ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ವಿಜಯ ಲಕ್ಷ್ಮೀ, ಜೆಇ ರಾಘವೇಂದ್ರ, ಕಂದಾಯಾಧಿಕಾರಿ ಧನಂಜಯ, ಶಿವರಾಜ್, ನವೀನ್ ಪರಿಸರ ಎಂಜಿನಿಯರ್ ಉಮೇಶ್, ಸದಸ್ಯರು , ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.