ADVERTISEMENT

ನನಸಾಗದ ಜಿಲ್ಲಾ ಸಂಕೀರ್ಣದ ಕನಸು

ದಾವಣಗೆರೆಗೆ ಬೇಕು ಸುಸಜ್ಜಿತ ಕಲಾಮಂದಿರ

ಡಿ.ಕೆ.ಬಸವರಾಜು
Published 13 ಆಗಸ್ಟ್ 2022, 4:10 IST
Last Updated 13 ಆಗಸ್ಟ್ 2022, 4:10 IST
ಎಚ್. ಬಿ. ಮಂಜುನಾಥ್
ಎಚ್. ಬಿ. ಮಂಜುನಾಥ್   

ದಾವಣಗೆರೆ: ಜಿಲ್ಲೆಯಾಗಿ 25 ವರ್ಷಗಳಾದರೂ ಜಿಲ್ಲಾ ಸಂಕೀರ್ಣ ಒಂದು ಕಡೆಯಾಗಿಲ್ಲ. ದಾವಣಗೆರೆಯ ಜೊತೆ ಜಿಲ್ಲಾ ಕೇಂದ್ರಗಳಾದ ಹಾವೇರಿ ಸೇರಿ ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಸಂಕೀರ್ಣದ ಕನಸು ನನಸಾಗಿವೆ. ಸಮಗ್ರ ಅಭಿವೃದ್ಧಿಯನ್ನು ಇಟ್ಟುಕೊಂಡು ಜಿಲ್ಲೆಯನ್ನು ರಚಿಸಿದ ಜೆ.ಎಚ್. ಪಟೇಲರ ಕನಸು ಈಡೇರಿಲ್ಲ ಎಂಬುದು ಹಲವರ ಬೇಸರ.

ಜಿಲ್ಲೆಯಾಗಿ ರಜತ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಈ ಬಗ್ಗೆ ಹಿರಿಯ ವ್ಯಂಗ್ಯಚಿತ್ರ ಕಲಾವಿದ ಎಚ್‌.ಬಿ. ಮಂಜುನಾಥ್ ಹಾಗೂ ಪತ್ರಕರ್ತ ಬಾ.ಮ.ಬಸವರಾಜಯ್ಯ ಅವರು ತಮ್ಮ ಅನಿಸಿಕೆಯನ್ನು ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡಿದ್ದಾರೆ.

‘ದಾವಣಗೆರೆ ಜಿಲ್ಲೆಯಾದರೂ ರಂಗಾಸಕ್ತರಿಗೆ ಕಲಾ ಮಂದಿರ ನಿರ್ಮಾಣವಾಗಿಲ್ಲ. ಜಿಲ್ಲೆಗೊಂದು ಕಲಾಮಂದಿರ ಆಗಬೇಕು ಎನ್ನುವ ಆಶಯ ಈಡೇರಿಲ್ಲ’ ಎಂಬುದು ಎಚ್.ಬಿ. ಮಂಜುನಾಥ್ ಅವರ ಬೇಸರ.

ADVERTISEMENT

‘ದಾವಣಗೆರೆಯಲ್ಲಿ ರಂಗ ಚಟುವಟಿಕೆ, ನೃತ್ಯ, ಸಂಗೀತ ನಾಟಕದಂತಹ ಕಾರ್ಯಕ್ರಮಗಳು ನಡೆಯಲು ಸರ್ಕಾರದ ರಂಗಮಂದಿರವಿಲ್ಲ. ಈಗ ಅನಿವಾರ್ಯವಾಗಿ ಕುವೆಂಪು ಕನ್ನಡಭವನದಲ್ಲೇ ಕಾರ್ಯಕ್ರಮ ಮಾಡಬೇಕಿದ್ದು, ಅಲ್ಲಿಯೂ ಸುಸಜ್ಜಿತ ಆಡಿಟೋರಿಯಂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಕಲಾಮಂದಿರ ದೂರದಲ್ಲಿ ಇರದೇ ನಗರದ ಮಧ್ಯಭಾಗದಲ್ಲಿ ಇದ್ದರೆ ಒಳ್ಳೆಯದು. ಜಾಗ ಸಿಗದಿದ್ದರೆ ಖರೀದಿಸಿಯಾದರೂ ನಿರ್ಮಾಣ ಮಾಡಬೇಕು’ ಎಂಬುದು ಅವರ ಆಗ್ರಹ.

‘ನಗರದಲ್ಲಿ ವ್ಯವಸ್ಥಿತ, ಸುಸಜ್ಜಿತ ಕ್ರೀಡಾಂಗಣವಿಲ್ಲ. ಈ ಹಿಂದೆ ಇದ್ದ ಕಾಟನ್‌ಮಿಲ್ ಕ್ರೀಡಾಂಗಣವನ್ನು ಜಿಲ್ಲಾ ಕ್ರೀಡಾಂಗಣವನ್ನಾಗಿ ಮಾಡಲಾಗಿದೆ. ಇದು ಸಾಲದು. ಕ್ರೀಡಾಸಕ್ತರಿಗೆ ಎಲ್ಲಾ ಸೌಲಭ್ಯವನ್ನು ಒಳಗೊಂಡಂತಹ ಕ್ರೀಡಾಂಗಣ ನಿರ್ಮಾಣವಾಗಬೇಕು’ ಎಂಬುದು ಅವರ ಒತ್ತಾಯ.

‘ದಾವಣಗೆರೆ ಬಹಳಷ್ಟು ಕಚೇರಿಗಳು ದೂರದಲ್ಲಿ ಇದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಮಿನಿವಿಧಾನಸೌಧ ನಿರ್ಮಾಣವಾಗಬೇಕು. ಉಪ ನೋಂದಣಾಧಿಕಾರಿ ಕಚೇರಿಯ ಬಳಿ ಕ್ಯಾಂಟೀನ್‌, ಜೆರಾಕ್ಸ್ ಅಂಗಡಿ ಇಲ್ಲ. ಕಡಿಮೆ ದರದಲ್ಲಿ ಅರ್ಜಿಗಳು ಹಾಗೂ ಜೆರಾಕ್ಸ್‌ ಸೌಲಭ್ಯ ಸಿಗುವಂತೆ ಮಾಡಬೇಕು. ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಬೇಕು’ ಎಂದು ಆಗ್ರಹಿಸುತ್ತಾರೆ.

‘ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಾದಂತೆ ಜನರು ವ್ಯವಹಾರಕ್ಕಾಗಿ ಓಡಾಡುವುದು ಜಾಸ್ತಿಯಾಗಿದೆ. ಹಳೇ ದಾವಣಗೆರೆಗೆ ಹೋಗಲು ಅಶೋಕ ಟಾಕೀಸ್‌ ಬಳಿ ರೈಲ್ವೆ ಹಳಿಯಲ್ಲಿ ಗೇಟ್ ಹಾಕಿದಾಗ ಗಾಂಧಿ ಸರ್ಕಲ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಆದ್ದರಿಂದ ರೈಲ್ವೆ ಹಳಿ ದಾಟಲು ಅಂಡರ್‌ ಬ್ರಿಡ್ಜ್ ನಿರ್ಮಾಣವಾಗಬೇಕು. ಜಿಲ್ಲೆಯಾಗಿ 25 ವರ್ಷಗಳಾದರೂ ಅಧಿಕಾರಕ್ಕೆ ಬಂದ ಯಾವ ಪಕ್ಷಗಳೂ ಬ್ರಿಡ್ಜ್ ನಿರ್ಮಿಸುವ ಧೀಶಕ್ತಿ ತೋರಿಲ್ಲ. ರೈಲ್ವೆ ಕೆಳಸೇತುವೆಯ ಬಳಿ ಮಳೆ ಬಂದರೆ ನೀರು ನಿಂತು ಸಂಚರಿಸಲು ಆಗುವುದಿಲ್ಲ’ ಎಂದು ಹೇಳುತ್ತಾರೆ.

==

‘ಡಿ.ಸಿ. ಕಚೇರಿ ಕಟ್ಟಡ ನಿರ್ಮಾಣವಾಗಲು 15 ವರ್ಷ ಬೇಕಾಯಿತು’

‘ದಾವಣಗೆರೆ ಜಿಲ್ಲೆಯಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಲು 15 ವರ್ಷಗಳು ತೆಗೆದುಕೊಂಡಿದ್ದು ಜಿಲ್ಲೆಯ ದುರಂತ. ಆಡಳಿತದ ದೃಷ್ಟಿಯಿಂದ ಜಿಲ್ಲಾ ಸಂಕೀರ್ಣ ಒಂದು ಕಡೆ ಇರಬೇಕು ಎಂಬುದು ಜೆ.ಎಚ್‌.ಪಟೇಲರ ಕನಸಾಗಿತ್ತು. ಈಗ ಜಿಲ್ಲಾಧಿಕಾರಿ ಕಚೇರಿ ಒಂದು ದಿಕ್ಕಿಗೆ, ಜಿಲ್ಲಾ ಪಂಚಾಯಿತಿ ಕಚೇರಿ ಮತ್ತೊಂದು ದಿಕ್ಕಿಗೆ ಇವೆ. ಜೆ.ಎಚ್‌.ಪಟೇಲರ ನಂತರ ಬಂದ ಸರ್ಕಾರಗಳು ಈ ಆಲೋಚನೆಯನ್ನೇ ಮಾಡಲಿಲ್ಲ.ಹೆಚ್ಚು ಆದಾಯ ತರುವ ಉಪ ನೋಂದಣಾಧಿಕಾರಿ ಕಚೇರಿ ಸೇರಿ 25ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ’ ಎಂದು ಪತ್ರಕರ್ತ ಬಾ.ಮ.ಬಸವರಾಜಯ್ಯ ವಿಷಾದ ವ್ಯಕ್ತಪಡಿಸುತ್ತಾರೆ.

‘ಜಿಲ್ಲೆಯ ಕೆಲವು ದೂರದ ಹಳ್ಳಿಗಳಿಗೆ ಸುಸಜ್ಜಿತ ರಸ್ತೆ ಹಾಗೂ ಬಸ್ ಸೌಲಭ್ಯವಿಲ್ಲ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ದೂರದ ಹಳ್ಳಿಗಳಿಗೆ ಸುಸಜ್ಜಿತ ರಸ್ತೆ, ಬಸ್‌ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಹಾಗೂಜನರಿಗೆತೊಂದರೆಯಾಗಿದೆ’ಎಂದುಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.