ADVERTISEMENT

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಂಬುಛೇದನ

ಹೊನ್ನಾಳಿಯ ಮಾರಿಕೊಪ್ಪ ಹಳದಮ್ಮ ದೇವಿ ದೇವಸ್ಥಾನದಲ್ಲಿ ದೊಡ್ಡಬನ್ನಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 7:04 IST
Last Updated 8 ಅಕ್ಟೋಬರ್ 2022, 7:04 IST
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಜೆ ಬನ್ನಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಜೆ ಬನ್ನಿ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.   

ಹೊನ್ನಾಳಿ: ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಂಬು ಹೊಡೆಯುವುದರ ಮೂಲಕ ವಿಜೃಂಭಣೆಯಿಂದ ನೆರವೇರಿತು.

ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಹೊನ್ನಾಳಿ ನಗರ, ತಾಲ್ಲೂಕಿನ ಮಾರಿಕೊಪ್ಪ ಹಾಗೂ ಇತರೆ ಅಕ್ಕಪಕ್ಕದ ಗ್ರಾಮಗಳ ಮಹಿಳೆಯರು, ಜೋಗಮ್ಮ ಜೋಗಪ್ಪರು ಗುರುವಾರ ಮತ್ತು ಶುಕ್ರವಾರ ಉಪವಾಸ ವ್ರತ ಕೈಗೊಂಡು ಬನ್ನಿ ಮುಡಿಯುವವರೆಗೂ ದೀವಟಿಗೆಗಳನ್ನು ಹಿಡಿದು ಪೂಜೆ ಸಲ್ಲಿಸುತ್ತಾರೆ.

ಗ್ರಾಮೀಣ ಸಂಸ್ಕೃತಿ ಅನುಸಾರ ರೂಟ್ಟಿ, ಬುತ್ತಿ ಕಟ್ಟಿಕೊಂಡು ಎತ್ತಿನ ಗಾಡಿ, ಟ್ರ್ಯಾಕ್ಟರ್, ದ್ವಿ-ಚಕ್ರ ವಾಹನ, ಕಾರು ಬೈಕ್‌ಗಳಲ್ಲಿ ಬರುವ ಭಕ್ತರು ಶುಕ್ರವಾರ ಬೆಳಿಗ್ಗೆಯಿಂದಲೇ ದೇವಿಯ ಆರಾಧನೆಯಲ್ಲಿ ನಿರತರಾಗುತ್ತಾರೆ. ಕೆಲವರು ಗುರುವಾರವೇ ಬಂದಿರುತ್ತಾರೆ.

ADVERTISEMENT

ಮಹಾನವಮಿ ಬನ್ನಿ ಮಹೋತ್ಸವ ನಡೆಯುವ ಸ್ಥಳಕ್ಕೆ ಮಾರಿಕೊಪ್ಪದ ಹಳದಮ್ಮ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಪ್ರಧಾನ ಅರ್ಚಕ ಮಲ್ಲಿಕಾರ್ಜುನ್ ಉಪವಾಸ ವ್ರತ ಕೈಗೊಂಡು ಶಮೀ ವೃಕ್ಷದ ಮುಂಭಾಗದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೂರು ಬಾಣ(ಅಂಬು)ಗಳನ್ನು ಹೊಡೆಯುತ್ತಾರೆ. ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಭಕ್ತರು ಮಳೆ-ಬೆಳೆ ಹಾಗೂ ರೈತರು-ನಾಡಿನ ಭವಿಷ್ಯವನ್ನು ಲೆಕ್ಕ ಹಾಕುವ ಪದ್ಧತಿ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ನಂತರ ಭಕ್ತರು ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಳ್ಳುತ್ತಾರೆ.

ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ಎಚ್.ಜೆ. ರಶ್ಮಿ, ಸಿಪಿಐ ಎಚ್.ಎಂ. ಸಿದ್ದೇಗೌಡ, ಪಿಎಸ್‌ಐ ಬಸವರಾಜ ಬಿರಾದಾರ, ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಹಳದಪ್ಪ, ಚಿನ್ನಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.