ADVERTISEMENT

ಪಿಂಚಣಿಗಾಗಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 12:27 IST
Last Updated 22 ಅಕ್ಟೋಬರ್ 2018, 12:27 IST
ಪಿಂಚಣಿ ನೀಡುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟಿಸಿದರು.
ಪಿಂಚಣಿ ನೀಡುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದಾವಣಗೆರೆಯಲ್ಲಿ ಸೋಮವಾರ ಪ್ರತಿಭಟಿಸಿದರು.   

ದಾವಣಗೆರೆ: ನಿವೃತ್ತಿಯಾಗುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಯರಿಗೆ ತಿಂಗಳಿಗೆ ₹ 6000 ಪಿಂಚಣಿಯನ್ನು ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ಆಶ್ರಯದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತರಾಗುವವರಿಗೆ ಯಾವುದೇ ರೀತಿಯ ಪಿಂಚಣಿ ಇಲ್ಲದೇ ಇರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ನಿವೃತ್ತಿಯಾಗುವವರಿಗೆ ₹ 6000 ಪಿಂಚಣಿ ನೀಡುವಂತೆ ಕಾನೂನು ಜಾರಿಗೆ ತರಲಾಗಿದೆ. ಅದನ್ನು ಜಾರಿಗೊಳಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದರು.

ಎನ್‌.ಪಿ.ಎಸ್‌ ಲೈಟ್‌ ಯೋಜನೆಯನ್ನು ಜಾರಿಗೆ ತರಲಾಗಿದೆ. 2011ರ ಫೆಬ್ರುವರಿಯಿಂದ 2015ರವರೆಗೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಂದ ಪ್ರತಿ ತಿಂಗಳ ಗೌರವಧನದಲ್ಲಿ ಈ ಯೋಜನೆಗೆ ಹಣ ಕಡಿತಗೊಳಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ 2015ರ ನಂತರ ನಿವೃತ್ತಿಯಾದವರಿಗೆ ಯೋಜನೆಯಂತೆ ಹಣವನ್ನು ಅವರ ಬ್ಯಾಂಕಿನ ಖಾತೆಗೆ ಪಾವತಿಸಿಲ್ಲ. ಯೋಜನೆಯ ಫಲಾನುಭವಿಗಳಿಗೆ ಮಾಹಿತಿಯ ಕಾರ್ಡ್‌ ಸಹ ವಿತರಿಸಿಲ್ಲ. ಹೀಗಾಗಿ ಫಲಾನುಭವಿಗಳಿಗೆ ಹಣ ಸಿಗುತ್ತಿಲ್ಲ. ನಿವೃತ್ತಿಯಾದವರು ಬದುಕು ಸಾಗಿಸಲು ತೊಂದರೆ ಪಡುತ್ತಿದ್ದಾರೆ. ಹೀಗಾಗಿ ಕೂಡಲೇ ಪಿಂಚಣಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಫೆಡರೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ, ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಬಿ. ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಎಸ್‌.ಎ. ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ, ತಾಲ್ಲೂಕು ಘಟಕದ ಅಧ್ಯಕ್ಷೆ ರೇಣುಕಮ್ಮ, ಸಂಚಾಲಕರಾದ ಆವರಗೆರೆ ಚಂದ್ರ, ಆವರಗೆರೆ ವಾಸು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.