ದಾವಣಗೆರೆ: ಅಂಗನವಾಡಿಗಳಿಗೆ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಪ್ರಯತ್ನಕ್ಕೆ ಜಿಲ್ಲೆಯಲ್ಲಿ ಸಕಾರಾತ್ಮಕ ಸ್ಪಂದನೆ ದೊರಕಿದೆ. ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 407 ಅಂಗನವಾಡಿಗಳ ಪೈಕಿ 398ಕ್ಕೆ ನಿವೇಶನ ಲಭ್ಯವಾಗಿದೆ.
ಜಿಲ್ಲೆಯಲ್ಲಿ 1,771 ಅಂಗನವಾಡಿಗಳಲ್ಲಿ 1,364 ಸ್ವಂತ ಕಟ್ಟಡ ಹೊಂದಿವೆ. ಉಳಿದವು ಬಾಡಿಗೆ ಕಟ್ಟಡದಲ್ಲಿವೆ. ಕೆಲವು ಅಂಗನವಾಡಿಗಳು ಸರ್ಕಾರಿ ಶಾಲೆ, ಸಮುದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಲಾಖೆಯಲ್ಲಿ ಅನುದಾನದ ಲಭ್ಯತೆ ಇದೆ. ನಿವೇಶನದ ಕೊರತೆಯ ಕಾರಣಕ್ಕೆ ಕಟ್ಟಡ ನಿರ್ಮಾಣದ ಗುರಿ ನಿರೀಕ್ಷಿತ ಪ್ರಗತಿ ಕಂಡಿರಲಿಲ್ಲ.
ಶಿಶು ಅಭಿವೃದ್ಧಿ ಅಧಿಕಾರಿಗಳು ನಿವೇಶನ ಪಡೆಯಲು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿರಲಿಲ್ಲ. ಇದನ್ನು ಗಮನಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚಿಸಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲು ಮುಂದಾದರು. ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶನಗಳಿಗೆ ಹುಡುಕಾಟ ನಡೆಸಿದರು. ಈ ಪ್ರಯತ್ನದ ಫಲವಾಗಿ ಒಂದು ವರ್ಷದಲ್ಲಿ 284 ನಿವೇಶನಗಳನ್ನು ಒದಗಿಸಿಕೊಡಲು ಸಾಧ್ಯವಾಗಿದೆ.
‘ಸರ್ಕಾರಿ ಶಾಲೆಯ ಆವರಣದಲ್ಲಿಯೇ ಅಂಗನವಾಡಿ ಕಟ್ಟಡವೂ ಇದ್ದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಅಂಗನವಾಡಿಗೆ ದಾಖಲಾಗಿರುವ ಚಿಣ್ಣರು 6 ವರ್ಷ ತುಂಬಿದ ಬಳಿಕ ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಸ್ಥಳಾವಕಾಶ ಇರುವ ಕಡೆ ಶಿಕ್ಷಣ ಇಲಾಖೆ ನಿವೇಶನ ಒದಗಿಸಿದೆ. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಒಪ್ಪಿಗೆಯನ್ನು ಪಡೆಯಲಾಗಿದೆ. ಅಂಗನವಾಡಿಗೆ ಸಿಕ್ಕ ಅತಿ ಹೆಚ್ಚು ನಿವೇಶನಗಳಲ್ಲಿ ಶಿಕ್ಷಣ ಇಲಾಖೆಯ ಪಾಲು ದೊಡ್ಡದು’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಸ್.ರಾಜಾ ನಾಯ್ಕ.
150ರಿಂದ 400 ಜನಸಂಖ್ಯೆ ಇರುವ ಪ್ರದೇಶ ಚಿಕ್ಕ ಅಂಗನವಾಡಿ ಹೊಂದಬೇಕು ಎಂಬುದು ಸರ್ಕಾರದ ನಿಯಮ. ಇಂತಹ 42 ಚಿಕ್ಕ ಅಂಗನವಾಡಿಗಳು ಜಿಲ್ಲೆಯಲ್ಲಿವೆ. 400ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ಪ್ರದೇಶದಲ್ಲಿ ಕಡ್ಡಾಯವಾಗಿ ಅಂಗನವಾಡಿ ಕೇಂದ್ರ ತೆರೆಯಬೇಕು. ಅಂಗನವಾಡಿಗೆ ಕನಿಷ್ಠ 650 ಚದರ ಅಡಿ ನಿವೇಶನದ ಅಗತ್ಯವಿದೆ. ಚಿಣ್ಣರ ಆಟ, ಕಲಿಕೆ ಹಾಗೂ ಅಡುಗೆಗೆ ಇಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿದೆ.
‘ಗ್ರಾಮೀಣ ಪ್ರದೇಶಕ್ಕಿಂತ ನಗರ, ಪಟ್ಟಣಗಳಲ್ಲಿ ನಿವೇಶನ ಲಭ್ಯತೆ ಕಡಿಮೆ. ಭೂಮಿಗೆ ಭಾರಿ ಬೆಲೆ ಇರುವ ಕಾರಣಕ್ಕೆ ದಾನವೂ ಸಿಗುವುದಿಲ್ಲ. ನಿಗದಿತ ಮಾನದಂಡಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನ ಸಿಕ್ಕರೂ ಅಂಗನವಾಡಿ ತೆರೆಯಲು ಅವಕಾಶವಿದೆ. ಡೂಪ್ಲೆಕ್ಸ್ ಕಟ್ಟಡ ನಿರ್ಮಿಸಿ ಮೊದಲ ಮಹಡಿಯಲ್ಲಿ ಅಡುಗೆ ಕೋಣೆ ಹಾಗೂ ಸಾಮಗ್ರಿ ದಾಸ್ತಾನು ಕೊಠಡಿ ನಿರ್ಮಿಸಲಾಗುತ್ತದೆ. ಚಿಣ್ಣರಿಗೆ ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ವಿವರಿಸುತ್ತಾರೆ ರಾಜಾ ನಾಯ್ಕ.
Highlights - ಸಾವಿರ ಜನಸಂಖ್ಯೆಗೆ ಒಂದು ಅಂಗನವಾಡಿ ಕನಿಷ್ಠ 650 ಚ. ಅಡಿಯ ನಿವೇಶನ ಅಗತ್ಯ ಹೆಚ್ಚು ನಿವೇಶನ ಒದಗಿಸಿದ ಶಿಕ್ಷಣ ಇಲಾಖೆ
ಹರಿಹರ ನಗರದಲ್ಲಿ ಮಾತ್ರ 9 ಕೇಂದ್ರಗಳಿಗೆ ನಿವೇಶನಗಳ ಅಗತ್ಯವಿದೆ. ಸ್ಥಳ ಗುರುತಿಸಿ ಸ್ವಾಧೀನಕ್ಕೆ ಪಡೆಲಾಗುತ್ತಿದೆ. ಜಿಲ್ಲೆಯ ಉಳಿಧೆಡೆ ನಿವೇಶನಗಳು ಲಭ್ಯವಾಗಿವೆಕೆ.ಎಸ್.ರಾಜಾ ನಾಯ್ಕ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
5 ನಿವೇಶನ ದಾನ
ಅಂಗನವಾಡಿ ಕಟ್ಟಡಕ್ಕಾಗಿ ಜಿಲ್ಲೆಯಲ್ಲಿ 5 ನಿವೇಶನಗಳು ದಾನದ ರೂಪದಲ್ಲಿ ಸಿಕ್ಕಿವೆ. ಚನ್ನಗಿರಿ ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕಿನ ಐದು ಕೇಂದ್ರಗಳಿಗೆ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ನಿವೇಶನ ದಾನ ಮಾಡಿದ್ದಾರೆ. ಚನ್ನಗಿರಿ ತಾಲ್ಲೂಕಿನ ಮದಿಗೆರೆಯ ಸುಶೀಲಮ್ಮ ಅವರು ದಾನವಾಗಿ ನೀಡಿದ ನಿವೇಶನದಲ್ಲಿ ಕಟ್ಟಡ ನಿರ್ಮಾಣವಾಗಿದೆ. 2 ನಿವೇಶನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಗೊಂಡಿವೆ. ಇನ್ನೂ 2 ನಿವೇಶನಗಳ ದಾನ ಪ್ರಕ್ರಿಯೆ ಪ್ರಗತಿಯಲ್ಲಿದೆ.
76 ಕೇಂದ್ರಗಳಿಗೆ ಕಟ್ಟಡ
ನಿವೇಶನಗಳು ಲಭ್ಯವಾಗುತ್ತಿದ್ದಂತೆಯೇ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಲಭ್ಯವಾಗಿರುವ 398 ನಿವೇಶನಗಳ ಪೈಕಿ 76ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ನಬಾರ್ಡ್ ಸೇರಿ ಹಲವು ಮೂಲಗಳಿಂದ ಅನುದಾನ ಲಭ್ಯವಿದೆ. 2026ರ ಮಾರ್ಚ್ ಅಂತ್ಯಕ್ಕೆ ಶೇ 50ರಷ್ಟು ನಿವೇಶನಗಳಲ್ಲಿ ಕಟ್ಟಡ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.