ADVERTISEMENT

ಕನಿಷ್ಠ ವೇತನ ₹25 ಸಾವಿರ ನಿಗದಿಪಡಿಸಿ

ಚನ್ನಗಿರಿ: ಅಂಗನವಾಡಿ ಕಾರ್ಯಕರ್ತೆಯರ ಕುಂದು ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:01 IST
Last Updated 23 ನವೆಂಬರ್ 2025, 6:01 IST
ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಎಐಟಿಯುಸಿ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕುಂದು ಕೊರತೆ ಸಭೆ ಶನಿವಾರ ನಡೆಯಿತು
ಚನ್ನಗಿರಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಎಐಟಿಯುಸಿ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕುಂದು ಕೊರತೆ ಸಭೆ ಶನಿವಾರ ನಡೆಯಿತು   

ಚನ್ನಗಿರಿ: ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೇವಾ ಭದ್ರತೆ ಒದಗಿಸದೇ ಅವರನ್ನು ಸರ್ಕಾರ ಜೀತದಾಳುಗಳಂತೆ ಕೆಲಸ ಮಾಡಿಸಿಕೊಳ್ಳುತ್ತಿದೆ. ಚಿಕ್ಕಮಕ್ಕಳ ಪಾಲನೆ, ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ₹25,000 ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಎಐಟಿಯುಸಿ (ಎಚ್.ಕೆ. ರಾಮಚಂದ್ರಪ್ಪ ಬಣ) ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ್ ಆಗ್ರಹಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗುಣಮಟ್ಟದ ಸಮವಸ್ತ್ರ ನೀಡಿಲ್ಲ. ₹250 ವೆಚ್ಚದಲ್ಲಿ ಕಳಪೆ ಗುಣಮಟ್ಟದ ಸೀರೆಗಳನ್ನು ಇಲಾಖೆ ವಿತರಿಸುತ್ತಿದೆ. ಇವರಿಗೆ ವಿತರಿಸಿರುವ ಮೊಬೈಲ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಳಪೆ ದರ್ಜೆಯ ಮೊಬೈಲ್‌ಗಳನ್ನು ಇಲಾಖೆ ವಿತರಿಸಿದ್ದು, ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

ಮನೆ ಇಲ್ಲದವರಿಗೆ ಸರ್ಕಾರ ಅಶ್ರಯ ಯೋಜನೆ ಅಡಿ ಮನೆಗಳನ್ನು ನೀಡಬೇಕು. ಬಿಪಿಎಲ್ ಕಾರ್ಡ್‌ಗಳನ್ನು ನೀಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಾರದಮ್ಮ, ಉಪಾಧ್ಯಕ್ಷರಾದ ವಿಶಾಲಮ್ಮ, ಮಹಮದ್ ಬಾಷಾ, ಜಿಲ್ಲಾ ಘಟಕದ ಅಧ್ಯಕ್ಷ ವಾಸು, ಪ್ರಧಾನ ಕಾರ್ಯದರ್ಶಿ ಸುವರ್ಣಮ್ಮ, ಸಹಾಯಕ ಕಾರ್ಯದರ್ಶಿ ಗಾಯತ್ರಿ, ತಾಲ್ಲೂಕು ಘಟಕದ ಅಧ್ಯಕ್ಷೆ ವಿಮಲಾಕ್ಷಿ, ಉಪಾಧ್ಯಕ್ಷೆ ಪುಷ್ಪಾ ಮಹೇಶ್, ಕಾರ್ಯದರ್ಶಿ ಭಾರತಿ ಪ್ರಸಾದ್, ಖಜಾಂಚಿ ಕೆ.ಜಿ. ಗೀತಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.