ADVERTISEMENT

ವಿಧಾನಪರಿಷತ್‌ಗೆ ಕೊರಚ ಜನಾಂಗದವರನ್ನು ನಾಮ ನಿರ್ದೇಶನ ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 11:58 IST
Last Updated 8 ಜುಲೈ 2020, 11:58 IST

ದಾವಣಗೆರೆ: ಕೊರಚ ಜನಾಂಗದ ಯಾರಾದರೂ ಒಬ್ಬರಿಗೆ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಅಧ್ಯಕ್ಷ ಎಚ್.ಎನ್. ರಾಮಚಂದ್ರಪ್ಪ ಒತ್ತಾಯಿಸಿದರು.

‘ಕೊರಚ ಜನಾಂಗವು ಕಲಂ 53ರಲ್ಲಿ ಇದ್ದು, ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಶೂನ್ಯವಾಗಿದೆ. ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪನೆಯಾಗಿಲ್ಲ. ಶೈಕ್ಷಣಿಕ ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯವನ್ನು ಪಡೆಯುವಲ್ಲಿ ವಿಫಲವಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೊರಚ ಜನಾಂಗವು ರಾಜ್ಯದಲ್ಲಿ 14ರಿಂದ 15 ಲಕ್ಷ ಜನಸಂಖ್ಯೆ ಇದ್ದು, ಕುರಿ ಸಾಕಾಣಿಕೆ, ಹಂದಿ ಸಾಗಾಣಿಕೆ, ಹಗ್ಗ ನೇಯುವುದು, ಬೀದಿರು ಬುಟ್ಟಿ ಹೆಣೆಯುವುದು ಮುಂತಾದ ಕುಲಕಸುಬುಗಳನ್ನು ಅವಲಂಬಿಸಿದ್ದು, ಎಲ್ಲಾ ವಸ್ತುಗಳು ಪ್ಲಾಸ್ಟಿಕ್‌ಮಯವಾಗಿದ್ದು, ಬುಟ್ಟಿ ಹೆಣೆಯುವುದನ್ನು ನಿಲ್ಲಿಸಿದ್ದಾರೆ. ಶೇ 1ರಷ್ಟು ಈ ಸೌಲಭ್ಯವೂ ಇಲ್ಲ. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಘದ ಕಾರ್ಯದರ್ಶಿ ಎಚ್. ಮಟಗಾರ್ ಮಾತನಾಡಿ, ‘ಎಚ್‌.ಎನ್. ರಾಮಚಂದ್ರಪ್ಪ, ರಾಜೇಶ್ ಮಟಗಾರ್, ಎಸ್.ಎಲ್. ಹನುಮಂತಪ್ಪ, ಸುರೇಶ್ ಶಿವಪುರ, ಯಲ್ಲಪ್ಪ ಪೂಜಾರ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ವಿಧಾನಪರಿಷತ್‌ ಸದಸ್ಯತ್ವಕ್ಕೆ ನಾಮಿನಿಯನ್ನಾಗಿ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಜೆಟ್‌ನಲ್ಲಿ ‘ಕೊರಚ ಕೊರಮ ಅಭಿವೃದ್ಧಿ ನಿಗಮ’ವನ್ನು ಮಂಜೂರಾತಿ ನೀಡಿದ್ದರೂ ಈವರೆಗೆ ಕಾರ್ಯೋನ್ಮುಖವಾಗಿಲ್ಲ. ಜೊತೆಗೆ ₹ 5ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದರೂ ಕೊರಚ ಸಮಾಜಕ್ಕೆ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಕೊರಚ ಸಮಾಜದ ಅಧ್ಯಕ್ಷ ಮಾರಪ್ಪ ಪೈಲ್ವಾನ್, ಪ್ರಧಾನ ಕಾರ್ಯದರ್ಶಿ ಎಸ್‌.ಕುಮಾರ್, ಧನಂಜನೇಯ ವಿಜಾಪುರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.