ದಾವಣಗೆರೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ರೈತರು ಆಹಾರ ಧಾನ್ಯದ ಬೆಳೆಯಿಂದ ವಿಮುಖರಾಗುತ್ತಿದ್ದು, ಅಡಿಕೆ ಬೆಳೆಯ ವಿಸ್ತೀರ್ಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ದಾವಣಗೆರೆ ಜಿಲ್ಲೆಯೊಂದರಲ್ಲೇ ಒಂದು ವರ್ಷದ ಅವಧಿಯಲ್ಲಿ 49,000 ಹೆಕ್ಟೇರ್ ಕೃಷಿ ಭೂಮಿಯು ಅಡಿಕೆ ಮತ್ತಿತರ ತೋಟಗಾರಿಕೆ ಬೆಳೆಗಳತ್ತ ಬದಲಾಗಿದೆ.
2024–25ರಲ್ಲಿ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಿತ್ತು. 2025–26ನೇ ಸಾಲಿನಲ್ಲಿ ಈ ಪ್ರಮಾಣವು 1.96 ಲಕ್ಷ ಹೆಕ್ಟೇರ್‌ಗೆ ಕುಸಿದಿದೆ. ಇದಕ್ಕೆ ರೈತರು ವಾಣಿಜ್ಯ ಬೆಳೆಯಾದ ಅಡಿಕೆಯತ್ತ ವಾಲಿದ್ದೇ ಕಾರಣವಾಗಿದೆ.
ಜಿಲ್ಲೆಯಲ್ಲಿ 2024–25ನೇ ಸಾಲಿನವರೆಗೆ ಒಟ್ಟು 1.18 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿತ್ತು. ಈ ಪೈಕಿ ಶೇ 90ರಷ್ಟು ಅಡಿಕೆ ಬೆಳೆಯೇ ಇದೆ. ರೈತರು ಅಧಿಕ ಲಾಭ ತಂದುಕೊಂಡುವ ಅಡಿಕೆಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಮುಂದಾಗಿರುವುದನ್ನು ಇದು ಸೂಚಿಸುತ್ತಿದೆ.
ರಾಜ್ಯದಲ್ಲಿ 2019-20ರಲ್ಲಿ ಒಟ್ಟು 23.93 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿತ್ತು. 2020–21ರಲ್ಲಿ ಈ ಪ್ರಮಾಣ 26.20 ಲಕ್ಷ ಹೆಕ್ಟೇರ್‌ಗೆ ಏರಿಕೆ ಕಂಡಿತ್ತು. 2021–22ರಲ್ಲಿ 27.15 ಲಕ್ಷ ಹೆಕ್ಟೇರ್ ಹಾಗೂ 2022–23ರಲ್ಲಿ 27.41 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳನ್ನು ರೈತರು ನೆಚ್ಚಿಕೊಂಡಿಕೊಂಡಿದ್ದರು.
ಹೀಗೆ ವರ್ಷದಿಂದ ವರ್ಷಕ್ಕೆ ಏರುಮುಖವಾಗಿ ಸಾಗಿದ್ದ ತೋಟಗಾರಿಕೆ ಬೆಳೆಯ ವಿಸ್ತೀರ್ಣದ ಪ್ರಮಾಣ 2023–24ರಲ್ಲಿ ರಾಜ್ಯದಲ್ಲಿ ಉಂಟಾದ ತೀವ್ರ ಬರಗಾಲದ ಕಾರಣಕ್ಕೆ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡು, 24.91 ಲಕ್ಷ ಹೆಕ್ಟೇರ್‌ಗೆ ಸೀಮಿತವಾಗಿತ್ತು. ಈ ವರ್ಷ ಮುಂಗಾರುಪೂರ್ವ ಮಳೆಯು ಆರ್ಭಟಿಸಿದ್ದು, ತೋಟಗಾರಿಕೆ ಬೆಳೆಯ ವಿಸ್ತೀರ್ಣ ಮತ್ತಷ್ಟು ಹೆಚ್ಚಳವಾಗುತ್ತಿರುವುದನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಹಣ್ಣು, ತರಕಾರಿ, ಸಾಂಬಾರು ಪದಾರ್ಥ, ಹೂ, ಔಷಧೀಯ ಗಿಡಗಳನ್ನು ತೋಟಗಾರಿಕೆ ಬೆಳೆಗಳೆಂದು ಪರಿಗಣಿಸಲಾಗಿದೆ. ಆದರೆ, ಇವುಗಳೆಲ್ಲವುಗಳ ಪೈಕಿ ಅಡಿಕೆ ಬೆಳೆಯ ವಿಸ್ತೀರ್ಣವೇ ವಿಪರೀತ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ಭತ್ತಕ್ಕೆ ಹೋಲಿಸಿದರೆ ಅಡಿಕೆಗೆ ಉತ್ತಮ ದರ ಸಿಗುತ್ತಿದೆ. ಅಡಿಕೆ ಬೆಳೆಯಲು ಕಾರ್ಮಿಕರ ಅವಲಂಬನೆಯೂ ಕಡಿಮೆ. ಈ ಕಾರಣಕ್ಕೆ ರೈತರು ಭತ್ತ ಬೆಳೆಯುವುದನ್ನು ಕೈಬಿಟ್ಟು ಅಡಿಕೆ ತೋಟದತ್ತ ಆಕರ್ಷಿತರಾಗುತ್ತಿದ್ದಾರೆ ಎಂಬುದು ತೋಟಗಾರಿಕೆ ಇಲಾಖೆ ಮಾಹಿತಿ.
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಭಾಗದಲ್ಲಿ ಹೆಚ್ಚಾಗಿದ್ದ ಅಡಿಕೆ ಬೆಳೆಯು ಕೆಲ ವರ್ಷಗಳಿಂದ ಇಡೀ ಜಿಲ್ಲೆಗೆ ವಿಸ್ತರಿಸಿದೆ. ದಾವಣಗೆರೆ, ಮಾಯಕೊಂಡ, ಹರಿಹರ ಮಾತ್ರವಲ್ಲದೇ ‘ಬರಪೀಡಿತ’ ಎಂದೇ ಗುರುತಿಸಿಕೊಂಡ ಜಗಳೂರು ತಾಲ್ಲೂಕಿನಲ್ಲೂ ರೈತರು ಅಡಿಕೆ ಬೆಳೆಯನ್ನು ನೆಚ್ಚಿಕೊಳ್ಳುತ್ತಿದ್ದಾರೆ.
ತುಂಗಭದ್ರಾ ನದಿಯಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಜಗಳೂರಿನ ರೈತರನ್ನು ಅಡಿಕೆಯತ್ತ ವಾಲಿಸುತ್ತಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು ಕೃಷಿ ಭೂಮಿಯಲ್ಲಿ ತೋಟಗಾರಿಕೆ ಬೆಳೆಯ ವಿಸ್ತೀರ್ಣ ಪ್ರಮಾಣ ಶೇ 50ರಷ್ಟಿದ್ದರೆ, ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 33ರಷ್ಟಿದೆ.
ಜೊತೆಗೆ ನೆರೆಯ ಹಾವೇರಿ, ವಿಜಯನಗರ, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಗದಗ ಹಾಗೂ ತುಮಕೂರು, ಮೈಸೂರು, ಜಿಲ್ಲೆಗಳ ರೈತರೂ ‘ಅಡಿಕೆಯ ಸಮೃದ್ಧಿ’ಗೆ ಮಾರು ಹೋಗುತ್ತಿದ್ದಾರೆ. ಈಗಾಗಲೇ ಅಡಿಕೆ ಬೆಳೆಯುತ್ತಿರುವ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿನ ಅಡಿಕೆಯೇತರ ಬೆಳೆ ಬೆಳೆಯುತ್ತಿದ್ದ ರೈತರೂ ಅಡಿಕೆಯತ್ತಲೇ ವಾಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
‘ಬರ ಆವರಿಸಿ ಅಂತರ್ಜಲ ಮಟ್ಟ ಕುಸಿದು ನೀರಿನ ಕೊರತೆ ಉಂಟಾದರೆ ಅಡಿಕೆ ಗಿಡ ಉಳಿಸಿಕೊಳ್ಳುವುದು ಅಸಾಧ್ಯ. ಆದರೂ ರೈತರು ಅಡಿಕೆ ಬೆಳೆಯುವುದಕ್ಕೇ ಉತ್ಸಾಹಿಯಾಗಿರುವುದು ಸೋಜಿಗ ಮೂಡಿಸುತ್ತಿದೆ. ಸಮ್ಮಿಶ್ರ ಬೆಳೆ ಬಗ್ಗೆ ರೈತರ ಮನವೊಲಿಸಿದರೂ ಪ್ರಯೋಜನವಾಗುತ್ತಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ರೈತರು ಅಡಿಕೆ ಬೆಳೆಗೆ ಮಾತ್ರ ಸೀಮಿತವಾಗಬಾರದು. ಕಾಳುಮೆಣಸು ಕೋಕೊ ಬೆಳೆದರೆ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅಂತರ ಬೆಳೆ ಕೃಷಿಯು ರೈತರಿಗೆ ಲಾಭ ತರಲಿದೆರಾಘವೇಂದ್ರ ಪ್ರಸಾದ್ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ
ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಅಡಿಕೆಯನ್ನೇ ಎಲ್ಲರೂ ನೆಚ್ಚಿಕೊಂಡರೆ ದರ ಕುಸಿತದ ಅಪಾಯವಿದೆ. ಆಹಾರ ಧಾನ್ಯ ಕೊರತೆಯೂ ಉಂಟಾಗಲಿದೆತೇಜಸ್ವಿ ಪಟೇಲ್ ರೈತ ಮುಖಂಡ
ರೈತರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಬೇಕು. ಆಹಾರ ಧಾನ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಆರೋಗ್ಯವೂ ವೃದ್ಧಿಸುತ್ತದೆಶ್ರೀಧರಮೂರ್ತಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.