ADVERTISEMENT

ಬಸವಾಪಟ್ಟಣ | ಹಸ್ತಾ ಮಳೆಗೆ ಅಡಿಕೆ ಬೆಳೆಗಾರರ ಬದುಕು ಅಸ್ತವ್ಯಸ್ತ

ಉತ್ತಮ ದರ ದೊರೆಯುತ್ತಿರುವಾಗಲೇ ಆರ್ಭಟಿಸಿದ ವರುಣ; ಕೊಯ್ಲು, ಸಂಸ್ಕರಣೆಯಲ್ಲಿ ತೊಡಗಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:41 IST
Last Updated 11 ಅಕ್ಟೋಬರ್ 2025, 5:41 IST
   

ಬಸವಾಪಟ್ಟಣ: ಮಳೆಗಾಲ ಮುಗಿಯಿತೆಂದು ಭಾವಿಸಿ ನೆಮ್ಮದಿಯಿಂದ ಅಡಿಕೆ ಕೊಯ್ಲು ಮತ್ತು ಸಂಸ್ಕರಣ ಕಾರ್ಯದಲ್ಲಿ ತೊಡಗಿದ್ದ ಈ ಭಾಗದ ಬೆಳೆಗಾರರನ್ನು ಎರಡು ದಿನದಿಂದ ಸುರಿಯುತ್ತಿರುವ ಹಸ್ತಾ ಮಳೆ ಸಂಕಷ್ಟಕ್ಕೆ ದೂಡಿದೆ. 

ಬುಧವಾರ ಮಳೆಯ ಯಾವ ಸೂಚನೆಯೂ ಇರಲಿಲ್ಲ. ಆದರೆ ಕತ್ತಲು ಕವಿಯುತ್ತಿದ್ದಂತೆ ಮಿಂಚು ಗುಡುಗಿನ ಆರ್ಭಟ ಶುರುವಾಗಿತ್ತು. ರಾತ್ರಿ ಹನ್ನೊಂದರ ವೇಳೆಗೆ ಆರಂಭವಾದ ಮಳೆ ಇಡೀ ರಾತ್ರಿ ಸುರಿದಿತ್ತು. ಇದರಿಂದಾಗಿ ಬಹುಪಾಲು ರೈತರು ಒಣಗಲು ಹಾಕಿದ್ದ  ಅಡಿಕೆ ತೋಯ್ದು ಹೋಗಿದೆ.

ಗುರುವಾರ ಸಾಕಷ್ಟು ಬಿಸಿಲು ಬಿದ್ದಿತ್ತು. ಆದರೆ ಶುಕ್ರವಾರ ನಸುಕಿನಿಂದ ಮುಂಜಾನೆ 9ರವರೆಗೂ ಮತ್ತೆ ಮಳೆ ಬಿದ್ದಿದೆ. ಇದರಿಂದ ಅಡಿಕೆ ಒಣಗಿಸಲು ಸಮಸ್ಯೆಯಾಗಿದೆ. ಅಡಿಕೆ ದರ ಕ್ವಿಂಟಲ್‌ಗೆ ₹ 60 ಸಾವಿರ ದಾಟಿದೆ. ಈ ಹೊತ್ತಿನಲ್ಲೇ ವರುಣ ಆರ್ಭಟಿಸಿರುವುದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ.  

ADVERTISEMENT

‘ಒಣಗಲು ಹರಡಿದ್ದ ಅಡಿಕೆಯ ಮೇಲೆ ಟಾರ್ಪಾಲಿನ್‌ ಮುಚ್ಚಿದ್ದರೂ ರಭಸದ ಮಳೆಯಿಂದ ಅಡಿಕೆ ರಾಶಿ ತೇವವಾಗಿದೆ. ಗುರುವಾರ ಬಿಸಿಲು ಚೆನ್ನಾಗಿ ಬಿದ್ದಿರುವುದರಿಂದ ಎಲ್ಲರೂ ಅಡಿಕೆ ಒಣಗಿಸುವುದರಲ್ಲಿ ನಿರತರಾಗಿದ್ದೆವು. ಆದರೆ ಶುಕ್ರವಾರ ಬೆಳಗಿನ ಜಾವ ಮತ್ತೆ ಮಳೆ ಬಿದ್ದು ಸಾಕಷ್ಟು ತೊಂದರೆ ಆಗಿದೆ’ ಎಂದು ಅಡಿಕೆ ಬೆಳೆಗಾರ ರುದ್ರಪ್ಪ ಹೇಳಿದರು.

‘ಹೋಬಳಿಯಲ್ಲಿ ಅಂದಾಜು 5 ಸಾವಿರ ಹೆಕ್ಟೇರ್‌ಗೂ ಹೆಚ್ಚು ಭೂಮಿಯಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಈ ರೀತಿಯ ಅಕಾಲಿಕ ಮಳೆಯಿಂದ ಫಸಲು ಕಾಪಾಡಿಕೊಳ್ಳಲು ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಅಡಿಕೆ ಗಿಡಕ್ಕೆ ಸುಳಿ ತಿನ್ನುವ ಎರಡು ರೀತಿಯ ಕೀಟಗಳು ನಾಶವಾಗಿದ್ದು, ಒಂದು ರೀತಿಯಲ್ಲಿ ರೈತರಿಗೆ ನೆಮ್ಮದಿ ತಂದಿದೆ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಸೌರಭ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.