ADVERTISEMENT

ಕೃತಕ ಬುದ್ಧಿಮತ್ತೆ ವಿಶ್ವ ಆಳಲಿದೆ: ರಘು ಮೋಹನ್‌ ಅಭಿಮತ

ತಂತ್ರಜ್ಞಾನ ಉನ್ನತೀಕರಣ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 12:26 IST
Last Updated 8 ಜನವರಿ 2020, 12:26 IST
ದಾವಣಗೆರೆಯ ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಟೆಕ್ನಾಲಾಜಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಂತ್ರಜ್ಞಾನ ಉನ್ನತೀಕರಣ ಕಾರ್ಯಾಗಾರವನ್ನು ಬೆಂಗಳೂರಿನ ಐಬಿಸಿ ಮಿಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘು ಮೋಹನ್‌ ಉದ್ಘಾಟಿಸಿದರು
ದಾವಣಗೆರೆಯ ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಟೆಕ್ನಾಲಾಜಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಂತ್ರಜ್ಞಾನ ಉನ್ನತೀಕರಣ ಕಾರ್ಯಾಗಾರವನ್ನು ಬೆಂಗಳೂರಿನ ಐಬಿಸಿ ಮಿಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘು ಮೋಹನ್‌ ಉದ್ಘಾಟಿಸಿದರು   

ದಾವಣಗೆರೆ: ಪ್ರಸ್ತುತ ಬರುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್‌ ಇಂಟಲಿಜೆನ್ಸಿ) ಭವಿಷ್ಯದಲ್ಲಿ ಮಾನವನ ಉದ್ಯೋಗಗಳನ್ನು ನಾಮಾವಶೇಷ ಮಾಡುವುದರ ಜೊತೆಗೆ ಮಾನವೀಯತೆಯನ್ನೂ ನಾಶ ಮಾಡುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಐಬಿಸಿ ಮಿಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘು ಮೋಹನ್‌ ಅಭಿಪ್ರಾಯಪಟ್ಟರು.

ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಟೆಕ್ನಾಲಾಜಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಂತ್ರಜ್ಞಾನ ಉನ್ನತೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಪದವೀಧರರು ಸ್ಥಿರ ಉದ್ಯೋಗದ ಕನಸು ಬಿಟ್ಟು ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಕೃತ ಬುದ್ಧಿಮತ್ತೆ ದಕ್ಷತೆ, ಕ್ಷಮತೆ, ಪಾರದರ್ಶಕತೆ, ಗೌಪ್ಯತೆ, ವೇಗವನ್ನು ಹೆಚ್ಚಿಸುತ್ತ ಭ್ರಷ್ಟಾಚಾರವನ್ನೂ ನಿಯಂತ್ರಿಸುತ್ತದೆ. ಆದರೆ, ಮಾನವನ ಉದ್ಯೋಗಗಳಿಗೆ ಸಂಚಕಾರ ತರುತ್ತದೆ’ ಎಂದು ಹೇಳಿದರು.

ADVERTISEMENT

ದಿನಕ್ಕೆ ₹ 400 ಲಕ್ಷ ಕೋಟಿ ಮೊತ್ತದ ವ್ಯವಹಾರ ನಡೆಸುವ ಕಂಪನಿಯಲ್ಲಿ ಒಟ್ಟು 50 ಸಾವಿರ ಉದ್ಯೋಗಿಗಳಿದ್ದರೆ ಇದಕ್ಕಿಂತ ಚಿಕ್ಕ ಕಂಪನಿಗಳಲ್ಲಿ ಆರೇಳು ಲಕ್ಷ ಉದ್ಯೋಗಿಗಳಿದ್ದಾರೆ. ಕೃತಕ ಬುದ್ಧಿಮತ್ತೆಯು ಮುಂದೆ ಸರ್ಕಾರಿ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಿ ಕೆಲಸಗಳೆಲ್ಲ ಗುತ್ತಿಗೆ ಆಧಾರದಲ್ಲೇ ನಡೆಯುವಂತೆ ಮಾಡಿ, ಸ್ಥಿರ ಉದ್ಯೋಗ ಪರಿಕಲ್ಪನೆಗೆ ಇತಿಶ್ರೀ ಹಾಡುವ ಸಾಧ್ಯತೆ ಇದೆ. ಸದ್ಯ ಕೃತಕ ಬುದ್ಧಿಮತ್ತೆಯು ನಮ್ಮ ಕೆಲಸಗಳನ್ನು ಸುಲಭಗೊಳಿಸುವಂತಿದೆ. 2023ರವರೆಗೆ ಸ್ವಯಂ ಆಲೋಚಿಸುವ ಮಟ್ಟಕ್ಕೆ ತಲುಪಲಿದ್ದು, 2025ರ ವೇಳೆಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಮಟ್ಟಕ್ಕೆ ತಲುಪಲಿದೆ ಎಂದು ಅಭಿಪ್ರಾಯಪಟ್ಟರು.

ಇದರಿಂದ ಯಾರೂ ದೃತಿಗೆಡಬೇಕಾಗಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಬೇಕು. ಅಪಾಯಗಳನ್ನು ಮೀರಿಸುವ ಉಪಾಯಗಳನ್ನೂ ಕೃತಕ ಬುದ್ಧಿಮತ್ತೆಯೇ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ಭುವನಾನಂದ, ‘ಕೃತಕ ಬುದ್ಧಿಮತ್ತೆ ಬಗ್ಗೆ ಮಾಹಿತಿಯಷ್ಟೇ ಪಡೆದರೆ ಸಾಲದು, ಭವಿಷ್ಯದ ತಂತ್ರಜ್ಞಾನಗಳ ಕುರಿತೂ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಇಂತಹ ಕಾರ್ಯಾಗಾರ ಸಹಕಾರಿ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ನವೀನ್‌ ನಾಗರಾಜ್‌, ವಿಭಾಗದ ಮುಖ್ಯಸ್ಥ ಡಾ. ಸುಜಿತ್‌ ಕುಮಾರ್‌ ಇದ್ದರು. ಪ್ರೊ. ಇಂಚರಾ ಮೂರ್ತಿ ಪ್ರಾರ್ಥಿಸಿದರು. ಪ್ರೊ. ವಿಜಯ್‌ ಕೆ.ಎಸ್‌. ಅತಿಥಿಗಳನ್ನು ಪರಿಚಯಿಸಿದರು. ಅಮೃತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.