ADVERTISEMENT

ಸರಳವಾಗಿ ‘ಓಣಂ’ ಆಚರಣೆ; ಕೇರಳ, ಕೊಡಗು ಸಂತ್ರಸ್ತರಿಗೆ ನೆರವು

ಕೇರಳ ಸಮಾಜದಿಂದ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 12:51 IST
Last Updated 9 ಸೆಪ್ಟೆಂಬರ್ 2018, 12:51 IST
ಕೇರಳ ಸಮಾಜದವರು ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸರಳವಾಗಿ ಹಮ್ಮಿಕೊಂಡಿದ್ದ ‘ಓಣಂ’ ಹಬ್ಬಕ್ಕೆ ಹೂವಿನ ರಂಗೋಲಿ ಎದುರು ಸಮಾಜದ ಪದಾಧಿಕಾರಿಗಳು ಚಾಲನೆ ನೀಡಿದರು
ಕೇರಳ ಸಮಾಜದವರು ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸರಳವಾಗಿ ಹಮ್ಮಿಕೊಂಡಿದ್ದ ‘ಓಣಂ’ ಹಬ್ಬಕ್ಕೆ ಹೂವಿನ ರಂಗೋಲಿ ಎದುರು ಸಮಾಜದ ಪದಾಧಿಕಾರಿಗಳು ಚಾಲನೆ ನೀಡಿದರು   

ದಾವಣಗೆರೆ: ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ಜನ ತೊಂದರೆ ಪಡುತ್ತಿರುವುದರಿಂದ ನಗರದ ಗುಂಡಿ ಮಹಾದೇವ ಕಲ್ಯಾಣ ಮಂಟಪದಲ್ಲಿ ಕೇರಳ ಸಮಾಜದವರು ಭಾನುವಾರ ಸರಳವಾಗಿ ಓಣಂ ಹಬ್ಬವನ್ನು ಆಚರಿಸಿದರು.

ಮಲಯಾಳ ಸಮಾಜದವರು ಓಣಂ ಹಬ್ಬವನ್ನು ಪ್ರತಿ ವರ್ಷ ವೈಭವದಿಂದ ಆಚರಿಸುತ್ತಿದ್ದರು. ಆದರೆ, ವಿಶೇಷವಾಗಿ ಕೇರಳದಲ್ಲಿ ತಮ್ಮ ಸಮಾಜದವರು ಸಂಕಷ್ಟದಲ್ಲಿರುವುದರಿಂದ ಈ ಬಾರಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಿದರು. ಹಬ್ಬದ ಆಚರಣೆಗೆ ಮೀಸಲಿಟ್ಟಿದ್ದ ಹಣದಲ್ಲಿ ಹೆಚ್ಚಿನ ಪಾಲನ್ನು ಹಾಗೂ ಕಾರ್ಯಕ್ರಮದಲ್ಲಿ ದೇಣಿಗೆ ಸಂಗ್ರಹಿಸುವ ಮೂಲಕ ಸಂತ್ರಸ್ತರಿಗೆ ನೆರವಾಗಲು ಮುಂದಾದರು.

ಪ್ರತಿ ಬಾರಿ ಓಣಂ ಹಬ್ಬದಲ್ಲಿ ಹೂವಿನ ರಂಗೋಲಿ ಸ್ಪರ್ಧೆ (ಪುಕ್ಕಳ ಮತ್ಸರಂ) ವಿಶೇಷವಾಗಿ ಗಮನ ಸೆಳೆಯುತ್ತಿದ್ದವು. ಆದರೆ, ಹಬ್ಬಕ್ಕೆ ‘ಸೂತಕದ ಛಾಯೆ’ ಇದ್ದುದರಿಂದ ಈ ಬಾರಿ ಸಂಘಟಕರು ಹೂವಿನ ರಂಗೋಲಿ ಸ್ಪರ್ಧೆಯನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟಿದ್ದರು. ಸ್ವಾಗತ ರಂಗೋಲಿಯನ್ನೂ ಹಾಕಿರಲಿಲ್ಲ. ಸ್ಪರ್ಧೆಗಾಗಿ ಬಂದಿದ್ದ ಕೆಲ ಮಹಿಳೆಯರೇ ಸಂಭಾಂಗಣದ ಪ್ರವೇಶ ದ್ವಾರದ ಎದುರು ಎರಡು ಪುಷ್ಪ ರಂಗೋಲಿ ಹಾಕಿ ಹಬ್ಬದ ವಾತಾವರಣ ಕಾಣುವಂತೆ ಮಾಡಿದರು.

ADVERTISEMENT

‘ಕೇರಳ ಮತ್ತು ಕೊಡಗಿನಲ್ಲಿ ಜನ ತೊಂದರೆಯಲ್ಲಿರುವುದರಿಂದ ಈ ಬಾರಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಈ ಮೊದಲು ನಿಗದಿಯಾಗಿದ್ದಂತೆ ಮಕ್ಕಳಿಗಾಗಿ ಕೆಲವು ಆಟಗಳನ್ನು ಮಾತ್ರ ಆಡಿಸಲಾಯಿತು. ನಮ್ಮ ಸಮಾಜದವರು ವರ್ಷಕ್ಕೆ ಒಮ್ಮೆ ಸೇರಿ ಕಾರ್ಯಕ್ರಮ ನಡೆಸುತ್ತಿರುವುದರಿಂದ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಕೇರಳ ಸಮಾಜದ ಜಂಟಿ ಕಾರ್ಯದರ್ಶಿ ಮಣಿಕುಟ್ಟನ್‌ ಪಿ.ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇರಳದ ವೈನಾಡಿನ ಸ್ವರಾ ರಂಜಿನಿ ಆರ್ಕೆಸ್ಟ್ರಾ ತಂಡದ ಪ್ರದರ್ಶನವನ್ನು ರದ್ದುಗೊಳಿಸಿದ್ದೇವೆ. ಅದಕ್ಕೆ ನಿಗದಿಗೊಳಿಸಿದ್ದ ಹಣವನ್ನು ಸಂತ್ರಸ್ತರ ನೆರವಿಗೆ ನೀಡಲಾಗುತ್ತಿದೆ. ಮಲಬಾರ್‌ ಗೋಲ್ಡ್‌ ಪ್ರಾಯೋಜಿತ ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ 3.5 ಗ್ರಾಂ ಗೋಲ್ಡ್‌ ಲಕ್ಕಿ ಡಿಪ್‌ ಡ್ರಾ ಮತ್ತು ಪುಷ್ಪ ರಂಗೋಲಿ ಸ್ಪರ್ಧೆಯ ಬಹುಮಾನಗಳ ಮೊತ್ತವನ್ನೂ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದೇವೆ. ಕಾರ್ಯಕ್ರಮಕ್ಕೆ ಬಂದ ನಮ್ಮ ಸಮಾಜದವರಿಂದ ದೇಣಿಗೆ ಸಂಗ್ರಹಿಸಲಾಗಿದ್ದು, ಅದನ್ನು ಸಂತ್ರಸ್ತರಿಗೆ ನೀಡಲಾಗುವುದು’ ಎಂದೂ ಅವರು ತಿಳಿಸಿದರು.

ಮಧ್ಯಾಹ್ನ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ‘ಕೇರಳ, ಕೊಡಗಿನಲ್ಲಿ ಪ್ರವಾಹ ಬಂದಿದ್ದರಿಂದ ಈ ಬಾರಿ ಓಣಂ ಹಬ್ಬ ಕಳೆಗುಂದಿದೆ. ಸಾಂಕೇತಿಕವಾಗಿ ಆಚರಿಸಿ ಸಂತ್ರಸ್ತರಿಗೆ ನೆರವಾಗುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಸಂತ್ರಸ್ತರಿಗೆ ನೆರವಾಗಲು ವೈಯಕ್ತಿಕವಾಗಿ ಕೇರಳ ಹಾಗೂ ಕರ್ನಾಟಕ ರಾಜ್ಯಕ್ಕೆ ತಲಾ ₹ 12.50 ಲಕ್ಷ ನೆರವು ನೀಡಲಾಗಿದೆ. ದಾವಣಗೆರೆ ಪಟ್ಟಣ ಸಹಕಾರ ಬ್ಯಾಂಕ್‌ಗಳಿಂದ ಎರಡೂ ರಾಜ್ಯಕ್ಕೆ ತಲಾ ₹ 50 ಲಕ್ಷ ಕೊಡಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇರಳ ಸಮಾಜದ ಅಧ್ಯಕ್ಷ ಅಬ್ದುಲ್‌ ರಸಾಕ್‌ ಮಾತನಾಡಿ, ‘ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕಲಾವಿದರಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಳಿಸಿ ಸಾಂಕೇತಿಕವಾಗಿ ಹಬ್ಬ ಆಚರಿಸಿದ್ದೇವೆ’ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮೇಯರ್‌ ಶೋಭಾ ಪಲ್ಲಾಗಟ್ಟೆ, ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಕೇರಳ ಸಮಾಜದ ಕಾರ್ಯದರ್ಶಿ ಇ.ಪಿ. ಬಿಜು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.