ADVERTISEMENT

ಜಾಗೃತಿಗಾಗಿ ಅಧಿಕಾರಿಗಳ ಬೈಕ್‌ ರ‍್ಯಾಲಿ

ಅರಿವು ಮೂಡಿಸಿದ ಡಿಸಿ, ಎಸ್ಪಿ, ಜಿ.ಪಂ. ಸಿಇಒ ನೇತೃತ್ವದ ತಂಡ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 3:45 IST
Last Updated 20 ಡಿಸೆಂಬರ್ 2021, 3:45 IST
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿ.ಪಂ. ಸಿಇಒ ವಿಜಯ ಮಹಾಂತೇಶ ಧಾನಮ್ಮನವರ್ ಅವರು ದಾವಣಗೆರೆ–ಶಾಂತಿಸಾಗರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿ.ಪಂ. ಸಿಇಒ ವಿಜಯ ಮಹಾಂತೇಶ ಧಾನಮ್ಮನವರ್ ಅವರು ದಾವಣಗೆರೆ–ಶಾಂತಿಸಾಗರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು   

ದಾವಣಗೆರೆ: ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ, ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ ನೀಡುವ ಅಧಿಕಾರಿಗಳ ತಂಡದ ಜಾಗೃತಿ ಜಾಥಾ ದಾವಣಗೆರೆಯಿಂದ, ಸಂತೇಬೆನ್ನೂರು ಮಾರ್ಗವಾಗಿ ಸೂಳೆಕೆರೆವರೆಗೆ ನಡೆಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೈಕ್‌ ರ‍್ಯಾಲಿ ನಡೆಸಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳು, ಅಲ್ಲದೆ ಸಾಮಾಜಿಕ ಪಿಡುಗುಗಳ ಕುರಿತು ಜನ ಜಾಗೃತಿ, ಸಂಚಾರ ನಿಯಮಗಳು ಹಾಗೂ ಕೋವಿಡ್ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ADVERTISEMENT

ಜಿಲ್ಲಾಧಿಕಾರಿ ತಮ್ಮ ಬೈಕ್‍ಗೆ ‘ಕೋವಿಡ್ ನಿಯಂತ್ರಣಕ್ಕಾಗಿ ತಪ್ಪದೆ ಲಸಿಕೆ ಪಡೆಯಿರಿ’ ಸಂದೇಶವುಳ್ಳ ಫಲಕ
ವನ್ನು ಅಳವಡಿಸಿಕೊಂಡರೆ, ‘ಹೆಲ್ಮೆಟ್ಬಳಸಿ ಚಾಲನೆ ಮಾಡಿ’, ‘ಅಪರಾಧಮುಕ್ತ ಸಮಾಜ ನಿರ್ಮಿಸೋಣ ಬನ್ನಿ’ ಎಂಬ ಸಂದೇಶವುಳ್ಳಫಲಕವನ್ನು ಎಸ್‌ಪಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ‘ಮಕ್ಕಳ ಸಹಾಯವಾಣಿ– 1098’ ಕುರಿತು, ಜಿಲ್ಲಾ ಪಂಚಾಯಿತಿ ಸಿಇಒ ಅವರು, ಬಾಲ ಕಾರ್ಮಿಕ ಪದ್ಧತಿ ನಿಷೇಧದ ಬಗೆಗಿನ ಸಂದೇಶವುಳ್ಳ ಫಲಕ, ಆರ್‌ಟಿಒ ಶ್ರೀಧರ್ ಮಲ್ಲಾಡ್ ರಸ್ತೆ ಸುರಕ್ಷತೆ ಸಪ್ತಾಹ ಕುರಿತ ಫಲಕ ಹೀಗೆ ಒಬ್ಬೊಬ್ಬ ಅಧಿಕಾರಿ ಒಂದೊಂದು ವಿಚಾರದ ಫಲಕಗಳನ್ನು ಬೈಕ್‌ಗಳಲ್ಲಿ ಅಳವಡಿಸಿಕೊಂಡಿದ್ದರು.

ಜಿಲ್ಲಾ ಪಂಚಾಯಿತಿ ಆವರಣದಿಂದ ಹೊರಟ ರ‍್ಯಾಲಿ ಸಂತೇಬೆನ್ನೂರಿಗೆ ತಲುಪಿ ಐತಿಹಾಸಿಕ ಪುಷ್ಕರಣಿಗೆ ಭೇಟಿ ನೀಡಿತು. ಬಳಿಕ ಸೂಳೆಕೆರೆ ಬಳಿಯ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಮಾಡುವ ಮೂಲಕ ಜಾಥಾ ಪೂರ್ಣಗೊಳಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ನಾಯಕ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.