ADVERTISEMENT

ಬಂಜಾರರ ಆಕ್ರೋಶ: ರದ್ದಾದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ

ಹರ್ತಿಕೋಟೆಯ ಸಮಾವೇಶಕ್ಕೆ ಜನರೇ ಬಾರದ ಆತಂಕ

ಸಿದ್ದಯ್ಯ ಹಿರೇಮಠ
Published 27 ಮಾರ್ಚ್ 2023, 17:55 IST
Last Updated 27 ಮಾರ್ಚ್ 2023, 17:55 IST

ದಾವಣಗೆರೆ: ಮೀಸಲಾತಿಗೆ ಸಂಬಂಧಿಸಿ ದಂತೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಕೈಗೊಂಡ ನಿರ್ಧಾರಕ್ಕೆ ಸಮುದಾಯವೊಂದರಿಂದ ವ್ಯಕ್ತವಾದ ವಿರೋಧವು ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಫಲಾನುಭವಿಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ರದ್ದಾಗಲು ಪ್ರಮುಖ ಕಾರಣವಾಗಿದೆ.

ಲಂಬಾಣಿ ತಾಂಡಾಗಳು ಮತ್ತು ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿದ್ದ ಸರ್ಕಾರ, 9 ಜಿಲ್ಲೆಗಳ 50,000 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯಲ್ಲಿ ಸೋಮವಾರ ಬೃಹತ್‌ ಸಮಾವೇಶ ಆಯೋಜಿಸಿ ಸಕಲ ಸಿದ್ಧತೆ ಕೈಗೊಂಡಿತ್ತು.

ಈ ಸಂಬಂಧ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿದ್ದರು. ಫಲಾನುಭವಿ ಗಳನ್ನು ಕರೆತರಲು, ಪಕ್ಷದ ಆಯಾ ಜಿಲ್ಲೆಗಳ ಮುಖಂಡರಿಗೆ ತಿಳಿಸಲಾಗಿತ್ತು. ಆದರೆ, ಒಳಮೀಸಲಾತಿಯ ವರ್ಗೀ ಕರಣ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಕಳೆದ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಕ್ಕೆ ಲಂಬಾಣಿ (ಬಂಜಾರ) ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಸಮಾವೇಶವನ್ನೇ ರದ್ದುಪಡಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ADVERTISEMENT

ಹಕ್ಕುಪತ್ರ ಪಡೆಯಲಿದ್ದ ಫಲಾನುಭವಿಗಳಲ್ಲಿ ಶೇ 75ರಷ್ಟು ಲಂಬಾಣಿ ಸಮುದಾಯದವರಿದ್ದರು. ಅವರನ್ನು ಸಮಾವೇಶಕ್ಕೆ ಕರೆತರುವುದು ಕಷ್ಟ ಸಾಧ್ಯ ಎಂಬ ಕಾರಣದಿಂದ ಸರ್ಕಾರವೇ ಭಾನುವಾರ ಕಾರ್ಯಕ್ರಮ ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಂಬಾಣಿ ಸಮುದಾಯದ ಶಾಸಕರು ಮತ್ತು ಕಾರ್ಯಕರ್ತರು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ಫಲಾನುಭವಿಗಳನ್ನು ಕರೆತರಲಾಗದು’ ಎಂಬ ಸಂದೇಶ ರವಾನಿಸಿದ್ದರಿಂದ ಆತಂಕದಿಂದ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ಅವರು ಹೇಳಿದರು.

ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಂದಾಯ ಗ್ರಾಮಗಳಾಗಿ ಬದಲಾದ ತಾಂಡಾ ಮತ್ತು ಹಟ್ಟಿಗಳ 50,000 ಫಲಾನುಭವಿಗಳಿಗೆ ಹಾಗೂ ಇತರ ಯೋಜನೆಗಳ 50,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ ಮತ್ತಿತರ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯ ಲಂಬಾಣಿ ತಾಂಡಾಗಳಿದ್ದು, ತೀವ್ರ ಅಸಮಾಧಾನ ಹೊಂದಿರುವ ಆ ಸಮುದಾಯದ ಜನ ಸಮಾವೇಶಕ್ಕೆ ಬರಲು ಹಿಂದೇಟು ಹಾಕಿದ್ದರಿಂದ ಕಾರ್ಯಕ್ರಮ ರದ್ದುಪಡಿಸಿ, ಆಯಾ ತಹಶೀಲ್ದಾರ್‌ ಕಚೇರಿ ವ್ಯಾಪ್ತಿಯಲ್ಲಿ ಹಕ್ಕುಪತ್ರ ವಿತರಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.