
ಮಲೇಬೆನ್ನೂರು: ‘ಗ್ರಾಹಕರು ಯಾವುದೇ ತರಹದ ಅನುಮಾನಾಸ್ಪದ ದೂರವಾಣಿ ಕರೆ, ಸಂದೇಶ ಅಥವಾ ಲಿಂಕ್ ಕಂಡುಬಂದರೆ, ಎಚ್ಚರಿಕೆ ವಹಿಸಿ ವ್ಯವಹರಿಸಬೇಕುʼ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ವಿ. ಕಾಮತ್ ಸಲಹೆ ನೀಡಿದರು.
ಸಮೀಪದ ದೇವರಬೆಳಕೆರೆ ಶಾಖೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಣಕಾಸು ಸಾಕ್ಷರತಾ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬ್ಯಾಂಕಿಂಗ್ ವಂಚನೆಗಳನ್ನು ತಡೆಯುವ ಕ್ರಮಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಖಾತೆ ವಿವರಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಅಗತ್ಯ ಮತ್ತು ವಂಚಕರು ಖಾತೆ ದುರುಪಯೋಗಪಡಿಸಿಕೊಳ್ಳುವ ಅಪಾಯಗಳ ಬಗ್ಗೆ ಆರ್‌ಬಿಐ ಪ್ರತಿನಿಧಿ ಗೌತಮ್ ತಿಳಿಸಿದರು.
ವಂಚಕರ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಜಾಗೃತರಾಗರಬೇಕು. ಯಾವುದೇ ತರಹದ ಅನುಮಾನ ಇದ್ದರೆ, ನೇರವಾಗಿ ಶಾಖೆಗಳಿಗೆ ಹೋಗಿ ವ್ಯವಹರಿಸಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಪಿ. ಹಿರೇಮಠ್ ಹೇಳಿದರು.
ಶಾಖಾ ವ್ಯವಸ್ಥಾಪಕ ಜಗದೀಶ್ ಸಿಂಹಾಸನ, ಪಿಡಿಒ ಭಾಸ್ಕರ್ ಮಾರ್ಗದರ್ಶನ ನೀಡಿದರು. ಸಂಜೀವ್, ದೀಪಕ್, ಮನೋಜ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಅರ್ಕಾಚಾರಿ, ವಿವಿಧ ಬ್ಯಾಂಕ್‌ಗಳ ಸಿಬ್ಬಂದಿ ಹಾಗೂ ಗ್ರಾಹಕರು ಇದ್ದರು.
ಪಿಎಂ ವಿಮಾ ಯೋಜನೆಯಡಿ ಫಲಾನುಭವಿಗೆ ₹2 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.