ADVERTISEMENT

ಬಸವಣ್ಣ ಆಪ್ತ ನಿಜಶರಣ ಅಂಬಿಗರ ಚೌಡಯ್ಯ: ಮಾಡಾಳ್ ವಿರೂಪಾಕ್ಷಪ್ಪ

ರುದ್ರಾಪುರದಲ್ಲಿ ಅಂಬಿಗರ ಸಂಭ್ರಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:35 IST
Last Updated 3 ಫೆಬ್ರುವರಿ 2026, 2:35 IST
ಚನ್ನಗಿರಿ ತಾಲ್ಲೂಕು ರುದ್ರಾಪುರದಲ್ಲಿ ಸೋಮವಾರ ನಡೆದ ಅಂಬಿಗರ ಸಂಭ್ರಮ ಕಾರ್ಯಕ್ರಮವನ್ನು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು
ಚನ್ನಗಿರಿ ತಾಲ್ಲೂಕು ರುದ್ರಾಪುರದಲ್ಲಿ ಸೋಮವಾರ ನಡೆದ ಅಂಬಿಗರ ಸಂಭ್ರಮ ಕಾರ್ಯಕ್ರಮವನ್ನು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉದ್ಘಾಟಿಸಿದರು   

ರುದ್ರಾಪುರ (ಚನ್ನಗಿರಿ): ‘12 ನೇ ಶತಮಾನದ ಬಸವಾದಿ ಶಿವಶರಣರು ಸಮಾಜದ ಏಳಿಗೆಗಾಗಿ ನೂರಾರು ವಚನಗಳನ್ನು ರಚಿಸಿ ಸಮಾಜದಲ್ಲಿ ನಡೆಯುತ್ತಿದ್ದ ಕಂದಾಚಾರ, ಮೂಢನಂಬಿಕೆ, ಅಂಧಶ್ರದ್ಧೆ ಮುಂತಾದ ಸಾಮಾಜಿಕ ಅನಿಷ್ಟ ಆಚರಣೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅವರಲ್ಲಿ ಅಂಬಿಗರ ಚೌಡಯ್ಯನವರು ಬಸವಣ್ಣರ ಆಪ್ತರಾಗಿದ್ದರು’ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಗ್ರಾಮದಲ್ಲಿ ಸೋಮವಾರ ಗಂಗಾ ಪರಮೇಶ್ವರಿ ಸೇವಾ ಸಮಿತಿಯಿಂದ ನಡೆದ ‘ಅಂಬಿಗರ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಶರಣರ ವಚನಗಳು ಇಂದಿಗೂ ಕೂಡಾ ಕನ್ನಡನಾಡಿನ ಪ್ರತಿಯೊಬ್ಬರ ಮನೆ, ಮನದಲ್ಲೂ ಅಚ್ಚಳಿಯದಂತೆ ಉಳಿದಿವೆ. ಸಮಾಜದಲ್ಲಿನ ಮೇಲು- ಕೀಳು ಎಂಬ ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಹೋಗಲಾಡಿಸಲು ಬಸವಾದಿ ಶಿವಶರಣರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಇಂದಿನ ದಿನಮಾನದಲ್ಲಿ ಜಾತಿ ತಾರತಮ್ಯ ಕಡಿಮೆಯಾಗುತ್ತಿದೆ. ಎಲ್ಲರೂ ಕೂಡಾ ಒಗ್ಗಟ್ಟಾಗಿ ಅಣ್ಣ–ತಮ್ಮಂದಿರಂತೆ ಜೀವನ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಬಸವಾದಿ ಶಿವಶರಣರು ರಚಿಸಿದ ವಚನಗಳು ಇಂದಿಗೂ ಕೂಡಾ ಪ್ರಸ್ತುತವಾಗಿವೆ. ಶರಣರ ಆದರ್ಶ, ಸಿದ್ಧಾಂತ ಹಾಗೂ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮೊದಲು ನಾವೆಲ್ಲಾ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಕಡೆಗೆ ಗಮನಹರಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ’ ಎಂದು ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಹೇಳಿದರು.

ರೈತ ಮುಖಂಡ ತೇಜಸ್ವಿ ಪಟೇಲ್, ಅಂಬಿಗರ ಚೌಡಯ್ಯ ಗುರುಪೀಠದ ಉಪಾಧ್ಯಕ್ಷ ಪುಟಗನಹಾಳ್ ಮಂಜುನಾಥ್, ಕೆ.ಎ. ಅನಿಲ್, ಗಂಗಾಮತ ನೌಕರರ ಸಂಘದ ಜಿಲ್ಲಾ ಘಟಕದ ಮಹಾಂತೇಶ್ ಬಿ. ನಿಟ್ಟೂರು, ಕೆ. ಶಿವಲಿಂಗಪ್ಪ ಉಪಸ್ಥಿತರಿದ್ದರು.

ಹಾವೇರಿ ತಾಲ್ಲೂಕು ನರಸೀಪುರ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಿಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.