
ದಾವಣಗೆರೆ: ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ರೈತರಿಗೆ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಗೊಬ್ಬರ, ಬೀಜ ನಿಗಮದ ಗೋದಾಮಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
‘ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಕೃತಕ ಅಭಾವ ಸೃಷ್ಟಿ ಮಾಡದೆ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ಗೊಬ್ಬರ ಪೂರೈಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಭೂಮಿ ಹದ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರ ವಿತರಿಸದೆ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ. ಮೆಕ್ಕೆಜೋಳ ಬಿತ್ತನೆಗೆ ಡಿಎಪಿ ಬೇಕು. ಆದರೆ ಇದು ಸಿಗುತ್ತಿಲ್ಲ’ ಎಂದು ಕೊಗ್ಗನೂರು ಗ್ರಾಮದ ರೈತರು ಶಾಸಕರಿಗೆ ತಿಳಿಸಿದರು.
‘ಒಂದು ಬ್ಯಾಗ್ ಗೊಬ್ಬರಕ್ಕೆ ₹1350 ಎಂಆರ್‌ಪಿ ದರ ಇದೆ. ನಿಗಮದಲ್ಲಿ ತೆಗೆದುಕೊಂಡರೆ ₹1150 ದರವಿದೆ. ನೀವು ಡೀಲರ್‌ಗಳು, ಸೊಸೈಟಿಗಳಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ಪೂರೈಸಿ ಎಂಆರ್‌ಪಿ ದರದಲ್ಲಿ ಮಾರಾಟ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಎಂಆರ್‌ಪಿ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.