ADVERTISEMENT

ದಾವಣಗೆರೆ: ‘ಅಜ್ಮೀರ್‌ ಷಾವಲಿ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:50 IST
Last Updated 31 ಜನವರಿ 2026, 6:50 IST
ಬಸವಾಪಟ್ಟಣದ ಬಡಾ ಮಕಾನ್‌ನಲ್ಲಿ ಸೈಯದ್‌ ಅಜ್ಮೀರ್‌ ಷಾವಲಿಯವರ ದರ್ಗಾದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು
ಬಸವಾಪಟ್ಟಣದ ಬಡಾ ಮಕಾನ್‌ನಲ್ಲಿ ಸೈಯದ್‌ ಅಜ್ಮೀರ್‌ ಷಾವಲಿಯವರ ದರ್ಗಾದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು   

ಬಸವಾಪಟ್ಟಣ: ‘ಹಲವು ಶತಮಾನಗಳ ಹಿಂದೆ ರಾಜಾಸ್ಥಾನದ ಅಜ್ಮೀರ್‌ನಿಂದ ಅಪಾರ ಅನುಯಾಯಿಗಳೊಂದಿಗೆ ಬಸವಾಪಟ್ಟಣಕ್ಕೆ ಬಂದು ತಮ್ಮ ತತ್ವ ಬೋಧನೆಗಳಿಂದ ಧಾರ್ಮಿಕ ಸಂಘಟನೆಗೆ ಕಾರಣರಾದ ಮುಸ್ಲಿಂ ಸಂತ ಸೈಯದ್‌ ಅಜ್ಮೀರ್‌ ಷಾವಲಿ ಅವರ ಕೊಡುಗೆ ಅಪಾರ’ ಎಂದು ರಾಜ್ಯ ವಸತಿ ಸಚಿವರ ಆಪ್ತ ಕಾರ್ಯದರ್ಶಿ ಅಮೀರ್‌ ಅಹಮದ್‌ ಹೇಳಿದರು. 

ಇಲ್ಲಿನ ಬಡಾ ಮಕಾನ್‌ನಲ್ಲಿ ಶುಕ್ರವಾರ ನಡೆದ ಮುಸ್ಲಿಂ ಸಂತ ಸೈಯದ್‌ ಅಜ್ಮೀರ್‌ ಷಾವಲಿ ಅವರ ವಾರ್ಷಿಕ ಸಂದಲ್‌ ಉತ್ಸವದಲ್ಲಿ ಮಾತನಾಡಿದರು. 

‘ಪ್ರತಿಯೊಬ್ಬರೂ ಪರಿಶುದ್ಧ ಭಾವನೆಯಿಂದ ಪ್ರಾರ್ಥನೆಯೊಂದಿಗೆ ನಿತ್ಯದ ಕಾಯಕವನ್ನು ಕೈಗೊಂಡು, ಜೀವನ ನಡೆಸಿ ದೇವರ ಪ್ರೀತಿಗೆ ಪಾತ್ರರಾಗಬೇಕು ಎಂದು ಸಂತ ಸೈಯದ್‌ ಅಜ್ಮೀರ್‌ ಷಾ ವಲಿ ಸಾರಿ ಹೇಳಿದ್ದಾರೆ’  ಎಂದು ಹೇಳಿದರು. 

ADVERTISEMENT

ವಸತಿ ಸಚಿವರ ಮತ್ತೊಬ್ಬ ಆಪ್ತ ಕಾರ್ಯದರ್ಶಿ ಮಹ್ಮದ್‌ ಅಯೂಬ್‌ ಮಾತನಾಡಿ, ‘ದೇಶದಲ್ಲಿ ಧರ್ಮ ಬೋಧನೆಯಿಂದ ಶಾಂತಿ ಸ್ಥಾಪನೆ ಮಾಡಿದ ಮಹಾತ್ಮರನ್ನು ಪ್ರತಿದಿನವೂ ಸ್ಮರಿಸುತ್ತಾ, ಅವರ ಸ್ಮರಣೆ ಮಾಡಬೇಕು’ ಎಂದರು. 

ಇಲ್ಲಿನ ಹಾಲಸ್ವಾಮಿಗಳ ಮೂಲ ಮಠದಿಂದ ಶ್ರೀಗಂಧವನ್ನು ಸ್ವೀಕರಿಸಿ ಅಜ್ಮೀರ್‌ ಷಾ ವಲಿಯವರ ದರ್ಗಾಕ್ಕೆ ಅರ್ಪಿಸಲಾಯಿತು. 

ಮುಸ್ಲಿಂ ಸಂತರಿಂದ ಧಾರ್ಮಿಕ ಪೂಜಾ ವಿಧಾನಗಳು ನಡೆದವು. ಮಹ್ಮದ್‌ ಯಾಸೀನ್‌, ಮಹ್ಮದ್‌ ನಿಜಾಂ, ಮಹ್ಮದ್‌ ಅಲಿ, ಪಿ.ಸಮೀಉಲ್ಲಾ ಮತ್ತು ಪಿ.ವಾರಿಸ್‌ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.