ಬಸವಾಪಟ್ಟಣ: ದರ ಕುಸಿತದಿಂದ ಕಂಗಾಲಾಗಿರುವ ಇಲ್ಲಿನ ಟೊಮೆಟೊ ಬೆಳೆಗಾರರು ಹೊಲದಲ್ಲಿರುವ ಟೊಮೆಟೊ ಹಣ್ಣುಗಳನ್ನು ಕೊಯಿಲು ಮಾಡದೆ ಹಾಗೆಯೇ ಬಿಟ್ಟಿದ್ದಾರೆ.
25 ಕೆ.ಜಿ. ತೂಗುವ ಒಂದು ಕ್ರೇಟ್‌ಗೆ ₹250ರಿಂದ ₹300 ಇದ್ದ ಟೊಮೆಟೊ ದರ ಈಗ ₹ 50ಕ್ಕೆ ಇಳಿದಿರುವುದರಿಂದ ಭಾರಿ ನಷ್ಟ ಉಂಟಾಗಿದೆ.
‘ನಾನು ಬೇರೆ ರೈತರ ಹೊಲವನ್ನು ಗುತ್ತಿಗೆ ಪಡೆದು ಒಂದು ಎಕರೆಯಲ್ಲಿ ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದೆ. ಹಣ್ಣು ಕೊಯಿಲಿಗೆ ಬರುವ ವೇಳೆಗೆ ₹50,000 ವೆಚ್ಚವಾಗಿದೆ. ಆದರೆ, ಈಗ ಕೆ.ಜಿ.ಗೆ ಎರಡು ರೂಪಾಯಿ ಸಹ ದೊರೆಯುತ್ತಿಲ್ಲ’ ಎಂದು ಟೊಮೆಟೊ ಬೆಳೆಗಾರ ಪಿ.ಮಹಮದ್‌ಅಲಿ ಅಳಲು ತೋಡಿಕೊಂಡರು.
‘ಮುಂಜಾನೆ 8ರಿಂದ 10ರವರೆಗೆ ಟೊಮೆಟೊ ಹಣ್ಣುಗಳ ಕೊಯಿಲಿಗೆ ಬರುವ ಮಹಿಳಾ ಕಾರ್ಮಿಕರಿಗೆ ₹250 ಕೂಲಿ ಇದ್ದು, ಈಗಿನ ದರದಲ್ಲಿ ಕೊಯಿಲಿನ ಹಣವೂ ಬಾರದ ಸ್ಥಿತಿ ಇದೆ. ಆದ್ದರಿಂದ ಫಸಲನ್ನು ಕೀಳದೆ ಹಾಗೆಯೇ ಬಿಟ್ಟಿದ್ದೇನೆ’ ಎನ್ನುತ್ತಾರೆ ಮಹಮದ್‌ಅಲಿ.
‘ನಿತ್ಯ ಬಳಸುವ ತರಕಾರಿಯಾದ ಟೊಮೆಟೊಗೆ ನಿರಂತರ ಬೇಡಿಕೆ ಇದೆ. ಎಲ್ಲ ರೈತರೂ ಒಮ್ಮೆಲೆ ಅತಿ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆದಿರುವುದರಿಂದ ಪೂರೈಕೆ ಹೆಚ್ಚಾಗಿ ದರ ಕಡಿಮೆಯಾಗಿದೆ. ಕೊಯಿಲು ಮಾಡಿದ ಕೂಲಿಯೂ ದೊರೆಯದೇ ಫಸಲನ್ನು ಹಾಗೆಯೇ ಬಿಟ್ಟಿದ್ದೇವೆ. ಸಾಕಷ್ಟು ಬಂಡವಾಳ ತೊಡಗಿಸಿ ಬೆಳೆದ ರೈತರಿಗೆ ಈಗ ಬಹಳ ನಷ್ಟವಾಗಿದೆ’ ಎನ್ನುತ್ತಾರೆ ರೈತ ರಾಜಾನಾಯ್ಕ.
‘ಕೆಲವು ಬಾರಿ ಅತಿ ಹೆಚ್ಚು ಪ್ರದೇಶದಲ್ಲಿ, ಕೆಲವು ಬಾರಿ ಕಡಿಮೆ ಪ್ರದೇಶದಲ್ಲಿ ಟೊಮೆಟೊ ಬೆಳೆಯುವುದರಿಂದ ಈ ರೀತಿ ಬೆಲೆಯಲ್ಲಿ ವ್ಯತ್ಯಾಸವಾಗಿ ರೈತರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಟೊಮೆಟೊ ಬೆಳೆಗಾರರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎನ್ನುತ್ತಾರೆ ರೈತ ಎಚ್.ನಸ್ರುಲ್ಲಾ
‘ಸೋಮವಾರದ ಸಂತೆಗೆ ಭಾರಿ ಪ್ರಮಾಣದಲ್ಲಿ ಟೊಮೆಟೊ ಮಾರಾಟಕ್ಕೆ ಬಂದಿದ್ದು, ಸಣ್ಣ ಗಾತ್ರದ ಟೊಮೆಟೊವನ್ನು ಕೆ.ಜಿ.ಗೆ ₹ 5ರಂತೆ, ದೊಡ್ಡ ಗಾತ್ರದ ಹಣ್ಣನ್ನು ಕೆ.ಜಿ.ಗೆ ₹8ರಿಂದ ₹10ಕ್ಕೆ ಮಾರುತ್ತಿದ್ದೇವೆ’ ಎಂದು ವ್ಯಾಪಾರಿಗಳಾದ ಶೌಕತ್‌ಅಲಿ ಮತ್ತು ನಜೀರ್ ಅಹಮದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.