ADVERTISEMENT

ಬೆಳಗುತ್ತಿ | ‘ಮಹಿಳೆಯರು ಸ್ವ–ಉದ್ಯೋಗಕ್ಕೆ ಒತ್ತು ನೀಡಿ’

ಬೆಳಗುತ್ತಿಯಲ್ಲಿ ವಿವಿಧ ಕಟ್ಟಡ ಉದ್ಘಾಟಿಸಿದ ಸಂಸದೆ ಪ್ರಭಾ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:46 IST
Last Updated 18 ಜುಲೈ 2025, 6:46 IST
ನ್ಯಾಮತಿ ತಾಲ್ಲೂಕು ಬೆಳಗುತ್ತಿಯಲ್ಲಿ ಗುರುವಾರ ವಿವಿಧ ಕಟ್ಟಡಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶಾಸಕ ಡಿ.ಜಿ.ಶಾಂತನಗೌಡ ಭಾಗವಹಿಸಿದ್ದರು
ನ್ಯಾಮತಿ ತಾಲ್ಲೂಕು ಬೆಳಗುತ್ತಿಯಲ್ಲಿ ಗುರುವಾರ ವಿವಿಧ ಕಟ್ಟಡಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶಾಸಕ ಡಿ.ಜಿ.ಶಾಂತನಗೌಡ ಭಾಗವಹಿಸಿದ್ದರು   

ಬೆಳಗುತ್ತಿ (ಮಲ್ಲಿಗೇನಹಳ್ಳಿ): ‘ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸಾಧನೆ ಮಾಡುವ ಮೂಲಕ ಬೇರೆಯವರಿಗೆ ಮಾದರಿ ಆಗಬೇಕು’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ ನೀಡಿದರು.

ನ್ಯಾಮತಿ ತಾಲ್ಲೂಕು ಬೆಳಗುತ್ತಿಯಲ್ಲಿ ಗುರುವಾರ ಎನ್.ಆರ್.ಎಲ್.ಎಂ. ಭವನ, ಸ್ವಚ್ಛ ಸಂಕೀರ್ಣ ಹಾಗೂ ಮಲ್ಲಿಗೇನಹಳ್ಳಿ ಶಾಲಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ 94 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಬಲೀಕರಣಕ್ಕೆ ಒತ್ತು ನೀಡುವ ಕೆಲಸ ಸರ್ಕಾರ ಮಾಡುತ್ತಿದೆ’ ಎಂದರು.

ADVERTISEMENT

‘ಗ್ರಾಮಗಳಲ್ಲಿ ಸಮುದಾಯ ಭವನ ಹಾಗೂ ದೇವಸ್ಥಾನ ನಿರ್ಮಾಣಕ್ಕಿಂತ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು, ಶಾಲೆಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಮಕ್ಕಳ ಓದಿಗೆ ಅನುಕೂಲವಾಗುತ್ತದೆ. ಶೈಕ್ಷಣಿಕ ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ. ಬೆಳಗುತ್ತಿ ಬಸ್ ನಿಲ್ದಾಣದ ಸಮೀಪ ಶೌಚಾಲಯ ನಿರ್ಮಾಣಕ್ಕೆ ಹಾಗೂ ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ವಾಹನವನ್ನು ಒದಗಿಸಲು ಕ್ರಮ ಕೈಗೊಳ್ಳುವ’ ಭರವಸೆ ನೀಡಿದರು.

ಶಾಲಾ ಕೊಠಡಿ ಮತ್ತು ಸಿಸಿ ರಸ್ತೆಗಳ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ‘ಶಾಸಕರ ಅನುದಾನದಲ್ಲಿ ಬೆಳಗುತ್ತಿಯಲ್ಲಿ ₹ 40 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಕ್ಷತ್ರಿಯ ಸಮುದಾಯಕ್ಕೆ ₹ 10 ಲಕ್ಷ, ಅರಸು ಸಮುದಾಯ ಭವನಕ್ಕೆ ₹10 ಲಕ್ಷ ಹಾಗೂ ಮಲ್ಲಿಗೇನಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ₹ 10 ಲಕ್ಷ ಸೇರಿದಂತೆ ಒಟ್ಟು ₹ 70 ಲಕ್ಷ ಅನುದಾನವನ್ನು ಅವಳಿ ಗ್ರಾಮದ ಅಭಿವೃದ್ಧಿಗೆ ನೀಡಿದ್ದೇನೆ’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಟಿ.ನಾಗರತ್ನಾ ರಂಗನಾಥ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಲ್.ನಾಗರಾಜ ಮತ್ತು ಸದಸ್ಯರು, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡರಾದ ನುಚ್ಚಿನ ವಾಗೀಶ, ವನಜಾಕ್ಷಮ್ಮ, ಎಚ್.ಎ.ಉಮಾಪತಿ, ಆರ್.ನಾಗಪ್ಪ, ಕುಬೇರಪ್ಪ, ತಾ.ಪಂ. ಇಒ ಎಚ್.ವಿ.ರಾಘವೇಂದ್ರ, ಪಿಡಿಒ ಎಸ್. ಮಂಜುನಾಥಚಾರಿ ಉಪಸ್ಥಿತರಿದ್ದರು.

ಮುಂದಿನ ನಾಲ್ಕು ತಿಂಗಳಲ್ಲಿ ಬಹುಗ್ರಾಮ ಯೋಜನೆ ಅಡಿಯಲ್ಲಿ ಈ ಭಾಗದ 57 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗುವುದು
  ಡಿ.ಜಿ.ಶಾಂತನಗೌಡ ಶಾಸಕ 

ಮಹಿಳೆಯರ ಕಾರ್ಯ ಶ್ಲಾಘನೆ ರಾಜ್ಯ ಸರ್ಕಾರ ರೂಪಿಸಿದ ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆಯಿಂದ ಮಹಿಳೆಯರು ಸ್ವಯಂ ಉದ್ಯೋಗಿಗಳಾಗುವುದರ ಜೊತೆಗೆ ಸಾಮಾಜಿಕ ಕೆಲಸಗಳಿಗೆ ಹಣವನ್ನು ಬಳಸಿದ್ದಾರೆ. ಮಲ್ಲಿಗೇನಹಳ್ಳಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ 450 ಕುಟುಂಬಗಳು ತಮ್ಮ ‘ಗೃಹಲಕ್ಷ್ಮಿ’ ಹಣವನ್ನು ಸಂಗ್ರಹಿಸಿ ₹ 9 ಲಕ್ಷ  ದೇಣಿಗೆ ನೀಡಿದ್ದನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಶ್ಲಾಘನೀಯ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.