ADVERTISEMENT

ದಾವಣಗೆರೆಯಲ್ಲಿ ಇಂದು ಕೋವಿಡ್‌ನಿಂದ ಇಬ್ಬರು ಸಾವು

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ವ್ಯಕ್ತಿ, ದಾವಣಗೆರೆ ಆಜಾದ್‌ನಗರದ ವೃದ್ಧ ಮೃತಪಟ್ಟವರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:31 IST
Last Updated 5 ಜುಲೈ 2020, 15:31 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಬಳ್ಳಾರಿ ಜಿಲ್ಲೆಯಿಂದ ಬಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮತ್ತು ಸ್ಥಳೀಯ ಆಜಾದ್‌ನಗರದ ವೃದ್ಧ ಮೃತಪಟ್ಟಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ.

ಹೃದಯದ ಸಮಸ್ಯೆ ಇದ್ದ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 53 ವರ್ಷದ ವ್ಯಕ್ತಿ (ಪಿ.21680) ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಕೊಟ್ಟೂರಿಗೆ ಮರಳಿದ್ದರು. ಬಳಿಕ ಮತ್ತೆ ಅನಾರೋಗ್ಯ ಉಂಟಾದಾಗ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಜೂನ್‌ 29ರಂದು ದಾಖಲಿಸಲಾಗಿತ್ತು. ಅವರು ಜೂನ್‌ 30ರಂದು ಮೃತಪಟ್ಟಿದ್ದರು. ಬಳಿಕ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಜಾದ್‌ನಗರದ 68 ವರ್ಷದ ವೃದ್ಧ (ಪಿ.18102) ಶನಿವಾರ ಮೃತಪಟ್ಟಿದ್ದಾರೆ. ಹೊನ್ನಾಳಿ ತಾಲ್ಲೂಕಿನ ತಮ್ಮ ಸಂಬಂಧಿಕರ ಮನೆಗೆ ಅವರು ಈಚೆಗೆ ತೆರಳಿದ್ದರು. ವಾಪಸ್ಸಾಗುವಾಗ ಮಳೆಗೆ ನೆನೆದಿದ್ದರು. ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಖಾಸಗಿ ವೈದ್ಯರಲ್ಲಿ ಔಷಧ ಪಡೆದಿದ್ದರು. ಕೊರೊನಾ ಪರೀಕ್ಷೆ ಮಾಡಿಸುವಂತೆ ಆ ವೈದ್ಯರು ಸಲಹೆ ನೀಡಿದ್ದರು. ಅಲ್ಲದೇ ಆರೋಗ್ಯವಾಗಿ ದುರ್ಬಲವಾಗಿರುವವರನ್ನು ಪತ್ತೆ ಹಚ್ಚುವ ಸಮೀಕ್ಷಾ ತಂಡ ಕೂಡ ಅವರನ್ನು ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು. ಜುಲೈ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ADVERTISEMENT

ಜಿಲ್ಲೆಯಲ್ಲಿ ಈವರೆಗೆ 9 ಮಂದಿ ಮೃತಪಟ್ಟಿದ್ದರು. ಇದೀಗ ಈ ಸಂಖ್ಯೆ 11ಕ್ಕೇರಿದೆ. ಅಲ್ಲದೇ ಚನ್ನಗಿರಿಯ ಒಬ್ಬರು ಶಿವಮೊಗ್ಗದಲ್ಲಿ, ಇನ್ನೊಬ್ಬರು ಚಿಕ್ಕಮಗಳೂರಿನಲ್ಲಿ ಮೃತಪಟ್ಟಿದ್ದರು.

11 ಪ್ರಕರಣ ಪತ್ತೆ

ಮೃತಪಟ್ಟಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 53 ವರ್ಷದ ವ್ಯಕ್ತಿ (21680), ಒಬ್ಬ ಬಾಲಕಿ, ಒಬ್ಬ ಬಾಲಕ ಸೇರಿ 11 ಮಂದಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿದೆ.

ನಿಟುವಳ್ಳಿ ಕೊಟ್ಟೂರೇಶ್ವರ ಬಡಾವಣೆಯ 25 ವರ್ಷದ ಯುವಕ (ಪಿ.21681), ಹರಿಹರ ಗೌಸಿಯಾ ಕಾಲೊನಿಯ 30 ವರ್ಷದ ವ್ಯಕ್ತಿಗೆ (ಪಿ.21682) ಶೀತಜ್ವರ ಎಂದು ಗುರುತಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ 39 ವರ್ಷದ ಮಹಿಳೆಗೆ (ಪಿ.21684) 19 ವರ್ಷದ ಬಾಲಕನ (ಪಿ.16672) ಸಂಪರ್ಕದಿಂದ ಸೋಂಕು ಬಂದಿದೆ.

ದಾವಣಗೆರೆ ಬೀಡಿ ಲೇಔಟ್‌ನ 48 ವರ್ಷದ ವ್ಯಕ್ತಿ (ಪಿ.21683) ಮತ್ತು 26 ವರ್ಷದ ಯುವತಿಗೆ (ಪಿ.21685) ಬೀಡಿ ಲೇಔಟ್‌ನ 15 ವರ್ಷದ ಬಾಲಕನಿಂದ (ಪಿ.10389) ಸೋಂಕು ತಗುಲಿದೆ.

ತೆಲಂಗಾಣದಿಂದ ಎಸ್‌ಎಸ್‌ ಲೇಔಟ್‌ನ ಕುಟುಂಬ ಹಿಂತಿರುಗಿದ್ದು, ಕುಟುಂಬದ ನಾಲ್ವರಿಗೆ ಕೊರೊನಾ ಬಂದಿದೆ. 38 ಮತ್ತು 32 ವರ್ಷದ ಪುರುಷರು (ಪಿ.21687, ಪಿ.21688) ಐದು ವರ್ಷದ ಬಾಲಕಿ (ಪಿ.21689), ಏಳು ವರ್ಷದ ಬಾಲಕ (ಪಿ.21690) ಸೋಂಕು ಬಂದವರು.

ಈ ಮನೆಯವರ (ಪಿ.21687) ಸಂಪರ್ಕದಿಂದ ಎಸ್ಎಸ್‌ ಲೇಔಟ್‌ನ 32 ವರ್ಷದ ಮಹಿಳೆಗೂ (ಪಿ.21686) ಸೋಂಕು ಬಂದಿದೆ.

300 ದಾಟಿದ ಗುಣಮುಖರಾದವರ ಸಂಖ್ಯೆ

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 356ಕ್ಕೇರಿದೆ. ಭಾನುವಾರ ಏಳು ಮಂದಿ ಬಿಡುಗಡೆಗೊಂಡಿದ್ದಾರೆ. ಇಲ್ಲಿವರೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ 301 ಮಂದಿ ಬಿಡುಗಡೆಗೊಂಡಿದ್ದಾರೆ. 11 ಮಂದಿ ಮೃತಪಟ್ಟಿದ್ದಾರೆ. 44 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.