ADVERTISEMENT

ಬೆಳ್ಳೂಡಿ: 110 ವರ್ಷದ ಶಾಲೆಗೆ ಬೇಕು ಕಾಯಕಲ್ಪ

ಕೊರತೆಗಳ ನಡುವೆಯೂ ವಿದ್ಯಾರ್ಥಿಗಳ ಸಂಖ್ಯೆ ಉತ್ತಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 4:49 IST
Last Updated 4 ಫೆಬ್ರುವರಿ 2023, 4:49 IST
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಶತಮಾನ ಕಂಡ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಶತಮಾನ ಕಂಡ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.   

ಹರಿಹರ: ಶತಮಾನ ಕಂಡ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಹೆಮ್ಮೆ ಎನಿಸಿದರೂ ಹಲವು ಕೊರತೆಗಳಿಂದ ನಲುಗುತ್ತಿದೆ.

1913ರಲ್ಲಿ ಅಂದರೆ, ಬರೋಬ್ಬರಿ 110 ವರ್ಷಗಳ ಹಿಂದೆ ಈ ಶಾಲೆ ಸ್ಥಾಪನೆಯಾಗಿದೆ. ತಾಲ್ಲೂಕಿನ ಗುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂತರ ಹೆಚ್ಚು ವಿದ್ಯಾರ್ಥಿಗಳಿರುವ ಖ್ಯಾತಿ ಈ ಶಾಲೆಗಿದೆ.

2002ರಲ್ಲಿ 800 ವಿದ್ಯಾರ್ಥಿಗಳಿದ್ದಾಗ ಆಗಿನ ಜಿಲ್ಲಾಧಿಕಾರಿ ಕೆ. ಶಿವರಾಂ ಅವರು ಜಿಲ್ಲಾಡಳಿತದಿಂದ ಶಾಲೆಗೆ ಬೆಳ್ಳಿ ಪದಕ ನೀಡಿದ್ದರು. ಇದೇ ಗ್ರಾಮದ ವಿವಿಧ ಸ್ಥಳಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಆರಂಭದಿಂದಾಗಿ ಈಗ 144 ವಿದ್ಯಾರ್ಥಿನಿಯರು ಸೇರಿ ಒಟ್ಟು 285 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ADVERTISEMENT

2016ರಲ್ಲಿ ಶಾಲಾ ಆವರಣದಲ್ಲಿ ಆಗಿನ ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಚ್. ಬಸವರಾಜ್ ಅವರ ಮುತುವರ್ಜಿಯಿಂದ ನಿರ್ಮಿಸಿದ ಚರಕದಿಂದ ನೂಲುತ್ತಿರುವ ಗಾಂಧೀಜಿಯವರ ಮೂರ್ತಿ ಜನಮನ ಸೆಳೆಯುತ್ತಿದೆ.

ಗ್ರಾಮದ ಮಧ್ಯ ಭಾಗದಲ್ಲಿ 37 ಗುಂಟೆ ಜಾಗದಲ್ಲಿರುವ ಶಾಲಾ ಆವರಣದಲ್ಲಿ 6 ಆರ್‌ಸಿಸಿ, 6 ಕೆಂಪು ಹೆಂಚಿನ ಚಾವಣಿಯ ಕೊಠಡಿಗಳಿವೆ. ಆವರಣದಲ್ಲಿ ಗಿಡ–ಮರಗಳಿಂದ ತಕ್ಕ ಮಟ್ಟಿಗೆ ಹಸಿರಿದೆ. ಸುತ್ತಲೂ ಕಾಂಪೌಂಡ್ ಇದೆ. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯವಿದೆ. ಮಾಜಿ ಶಾಸಕ ದಿ.ಬಿ.ಜಿ. ಕೊಟ್ರಪ್ಪ, ಮಾಜಿ ಸಚಿವ ದಿ.ಎಚ್. ಶಿವಪ್ಪ ಸೇರಿದಂತೆ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಜಿಲ್ಲೆ ಮತ್ತು ನಾಡಿನಲ್ಲಿ
ಗುರುತಿಸಿಕೊಂಡಿದ್ದರು.

ಕೊರತೆಗಳು: ಶಾಲೆಗೆ ಇಷ್ಟೆಲ್ಲ ಹಿರಿಮೆ, ಹೆಮ್ಮೆಗಳು ಇದ್ದರೂ ಸಮಸ್ಯೆ, ಕೊರತೆಗಳೂ ಸಾಕಷ್ಟಿವೆ. ‘ಭೂದಾನ ಚಳವಳಿಯಲ್ಲಿ ವಿನೋಬಾ ಭಾವೆ ಅವರ ಪ್ರಭಾವದಿಂದ ಈ ಶಾಲೆಗೆ ಗ್ರಾಮದ ಸುತ್ತಮುತ್ತ ವಿವಿಧ ಸರ್ವೆ ನಂಬರ್‌ಗಳಲ್ಲಿ 24 ದಾನಿಗಳು ನೀಡಿದ ಒಟ್ಟು 11 ಎಕರೆ ಜಮೀನಿದೆ. ಆದರೆ, ಅದನ್ನು ಉಳುಮೆ ಮಾಡುತ್ತಿರುವವರು ಶಾಲೆಗೆ ಉತ್ಪನ್ನದ ಪಾಲು ನೀಡುತ್ತಿಲ್ಲ. ಜಮೀನಿನ ಲಾಭಾಂಶ ದೊರಕಿದರೆ ಶಾಲೆಯಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಲೇಶಪ್ಪ ತಿಳಿಸಿದರು.

ಶಾಲೆಯ ಹಿಂಭಾಗದ ಕಾಂಪೌಂಡ್ ಕಿರಿದಾಗಿರುವುದರಿಂದ ಶಾಲಾ ಅವಧಿಯ ನಂತರದ ಸಮಯದಲ್ಲಿ ಕಿಡಿಗೇಡಿಗಳ ಅಡ್ಡಾ ಆಗುತ್ತಿದೆ. ಕತ್ತಲಾದ ಕೂಡಲೇ ಶಾಲೆ ಮದ್ಯ ಸೇವಕರ ನೆಚ್ಚಿನ ತಾಣವಾಗುತ್ತದೆ. ಇಷ್ಟೇ ಅಲ್ಲ. ಇಲ್ಲಿ ಅಳವಡಿಸಿರುವ ಪೈಪ್‌ಲೈನ್ ಕಿತ್ತುಕೊಂಡು ಹೋಗಿರುವ ಉದಾಹರಣೆಗಳೂ ಇವೆ.

ತಕ್ಕ ಮಟ್ಟಿಗೆ ಶೌಚಾಲಯವೇನೋ ಇದೆ. ಆದರೆ ನೀರಿನ ಸಂಪರ್ಕ ಇಲ್ಲ. ಹಾಕುವ ಪೈಪ್‌ಲೈನ್‌ ಅನ್ನು ಕಿಡಿಗೇಡಿಗಳು ಕದ್ದೊಯ್ಯುತ್ತಾರೆ. ಹೀಗಾಗಿ ಕೊಡ ಮತ್ತು ಬಕೆಟ್‌ಗಳಿಂದ ಶೌಚಾಲಯಕ್ಕೆ ನೀರು ಹಾಕಬೇಕಿದೆ. ಸಾಕಷ್ಟು ನೀರಿಲ್ಲದೇ, ಶೌಚಾಲಯ ದುರ್ವಾಸನೆ ಬೀರುತ್ತಿದ್ದು ತರಗತಿಗಳಲ್ಲಿ ಪಾಠ ಮಾಡಲೂ– ಕೇಳಲೂ ಅಡ್ಡಿಯುಂಟು ಮಾಡಿದೆ.

ಕೊಠಡಿಗಳು ಬೇಕು: ಶಾಲೆಯಲ್ಲಿರುವ 6 ಕೆಂಪು ಹೆಂಚಿನ ಚಾವಣಿಯಿರುವ ತರಗತಿಗಳನ್ನು ಆಗಾಗ ದುರಸ್ತಿ ಮಾಡಿಸಬೇಕಿದೆ. ಹಳತಾದ ಈ ಕೊಠಡಿಗಳ ಬದಲು ಆರ್‌ಸಿಸಿ ಕಟ್ಟಡದ ಕೊಠಡಿಗಳನ್ನು ನಿರ್ಮಿಸಬೇಕಿದೆ.

ಅಪೂರ್ಣ ಸ್ಮಾರ್ಟ್ ಕ್ಲಾಸ್: ಮೂರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಸ್ಮಾರ್ಟ್ ಕ್ಲಾಸ್‌ಗೆಂದು ಸಾಮಗ್ರಿಗಳನ್ನು ಪೂರೈಸಲಾಗಿದ್ದರೂ ಅದು ಅಪೂರ್ಣವಾಗಿದೆ. ಉಳಿದ ಉಪಕರಣಗಳನ್ನು ಪೂರೈಸಿದರೆ ಮಾತ್ರ ಸ್ಮಾರ್ಟ್ ಕ್ಲಾಸ್ ಆರಂಭಿಸಬಹುದು.

**

ವಿಜ್ಞಾನದ ಸಮರ್ಪಕ ಬೋಧನೆಗಾಗಿ ಪ್ರಯೋಗಾಲಯ ಬೇಕು. ಕಿರಿದಾಗಿರುವ ಶಾಲೆಯ ಹಿಂಬದಿಯಲ್ಲಿನ ಕಾಂಪೌಂಡ್‌ ಅನ್ನು ಎತ್ತರಿಸಬೇಕಿದೆ. ಗ್ರಂಥಾಲಯ, ಕೈತೋಟದ ಅಗತ್ಯವಿದೆ

– ಎ.ಕೆ. ಮಂಜಪ್ಪ, ಮುಖ್ಯ ಶಿಕ್ಷಕ

**

ಸೌಲಭ್ಯ ಒದಗಿಸಿ

ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮ ವಾಗಿದೆ. ಶೌಚಾಲಯಕ್ಕೆ ಪೈಪ್‌ಲೈನ್ ಹಾಕಿಸಬೇಕು. ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ನಿರ್ಮಿಸಬೇಕಿದೆ. ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ.

– ಬಾಗ್ಲಾರ ಕೃಷ್ಣಮೂರ್ತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.