ADVERTISEMENT

ದಾವಣಗೆರೆ: ಭದ್ರಾ ಅಚ್ಚುಕಟ್ಟು ರೈತರ ಸಭೆ ನಾಳೆ

ಬಲದಂಡೆ ನಾಲೆ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ: ಕಾಂಗ್ರೆಸ್‌ ಶಾಸಕರ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:43 IST
Last Updated 8 ಆಗಸ್ಟ್ 2025, 4:43 IST
ಡಿ.ಜಿ. ಶಾಂತನಗೌಡ
ಡಿ.ಜಿ. ಶಾಂತನಗೌಡ   

ದಾವಣಗೆರೆ: ಭದ್ರಾ ಬಲದಂಡೆ ನಾಲೆಯಿಂದ ತರೀಕೆರೆ ಹಾಗೂ ಹೊಸದುರ್ಗ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಆ.9ರಂದು ಕರೆಯಲಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.

‘ಕುಡಿಯುವ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುವ ಕಾರ್ಯದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ನಾಯಕರು ತೊಡಗಿದ್ದಾರೆ. ಸುಳ್ಳು ಮಾಹಿತಿ ನೀಡಿ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿಯ ಅಪಪ್ರಚಾರದಿಂದ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ. ಕಾಂಗ್ರೆಸ್‌ ನಾಯಕರ ತಾಳ್ಮೆಯನ್ನು ಕೆಣಕಲಾಗಿದೆ. ಇದು ಹೀಗೆ ಮುಂದುವರಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಮಾಯಕೊಂಡ, ಹೊನ್ನಾಳಿ ಹಾಗೂ ಚನ್ನಗಿರಿ ಕ್ಷೇತ್ರಗಳ ರೈತರ ಸಭೆ ಕರೆಯಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಹೊಸದುರ್ಗ ಮತ್ತು ತರೀಕೆರೆ ತಾಲ್ಲೂಕುಗಳಿಗೆ ನೀರು ಕೊಡುವ ಯೋಜನೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ನಾಲೆಯಲ್ಲಿ ನಡೆದ ಕಾಮಗಾರಿಯನ್ನು ವೀಕ್ಷಿಸಿ ವಾಸ್ತವ ಅರಿತುಕೊಳ್ಳಲಾಗಿದೆ. ಬಿಜೆಪಿ ನಾಯಕರ ಅಪಪ್ರಚಾರಕ್ಕೆ ಉತ್ತರ ನೀಡುವ ಕಾಲ ಒದಗಿಬಂದಿದೆ. ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಭೆಗೆ ಹಾಜರಾಗಬೇಕು’ ಎಂದು ಮನವಿ ಮಾಡಿದರು.

ಭದ್ರಾ ಜಲಾಶಯದಿಂದ ನೀರು ಪೂರೈಕೆ ಮಾಡುವ ಯೋಜನೆಗೆ ಯಾವ ಸರ್ಕಾರ ಆದೇಶ ನೀಡಿದೆ ಎಂಬುದನ್ನು ಜನರ ಮುಂದೆ ಇಡಲಿದ್ದೇವೆ. ರೈತರಿಗೆ ವಾಸ್ತವಾಂಶ ಪರಿಚಯ ಮಾಡಲಿದ್ದೇವೆ
ಕೆ.ಎಸ್‌.ಬಸವಂತಪ್ಪ ಶಾಸಕ ಮಾಯಕೊಂಡ
ಚನ್ನಗಿರಿ ವಿಧಾನಸಭೆ ಕ್ಷೇತ್ರದಲ್ಲಿ 84 ಕೆರೆಗಳು ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿವೆ. ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿರುವ ಕೆರೆ ಹೊರತುಪಡಿಸಿ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ
ಬಸವರಾಜು ವಿ. ಶಿವಗಂಗಾ ಶಾಸಕ ಚನ್ನಗಿರಿ

‘ರಸ್ತೆಗೆ ಶೇ 30 ಅನುದಾನ’

‘ರಾಜ್ಯ ಸರ್ಕಾರ ಕ್ಷೇತ್ರಕ್ಕೆ ನೀಡಿದ ₹ 50 ಕೋಟಿ ಅನುದಾನದಲ್ಲಿ ಶೇ 30ರಷ್ಟನ್ನು ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು’ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು. ‘ರಾಜ್ಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆ ಏರಿದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಲಾರಿ ಸೇರಿದಂತೆ ಇತರ ಸರಕು ಸಾಗಣೆ ವಾಹನಗಳು ನಿಗದಿಗಿಂತ ಹೆಚ್ಚು ತೂಕ ಹೊತ್ತು ಸಾಗುತ್ತಿವೆ. ಓವರ್‌ಲೋಡ್ ಕಾರಣಕ್ಕೆ ರಸ್ತೆಗಳು ಹಾಳಾಗುತ್ತಿವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.