ದಾವಣಗೆರೆ: ಜಿಲ್ಲೆಯ ರೈತರ ಬದುಕಿಗೆ ಬಹುದೊಡ್ಡ ಆಸರೆಯಾಗಿರುವುದು ಭದ್ರೆ. ಆದರೆ ಜಲಾಶಯದಿಂದ ನೀರು ಹರಿಸಲು ನಿರ್ಮಿಸಿರುವ ನಾಲೆಗಳು ನಿರ್ವಹಣೆ ಇಲ್ಲದೇ ಸೊರಗಿವೆ. 1965ರಲ್ಲಿ ನಾಲೆಗಳಲ್ಲಿ ನೀರು ಹರಿಯಲು ಆರಂಭವಾದ ಬಳಿಕ ಈ 60 ವರ್ಷಗಳಲ್ಲಿ ಒಮ್ಮೆ ಮಾತ್ರ ಅವುಗಳ ಆಧುನೀಕರಣ ಮಾಡಿದ್ದನ್ನು ಹೊರತುಪಡಿಸಿದರೆ, ಅಲ್ಲಿಂದ ಈವರೆಗೆ ಮತ್ತೆ ದುರಸ್ತಿಯ ಮಾತೇ ಇಲ್ಲ.
2007ರಲ್ಲಿ ಅಂದಾಜು ₹900 ಕೋಟಿ ವೆಚ್ಚದಲ್ಲಿ ಮೊದಲ ಬಾರಿ ಆಧುನೀಕರಣ ನಡೆದಿತ್ತು. ಅಲ್ಲಿಂದ ಈ 17 ವರ್ಷಗಳ ಅವಧಿಯಲ್ಲಿ ಭದ್ರಾ ವ್ಯಾಪ್ತಿಯಲ್ಲಿ ಯಾವ ಕಾಲುವೆಗಳನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸಿಲ್ಲ. ದುರಸ್ತಿ ಮಾಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುವುದು ಮುಂದುವರಿದೇ ಇದೆ. ಆದರೆ ಅನುದಾನ ಇಲ್ಲ ಎಂಬ ಸಿದ್ಧ ನೆಪವನ್ನು ಅಧಿಕಾರಿಗಳು ಮುಂದಿಡುತ್ತಾರೆ. ಹೀಗಾಗಿ ನಾಲೆಗಳ ನಿರ್ವಹಣೆ ಎಂಬುದು ಈ ಭಾಗದ ಬಹುಚರ್ಚಿತ ವಿಷಯವಾಗಿದೆ.
ಮುಖ್ಯನಾಲೆ, ಉಪನಾಲೆಗಳು, ಡ್ರಾಪ್, ಪೈಪ್ ಔಟ್ಲೆಟ್, ತೂಬು, ಅಕ್ವಾಡಕ್ಟ್ ಹಾಗೂ ಹೊಲಗಾಲುವೆಗಳು ತುರ್ತಾಗಿ ದುರಸ್ತಿಯಾಗಬೇಕಿವೆ. ಎಷ್ಟೋ ಕಡೆಗಳಲ್ಲಿ ನಾಲೆಗಳು ಬಿರುಕುಬಿಟ್ಟು ವರ್ಷಗಳೇ ಕಳೆದಿವೆ. ಪ್ರತೀ ಬಾರಿ ನೀರು ಹರಿಸಿದಾಗಲೂ ನಾಲೆ ತಡೆಗೋಡೆಗಳಲ್ಲಿ ಸೃಷ್ಟಿಯಾಗಿರುವ ಕೊರಕಲುಗಳಲ್ಲಿ ನೀರು ಬಸಿದುಹೋಗುತ್ತದೆ. ಕಾಲುವೆಯ ತಳಭಾಗದ ಬೆಡ್, ಒಳಮಗ್ಗುಲಿನ ಸಿಮೆಂಟ್ ಪದರದ ಲೈನಿಂಗ್ ಕಿತ್ತುಬಂದರೂ, ಪ್ರತೀ ವರ್ಷ ಅದೇ ಕಾಲುವೆಯಲ್ಲಿ ನೀರು ಹರಿಸುವ ಅನಿವಾರ್ಯತೆ ಇದೆ. ರೈತರು ನಿರಂತರವಾಗಿ ಒತ್ತಾಯಿಸುವುದರಲ್ಲಿ ಅರ್ಥವಿದೆ. ಆದರೆ ಸರ್ಕಾರ ಹಣ ನೀಡಿದಿದ್ದರೆ ರಿಪೇರಿ ಮಾಡುವುದು ಹೇಗೆ ಎಂಬುದು ಎಂಜಿನಿಯರ್‌ಗಳು ಮುಂದಿಡುವ ಪ್ರಶ್ನೆ.
ಮಲೇಬೆನ್ನೂರು, ಹರಿಹರ, ಬಸವಾಪಟ್ಟಣ, ಸಾಸ್ವೆಹಳ್ಳಿ ವ್ಯಾಪ್ತಿಯ ಮುಖ್ಯನಾಲೆಯ ಬಹುತೇಕ ಕಡೆಗಳಲ್ಲಿ ಸೈಜುಕಲ್ಲುಗಳು ಹೊರಬಂದಿದ್ದು, ದೊಡ್ಡ ಕಮರಿಗಳು ಸೃಷ್ಟಿಯಾಗಿವೆ. ಇವು ಕಾಮಗಾರಿಯ ಗುಣಮಟ್ಟದ ಕತೆ ಹೇಳುತ್ತವೆ. ಕಾಲುವೆಗೆ ಹೊಂದಿಕೊಂಡು ನಿರ್ಮಿಸಿರುವ ರಸ್ತೆಗಳದ್ದು ಇನ್ನೊಂದು ವ್ಯಥೆ. ಮಲೇಬೆನ್ನೂರು ಸಮೀಪದ ಬೂದಿಹಾಳ್ ಮೂಲಕ ಹರಿಯುವ ಮುಖ್ಯ ಕಾಲುವೆ ಇದಕ್ಕೊಂದು ನಿದರ್ಶನ. ಮುಖ್ಯ ನಾಲೆಯ ಜೊತೆಗೆ ಅದಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ರಸ್ತೆಯೂ ಶಿಥಿಲವಾಗಿದೆ. ರಸ್ತೆಗೆ ಹಾಕಿರುವ ಮಣ್ಣು ನೀರಿನ ರಭಸಕ್ಕೆ ಚದುರಿ, ಕಾಲುವೆಯನ್ನು ಸೇರುತ್ತಿದೆ. ಪ್ರತೀ ವರ್ಷ ಹೀಗೆ ಇಡೀ ರಸ್ತೆಯು ನಾಲೆಯ ನೀರಿನಲ್ಲಿ ವಿಲೀನವಾಗುತ್ತಿರುವುದರಿಂದ ಹೂಳಿನ ಪ್ರಮಾಣ ಹೆಚ್ಚುವುದಲ್ಲದೇ, ಸಂಪರ್ಕಕ್ಕೆ ರಸ್ತೆಯೂ ಇಲ್ಲದಂತಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
‘ನೀರಿನ ರಭಸ ಹಾಗೂ ಬಿರುಬೇಸಿಗೆ ಮೊದಲಾದ ನೈಸರ್ಗಿಕ ಕಾರಣಗಳ ಜೊತೆಗೆ ಮಾನವ ನಿರ್ಮಿತ ತಪ್ಪುಗಳಿಂದಲೂ ನಾಲೆಗಳು ದುಃಸ್ಥಿತಿಗೆ ತಲುಪುತ್ತಿವೆ. ಪೈಪ್‌ಲೈನ್ ಹಾಕಿ ಜಮೀನಿಗೆ ನೀರು ಹರಿಸಿಕೊಳ್ಳುವ ಭರದಲ್ಲಿ ಕೆಲವರು ನಾಲೆಯ ರಚನೆಯನ್ನು ಅಸ್ಥಿರಗೊಳಿಸುವ ಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ’ ಎಂದು ದೂರುತ್ತಾರೆ ರೈತ ಫಾಲಾಕ್ಷಪ್ಪ.
ನೀರಿನ ರಭಸವನ್ನು ತಾಳಿಕೊಳ್ಳುವಂತೆ ಮುಖ್ಯನಾಲೆಗಳನ್ನು ನಿರ್ಮಿಸಿದ್ದರೂ ನಿಗದಿತ ಸಮಯಕ್ಕೆ ಅವುಗಳನ್ನು ಇನ್ನಷ್ಟು ಸದೃಢಗೊಳಿಸದಿದ್ದರೆ, ಅವು ಒಡೆಯುವ ಅಥವಾ ನಿಧಾನವಾಗಿ ಕಿತ್ತುಬರುವ ಅಪಾಯ ಇದ್ದೇ ಇದೆ. ನ್ಯಾಮತಿ ಸಮೀಪ ತುಂಗಾ ಮೇಲ್ದಂಡೆ ನಾಲೆ ಈಚೆಗೆ ಒಡೆದಿದ್ದರಿಂದ ಅಂದಾಜು 300 ಎಕರೆಯಷ್ಟು ಜಮೀನು ಜಲಾವೃತವಾಗಿತ್ತು. ಭದ್ರಾ ವ್ಯಾಪ್ತಿಯಲ್ಲಿ ಈಚಿನ ದಿನಗಳಲ್ಲಿ ಯಾವ ಕಾಲುವೆಗಳನ್ನೂ ದುರಸ್ತಿ ಮಾಡಿಲ್ಲ. ಇಂತಹ ಘಟನೆಯಿಂದ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ರೈತರ ವರ್ಷದ ಶ್ರಮ ವ್ಯರ್ಥವಾಗುತ್ತದೆ ಎನ್ನುತ್ತಾರೆ ಸಂಕ್ಲೀಪುರದ ರೈತ ಚಂದ್ರು.
ಸರಿಸುಮಾರು 17 ವರ್ಷಗಳಿಂದ ಭದ್ರಾ ನಾಲೆಗಳ ದುರಸ್ತಿಗೆ ಸರ್ಕಾರ ಅನುದಾನ ನೀಡಿಲ್ಲ ಎಂದು ರೈತರು ಆರೋಪಿಸುತ್ತಾರೆ. ನಾಲೆಗಳಲ್ಲಿ ಬೆಳೆದಿರುವ ಜಂಗಲ್ ತೆರವು ಹಾಗೂ ಹೂಳು ತೆರವಿಗೆ ಒಂದಿಷ್ಟು ಹಣ ಬಿಡುಗಡೆಯಾಗುವುದನ್ನು ಹೊರತುಪಡಿಸಿದರೆ ಕಾಮಗಾರಿ ನಡೆಸುವ ಉದ್ದೇಶಕ್ಕೆ ಹಣ ತೆಗೆದಿರಿಸಿಲ್ಲ. ಪ್ರತೀ ವರ್ಷ ನೀರುಗಂಟಿಗಳ ವೇತನ ಭರಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ಜಲಸಂಪನ್ಮೂಲ ಇಲಾಖೆ ಇದೆ. ಬಹುತೇಕ ನೀರುಗಂಟಿಗಳು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಅವರ ವೇತನದ ಶೇ 75ರಷ್ಟು ಪಾವತಿಗೂ ಹಣ ಸಾಕಾಗುವುದಿಲ್ಲ. ಪ್ರತೀ ವರ್ಷ ಅಂದಾಜು ₹4 ಕೋಟಿಯಷ್ಟು ಅನುದಾನ ಬಂದರೂ ಅದು ವೇತನ ಪಾವತಿಗೂ ಕೊರತೆಯಾಗುತ್ತದೆ. ಆದರೂ ಇದ್ದುದರಲ್ಲೇ ನಾಲೆಗಳ ನಿರ್ವಹಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ‘ಅನುದಾನ ಬಿಡುಗಡೆಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ ನಿರ್ವಹಣೆಗೆ ಮಾತ್ರ ಅನುದಾನ ದೊರೆಯುತ್ತಿದ್ದು ಅದೂ ಅಗತ್ಯ ಪ್ರಮಾಣದಲ್ಲಿ ಇಲ್ಲ. ದುರಸ್ತಿಗೆ ಅನುದಾನ ಬಂದ ಕೂಡಲೇ ನಾಲೆಗಳ ರಿಪೇರಿ ಕೆಲಸ ಮಾಡಲಾಗುವುದು’ ಎಂದು ನೀರಾವರಿ ನಿಗಮದ ಮಲೇಬೆನ್ನೂರು ಉಪವಿಭಾಗದ ಇಇ ಆರ್.ಬಿ. ಮಂಜುನಾಥ್ ತಿಳಿಸಿದರು.
ಆರು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಭದ್ರಾ ನಾಲೆಗಳು ಅಲ್ಲಲ್ಲಿ ಶಿಥಿಲಗೊಂಡಿದ್ದು ಸರ್ಕಾರದಿಂದ ಹಂತ ಹಂತವಾಗಿ ಅನುದಾನ ತಂದು ಅವುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. ಮಾಯಕೊಂಡ ಭಾಗದ ಶಿಥಿಲ ನಾಲೆಗಳು ಗೇಟ್ ತೂಬು ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹60 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶವಿದ್ದು ಇನ್ನುಳಿದ ₹40 ಕೋಟಿ ಅನುದಾನ ಬಿಡುಗಡೆಗೆ ಸದ್ಯದಲ್ಲೇ ಮುಖ್ಯಮಂತ್ರಿ ಒಪ್ಪಿಗೆ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಹಳೆಯ ಕಾಲದ ತೂಬು ಸೇತುವೆಗಳು ಶಿಥಿಲವಾಗಿವೆ. ನಾಲೆಯಲ್ಲಿ ಒತ್ತಡ ಹೆಚ್ಚಾದಾಗ ತೂಬುಗಳಲ್ಲಿ ಸೋರಿಕೆಯಾಗುವ ನೀರು ಪಕ್ಕದ ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾತ್ತಿದೆ. ಹೀಗಾಗಿ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಅನುದಾನ ತರುವ ಭರವಸೆಯನ್ನು ಮಾಯಕೊಂಡ ಶಾಸಕ ಬಸವಂತಪ್ಪ ಈಡೇರಿಸಿದ್ದು ಈ ಭಾಗದ ಕೃಷಿಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.