ಹೊನ್ನಾಳಿ: ‘ರಾಜ್ಯ ಸರ್ಕಾರ ಭದ್ರಾ ನಾಲೆಯ ಹತ್ತು ಅಡಿಯ ಆಳದಲ್ಲಿ ಬಂಡೆಯನ್ನು ಒಡೆದು, ನಾಲೆ ಸೀಳಿ ಕಾಮಗಾರಿ ಕೈಗೊಂಡಿದೆ. ಇದು ಸುಳ್ಳು ಎಂದು ಶಾಸಕರು ಹೇಳಿದರೆ ನಾನು ರಾಜಕೀಯವಾಗಿ ನಿವೃತ್ತಿಯಾಗಲು ಸಿದ್ಧನಿದ್ದೇನೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ಮಂಗಳವಾರ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಜಿಲ್ಲಾ ರೈತ ಒಕ್ಕೂಟದಿಂದ ಭದ್ರಾ ನಾಲಾ ಅಚ್ಚುಕಟ್ಟು ಪ್ರದೇಶದ ರೈತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಕಳೆದ ವರ್ಷ ಭದ್ರಾ ನಾಲೆಯಲ್ಲಿ ಸೋರಿಕೆಯಾಗುತ್ತಿದ್ದ ನೀರನ್ನು ಬಂದ್ ಮಾಡಿಸುವ ಮೂಲಕ ಯಶಸ್ವಿ ಹೋರಾಟ ಮಾಡಿದ್ದೆವು. ಈಗ ಭದ್ರಾ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಲು ಮುಂದಾಗಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ, ಆದರೆ ನಾಲೆಯನ್ನು ಸೀಳಿ ನೀರು ಕೊಡುವುದಕ್ಕೆ ನಮ್ಮ ವಿರೋಧವಿದೆ. ಜಾಕ್‍ವೆಲ್ ಮೂಲಕವೋ ಅಥವಾ ಹಿನ್ನೀರಿನ ಮೂಲಕವೋ ನೀರು ಕೊಡುವ ವ್ಯವಸ್ಥೆ ಮಾಡಲಿ’ ಎಂದು ಹೇಳಿದರು.
‘ಈಗ ಮಳೆಗಾಲ. ಸಾಕಷ್ಟು ನೀರು ಇದೆ. ಆದರೆ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಇರುತ್ತದೆಯೇ? ಬರಗಾಲ ಬಂತೆಂದರೆ ಅದನ್ನು ಊಹೆ ಮಾಡಲೂ ಸಾಧ್ಯವಿಲ್ಲ. ಭವಿಷ್ಯದ ದೃಷ್ಟಿಯಿಂದ ನಮ್ಮ ಹಕ್ಕೊತ್ತಾಯವನ್ನು ನಾವು ಮಂಡಿಸುತ್ತಿದ್ದೇವೆ. ಆದರೆ ನಮ್ಮ ಕ್ಷೇತ್ರದ ಶಾಸಕರು ಸೇರಿ ಚನ್ನಗಿರಿ, ಮಾಯಕೊಂಡ ಶಾಸಕರು, ಹರಿಹರದ ಮಾಜಿ ಶಾಸಕರು ರೈತರ ಪರವಾಗಿ ಹೋರಾಟ ಮಾಡದೆ ಅವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ನಾಲೆಯನ್ನು ಸೀಳಿರುವುದರಿಂದ 5 ಸಾವಿರ ಕ್ಯುಸೆಕ್ಸ್ ನೀರು ಸೋರಿಕೆಯಾಗುತ್ತಿದೆ, ಇದಕ್ಕೆ ಯಾರು ಹೊಣೆ. ನನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಬಲದಂಡೆ ನಾಲಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುತ್ತೇನೆ’ ಎಂದು ರೇಣುಕಾಚಾರ್ಯ ವಾಗ್ದಾನ ಮಾಡಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಜಿಲ್ಲೆಯ ರೈತರ ಜೀವನಾಡಿ ಭದ್ರಾ ನದಿ. ಆದ್ದರಿಂದ ರೈತರಿಗೆ ಅನ್ಯಾಯವಾಗದಂತೆ ನಾವೆಲ್ಲರೂ ಹೋರಾಟ ಮಾಡಬೇಕು’ ಎಂದರು.
ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಸವರಾಜನಾಯ್ಕ, ಲೋಕಿಕೆರೆ ನಾಗರಾಜ್, ಹರಿಹರದ ಚಂದ್ರಶೇಖರ್ ಪೂಜಾರ್, ರೈತ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೊಳೆನಹಳ್ಳಿ ಸತೀಶ್ ಮಾತನಾಡಿದರು.
ಹೊಳೆಸಿರಿಗೆರೆ ನಾಗನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಜಿ.ಪಂ. ಮಾಜಿ ಸದಸ್ಯ ಗುರುಮೂರ್ತಿ, ಅರಕೆರೆ ನಾಗರಾಜ್, ಕುಂದೂರು ಅನಿಲ್, ರಮೇಶ್‍ಗೌಡ, ಜಗದೀಶ್ ಬಣಕಾರ್, ಲತಾ ಹಾಲೇಶ್, ನೆಲಹೊನ್ನೆ ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.