ಮುಖ್ಯಮಂತ್ರಿ ಸಿದ್ದರಾಮಯ್ಯ
ದಾವಣಗೆರೆ: ಭದ್ರಾ ಬಲದಂಡೆ ನಾಲೆ ಸೀಳಿ ನಡೆಸುತ್ತಿರುವ ಕಾಮಗಾರಿಯನ್ನು ವಿರೋಧಿಸಿ ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ಜುಲೈ 14ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಿವಾಸಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
‘ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಬಲದಂಡೆ ನಾಲೆ ಸೀಳಿ ರೈತರಿಗೆ ಮರಣಶಾಸನ ಬರೆಯಲು ಹೊರಟಿದೆ. ನಮ್ಮ ಭಾಗದ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ಈಗಾಗಲೇ ಹಲವು ಹಂತದ ಹೋರಾಟಗಳನ್ನು ಮಾಡಿದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
‘ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ರೈತರ ಕಣ್ಣಿಗೆ ಮಣ್ಣೆರಚಿ ಪೊಲೀಸ್ ಭದ್ರತೆಯಲ್ಲಿ ಹಗಲು –ರಾತ್ರಿ ಕಾಮಗಾರಿ ನಡೆಸಲಾಗುತ್ತಿದೆ. ಇದು ಪ್ರಜಾತಂತ್ರದ ಕಗ್ಗೊಲೆ ಅಲ್ಲವಾ’ ಎಂದು ಪ್ರಶ್ನಿಸಿದರು.
‘ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತರಿಗಾಗಿ ಹೋರಾಟ ನಡೆಸಲಾಗುತ್ತಿದೆಯೋ ಹೊರತು, ಸ್ವಾರ್ಥಕ್ಕಾಗಿ ಅಲ್ಲ. ಪ್ರತೀ ವರ್ಷ ಜುಲೈ 10ಕ್ಕೆ ನಾಲೆಗೆ ನೀರು ಬಿಡಲಾಗುತ್ತದೆ. ಆದರೆ, ಈ ವರ್ಷ ಇನ್ನೂ ಬಿಟ್ಟಿಲ್ಲ. ವರುಣನ ಕೃಪೆಯಿಂದ ಜಲಾಶಯದಲ್ಲಿ 174 ಅಡಿ ನೀರು ಸಂಗ್ರಹವಾಗಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.