
ದಾವಣಗೆರೆ: ‘ಕರ್ನಾಟಕ ನೀರಾವರಿ ನಿಗಮದ ಭಾಗವಾಗಿರುವ ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸುವ ಮೂಲಕ ಭದ್ರಾ ಜಲಾಶಯದ ನೀರನ್ನು ಅವಲಂಬಿಸಿರುವ ಜಿಲ್ಲೆಗಳ ಪಾಲಿಗೆ ಮರಣ ಶಾಸನ ಬರೆಯಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
‘ಭದ್ರಾ ಜಲಾಶಯಕ್ಕೆ ಅಚ್ಚುಕಟ್ಟು ಪ್ರದೇಶದ ರೈತರೇ ಮಾಲೀಕರು ಹೊರತು ರಾಜ್ಯ ಸರ್ಕಾರವಲ್ಲ. ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದೆ. ಇದನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸುವ ಕೆಲಸದಿಂದ ಸರ್ಕಾರ ಹಿಂದೆ ಸರಿಯಬೇಕು’ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಕಾಂಗ್ರೆಸ್ ಸರ್ಕಾರ ರೈತರ ಹಿತಾಸಕ್ತಿ ಕಾಪಾಡುತ್ತಿಲ್ಲ. ರೈತರ ಅಭಿಪ್ರಾಯ ಪಡೆಯದೇ ಕರ್ನಾಟಕ ನೀರಾವರಿ ನಿಗಮ ಅಧೀನದ ಭದ್ರಾ ಜಲಾಶಯವನ್ನು ಬೇರ್ಪಡಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ’ ಎಂದು ದೂರಿದರು.
‘ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಆ ಪಕ್ಷದ ಮುಖಂಡರು ನಡೆಸಿದ ದೌರ್ಜನ್ಯ ಖಂಡನೀಯವಾದುದು. ಶಾಸಕ ಭರತ್ ರೆಡ್ಡಿಯನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್ ಒತ್ತಾಯಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕೆಲಸ ಮಾಡಬೇಕಾಗಿದ್ದ ಬಳ್ಳಾರಿ ಶಾಸಕ ಹಿಟ್ಲರ್ ತರಹ ಆಡಳಿತ ನಡೆಸುತ್ತಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವಕ್ಕೂ ಮಾರಕವಾದ ಬೆಳವಣಿಗೆಯಾಗಿದೆ’ ಎಂದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ್ ಕೊಳೇನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಎನ್.ಎಚ್. ಹಾಲೇಶ ನಾಯ್ಕ, ಪಂಜು ಪೈಲ್ವಾನ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.