ADVERTISEMENT

ರಾಷ್ಟ್ರೀಯ ಯೋಜನೆಯಾಗಿ ಭದ್ರಾ ನೀರಾವರಿ: ಕನಸು ನನಸು

ಶಾಸಕ ಎಸ್.ವಿ. ರಾಮಚಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 14:11 IST
Last Updated 20 ಡಿಸೆಂಬರ್ 2020, 14:11 IST
ಜಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಅವರು ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಪ್ರದೇಶದ ನೀಲಿನಕ್ಷೆಯನ್ನು ಪ್ರದರ್ಶಿಸಿದರು
ಜಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಅವರು ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಪ್ರದೇಶದ ನೀಲಿನಕ್ಷೆಯನ್ನು ಪ್ರದರ್ಶಿಸಿದರು   

ಜಗಳೂರು: ದಶಕಗಳ ಕಾಲ ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಸಮಗ್ರ ನೀರಾವರಿಯ ಕನಸು ನನಸಾಗುವಗ ಕಾಲ ಸನ್ನಿಹಿತವಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ಜಗಳೂರುಸ ಸೇರಿ 19.04 ಟಿಎಂಸಿ ನೀರಿನ ಬಳಕೆಯೊಂದಿಗೆ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ₹ 21.473 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಮಾನ್ಯತೆ ಪಡೆದ ಮೊದಲ ಯೋಜನೆಯಾಗಿದೆ. ಇದರಿಂದ ಕಾಮಗಾರಿಗೆ ಅಗತ್ಯವಾದ ಅನುದಾನ ಸರಾಗವಾಗಿ ಹರಿದು ಬರಲಿದೆ. ಕೇಂದ್ರ ಸರ್ಕಾರ ಶೇ 90 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ 10 ರಷ್ಟು ಹಣ ಭರಿಸಲಿದೆ ಎಂದು ವಿವರಿಸಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆ ಕನ್ನ ಕನಸಿನ ಯೋಜನೆಯಾಗಿದೆ. ತಾಲ್ಲೂಕನ್ನು ಯೋಜನೆ ವ್ಯಾಪ್ತಿಗೆ ಸೇರಿಸುವ ಸಲುವಾಗಿ ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದೆ. ಈ ಬಗ್ಗೆ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಹೋರಾಟ ಸಹ ಕೈಗೊಳ್ಳಲಾಗಿತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲ ಬಾರಿಗೆ ತಾಲ್ಲೂಕಿನ 18600 ಎಕರೆಗೆ ನಿರಾವರಿ ಕಲ್ಪಿಸಿ ಆದೇಶಿಸಿದ್ದರು. ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಯಲಿದ್ದು, ತಾಲ್ಲೂಕಿನ 9 ಕೆರೆಗಳಿಗೆ ನೀರು ತುಂಬಿಸಲಾಗುವುದು. ಪ್ರಸ್ತುತ ಕೇಂದ್ರ ಸರ್ಕಾರದ ಮಾನ್ಯತೆಯಿಂದ ದಶಕಗಳ ಬೇಡಿಕೆ ಸಾಕಾರಗೊಂಡಂತಾಗಿದೆ’ ಎಂದು ಹೇಳಿದರು.

ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಕೆರೆಗಳಿಗೆ ನೀರು ಹರಿಸುವ ₹ 640 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಜೂನ್ ತಿಂಗಳ ವೇಳೆಗೆ ಕೆರೆಗಳನ್ನು ಭರ್ತಿ ಮಾಡಲಾಗುವುದು. ಸಿರಿಗೆರೆ ಶ್ರೀಗಳ ಮಾರ್ಗದರ್ಶನ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಹಕಾರದಿಂದ ಕೆರೆಗಳು ಮೈದುಂಬಲಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ಈ ಯೋಜನೆ ಸೇರಿಸಿ ₹ 240 ಕೋಟಿ ಮೀಸಲಿಟ್ಟಿದ್ದರು. ಆದರೆ ನಂತರ ಬಂದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಿರ್ಲಕ್ಷ್ಯದಿಂದ ಯೋಜನೆ ಸ್ಥಗಿತವಾಗಿತ್ತು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆ ವೆಚ್ಚವನ್ನು ₹ 640 ಕೋಟಿಗೆ ಹೆಚ್ಚಿಸಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಕೆ. ಮಂಜುನಾಥ್, ಶಾಂತಕುಮಾರಿ, ಮಾಜಿ ಸದಸ್ಯ ಎಚ್. ನಾಗರಾಜ್ ಹಾಗೂ ಡಿ.ವಿ. ನಾಗಪ್ಪ, ಬಿದರಕೆರೆ ರವಿಕುಮಾರ್, ಸಿದ್ದೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.