
ಜಗಳೂರು: ತಾಲ್ಲೂಕಿನ ಪಾಲಿಗೆ ಮಹತ್ವದ್ದಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಿಡಿಗಾಸೂ ನೀಡದೇ ಅನ್ಯಾಯ ಎಸಗಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಆರೋಪಿಸಿದರು.
ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮ ಸೇರಿದಂತೆ ವಿವಿಧ ಹಳ್ಳಿಗಳ ವ್ಯಾಪ್ತಿಯಲ್ಲಿ ₹16.30 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ಹಾಗೂ ಕ್ಲೋರಿನೇಷನ್ ಘಟಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಇಲ್ಲಿನ 9 ಕೆರೆಗಳು ಸೇರಿದ್ದು, 48,000 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದ್ದು, ಬರದನಾಡು ಬಂಗಾರದ ನಾಡಾಗುವ ಕಾಲ ಸನ್ನಿಹಿತವಾಗಿದೆ ಎಂದರು.
‘ಸ್ವಾತಂತ್ರ್ಯ ದೊರೆತು 7 ದಶಕ ಕಳೆದಿದ್ದರೂ ಯಾರೊಬ್ಬರೂ ತಿರುಗಿ ನೋಡದ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಸೇರಿದಂತೆ ಕುಗ್ರಾಮಗಳ ರಸ್ತೆ ಅಭಿವೃದ್ಧಿ ಮಾಡಿದ್ದೇವೆ. ಇನ್ನೂ ಹೆಚ್ಚಿನ ಅನುದಾನ ತಂದು ಪ್ರತಿ ಹಳ್ಳಿಯನ್ನು ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಶೇ 33ರಷ್ಟು ಪ್ರಗತಿಯಾಗಿದೆ. 38ರಲ್ಲಿ 25 ಪಂಪ್‌ಹೌಸ್ ನಿರ್ಮಾಣ ಪ್ರಗತಿಯಲ್ಲಿವೆ. ಗೋನೂರು ಬಳಿ ಕಾಮಗಾರಿ ನಡೆಯುವ ಸ್ಥಳದಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ’ ಎಂದು ವಿಶ್ವೇಶ್ವರಯ್ಯ ಜಲನಿಗಮದ ಎಂಜಿನಿಯರ್ ಆಫ್ರೀನ್ ಮಾಹಿತಿ ನೀಡಿದರು.
‘24X7 ಕುಡಿಯುವ ನೀರು ಪೂರೈಕೆ ಯೋಜನೆಯಡಿ ತಾಲ್ಲೂಕಿನ 10 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಗುಣಮಟ್ಟದ ಪೈಪ್‌ಲೈನ್ ಕಾಮಗಾರಿಗೆ ಜನರು ಸಹಕರಿಸಬೇಕು. ಹಿಂದಿನ ವರ್ಷಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಿ ಖಾಸಗಿ ಬೋರ್‌ವೆಲ್, ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಿದ್ದನ್ನು ಯಾರೂ ಮರೆಯಬಾರದು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಕಿವಿಮಾತು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ಗ್ರಾಮೀಣ ನೀರು ಸರಬರಾಜು ಇಲಾಖೆ ಇಇ ಸೋಮ್ಲಾನಾಯ್ಕ, ಎಇಇ ಸಾದಿಕ್ ಉಲ್ಲಾ, ಭದ್ರಾ ಮೇಲ್ದಂಡೆ ಯೋಜನೆ ಎಇಇ ಚಂದ್ರಶೇಖರ್, ಕೆಐಆರ್‌ಡಿಎಲ್ ಎಇಇ ಶಿವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಪಿಡಿಒ ಅರವಿಂದ್, ಮುಖಂಡರಾದ ಪ್ರಕಾಶ್ ರೆಡ್ಡಿ, ಸುದರ್ಶನ್, ರುದ್ರೇಶ್, ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮ್ಮದ್, ಬಿ. ಮಹೇಶ್ವರಪ್ಪ, ಮಧುಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.