ADVERTISEMENT

ಭಾರತ ಬಂದ್‌ಗೆ ದಾವಣಗೆರೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಸ್ತಬ್ಧಗೊಂಡ ಕೆ.ಎಸ್‌.ಆರ್‌.ಟಿ.ಸಿ ಬಸ್‌ * ವ್ಯಾಪಾರ–ವಹಿವಾಟು ಅಬಾಧಿತ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 14:37 IST
Last Updated 8 ಜನವರಿ 2019, 14:37 IST
ಭಾರತ ಬಂದ್‌ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ದಾವಣಗೆರೆಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಭಾರತ ಬಂದ್‌ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ದಾವಣಗೆರೆಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ದಾವಣಗೆರೆ: ಮೋಟಾರು ವಾಹನ (ತಿದ್ದುಪಡಿ) ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಅಸಂಘಟಿತ ವಲಯದ ಸಾರಿಗೆ ಕಾರ್ಮಿಕರಿಗೆ ಸುರಕ್ಷತಾ ಕಾಯ್ದೆ ಜಾರಿಗೊಳಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ ಬಂದ್‌ಗೆ ಮಂಗಳವಾರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಕೆ.ಎಸ್.ಆರ್.ಟಿ.ಸಿ. ಬಸ್‌ ಸಂಚಾರ ಬಹುತೇಕ ಸ್ತಬ್ಧಗೊಂಡಿತ್ತು. ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದರೆ, ಆಟೊಗಳು ವಿರಳ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ನಗರದಲ್ಲಿ ಬಹುತೇಕ ಅಂಗಡಿಗಳು, ಹೋಟೆಲ್‌, ಪೆಟ್ರೋಲ್‌ ಬಂಕ್‌ಗಳು ವಹಿವಾಟು ನಡೆಸಿದವು. ಖಾಸಗಿ ಬಾಂಕ್‌ಗಳು ಎಂದಿನಂತೆ ವಹಿವಾಟು ನಡೆಸಿದರೆ, ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಬೆಳಿಗ್ಗೆ ಬೆರಳೆಣಿಕೆಯಷ್ಟು ಗ್ರಾಮೀಣ ಸಾರಿಗೆ ಹಾಗೂ ನಗರ ಸಾರಿಗೆ ಬಸ್‌ಗಳು ರಸ್ತೆಗಿಳಿದಿದ್ದವು. ಕೆಲ ಗಂಟೆಗಳ ಬಳಿಕ ಅವೂ ಡಿಪೊಗೆ ವಾಪಸ್‌ ಬಂದವು. ದೂರದ ಊರಿಗೆ ಹೋಗಲು ಚಾಲಕರು ಹಾಗೂ ನಿರ್ವಾಹಕರು ನಿಲ್ದಾಣಕ್ಕೆ ಬಸ್‌ಗಳನ್ನು ತಂದು ನಿಲ್ಲಿಸಿದ್ದರು. ಆದರೆ, ಪ್ರಯಾಣಿಕರು ನಿರೀಕ್ಷಿತ ಮಟ್ಟದಲ್ಲಿ ಬಾರದೇ ಇರುವುದರಿಂದ ಬಸ್ ಓಡಿಸದಿರಲು ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳು ನಿರ್ಧರಿಸಿದರು.

ADVERTISEMENT

ನಗರದಲ್ಲಿ ರಸ್ತೆಗೆ ಇಳಿದಿದ್ದ ಭಾಗಶಃ ಆಟೊ ಚಾಲಕರು ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ಎ.ಐ.ಟಿ.ಯು.ಸಿ, ಐ.ಎನ್‌.ಟಿ.ಯು.ಸಿ, ಎ.ಐ.ಯು.ಟಿ.ಯು.ಸಿ ಹಾಗೂ ಸಿ.ಐ.ಟಿ.ಯು ಕಾರ್ಯಕರ್ತರು, ಅಂಗನವಾಡಿ ಕಾರ್ಯಕತೆಯರು ಬೆಳಿಗ್ಗೆ ಜಯದೇವ ವೃತ್ತಕ್ಕೆ ಬಂದು ಸೇರಿದರು. ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಗಾಂಧಿ ಸರ್ಕಲ್‌ಗೆ ತೆರಳಿ ಬೃಹತ್‌ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರವನ್ನು ಕೆಲ ಕಾಲ ತಡೆದರು. ನಂತರ ಮೆರವಣಿಗೆಯಲ್ಲಿ ಮಹಾನಗರ ಪಾಲಿಕೆ ಆವರಣಕ್ಕೆ ಬಂದು ಬಹಿರಂಗ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಎ.ಐ.ಟಿ.ಯು.ಸಿ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ‘ದೇಶದಲ್ಲಿ ರೈತರ‌ ಹಾಗೂ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸುವಂತೆ ರೈತರು ಬೃಹತ್‌ ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ನಮ್ಮ ಹೋರಾಟ ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲ; ಜನ ವಿರೋಧಿ ನೀತಿಯ ವಿರುದ್ಧ’ ಎಂದು ತಿಳಿಸಿದರು.

ಸಿ.ಐ.ಟಿ.ಯು ಮುಖಂಡ ಕೆ.ಎಲ್‌. ಭಟ್‌ ಮಾತನಾಡಿ, ‘ಮೌನಿ ಬಾಬಾ ಬದಲು ಮಾತಿನ ಬಾಬಾ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕಾರ್ಪೊರೇಟ್‌ ಪ್ರೇಮವನ್ನು ತೋರಿಸುತ್ತಿದೆ. ಬರಿ ಒಂದೇ ಮಾತರಂ ಹೇಳುವುದು ದೇಶ ಪ್ರೇಮ ಅಲ್ಲ; ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದೂ ದೇಶ ಪ್ರೇಮವಾಗಿದೆ. ಕಾರ್ಮಿಕರ ಕಾನೂನನ್ನು ಮಾಲೀಕರ ಪರ ತರಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎ.ಐ.ಯು.ಟಿ.ಯು.ಸಿ ಮುಖಂಡ ಮಂಜುನಾಥ ಕೈದಾಳೆ, ‘ಕೇಂದ್ರ ಸರ್ಕಾರ ಕಾರ್ಮಿಕರ ನಡುವೆ ಕೋಮು ವಿಷ ಬೀಜ ಬಿತ್ತಿ ಸಂಘಟನೆಯನ್ನು ಒಡೆಯಲು ಯತ್ನಿಸುತ್ತಿದೆ. ಕೊಳ್ಳೆ ಹೊಡೆಯುವವರಿಗೇ ಬ್ಯಾಂಕ್‌ಗಳಲ್ಲಿ ಸಾಲ ಕೊಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಆವರಗೆರೆ ಚಂದ್ರು, ಆವರಗೆರೆ ವಾಸು, ಶ್ರೀನಿವಾಸ್‌ ಅವರೂ ಇದ್ದರು.

ಕೆ.ಎಸ್‌.ಆರ್‌.ಟಿ.ಸಿಗೆ ₹ 30 ಲಕ್ಷ ಹಾನಿ

ದಾವಣಗೆರೆ ಜಿಲ್ಲೆಯಲ್ಲಿ 270 ಶೆಡ್ಯೂಲ್‌ಗಳಲ್ಲಿ ಬಸ್‌ ಸಂಚರಿಸಬೇಕಾಗಿತ್ತು. ಆದರೆ, ಸುಮಾರು 150 ಶೆಡ್ಯೂಲ್‌ಗಳಲ್ಲಿ ಮಾತ್ರ ಬಸ್‌ ಓಡಿಸಲು ಸಾಧ್ಯವಾಗಿದೆ. ಬಂದ್‌ ಪರಿಣಾಮ ಅಂದಾಜು ₹ 30 ಲಕ್ಷ ಹಾನಿಯಾಗಿದೆ ಎಂದು ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ಪ್ರಯಾಣಿಕರ ಕೊರತೆ ಕಂಡು ಬಂದಿದ್ದರಿಂದ ಬಸ್‌ಗಳನ್ನು ಓಡಿಸಲಿಲ್ಲ. ಸಂಜೆಯಿಂದ ಬಹುತೇಕ ಬಸ್‌ಗಳನ್ನು ಓಡಿಸಲು ಆರಂಭಿಸಿದ್ದೇವೆ. ಬುಧವಾರ ಬೆಳಗಿನ ಅವಧಿಯಲ್ಲೂ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಇಂದು ಶಾಲೆಗೆ ರಜೆ ಇಲ್ಲ

ಜನವರಿ 9ರಂದು ಸಹ ಭಾರತ ಬಂದ್‌ಗೆ ಕರೆ ನೀಡಿದ್ದರೂ ದಾವಣಗೆರೆಯಲ್ಲಿ ಬುಧವಾರ ಶಾಲೆಗಳಿಗೆ ರಜೆ ನೀಡಲಾಗುತ್ತಿಲ್ಲ. ಎಂದಿನಂತೆ ಶಾಲೆಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.